ಹಾವೇರಿ: ಜಿಲ್ಲೆಯಲ್ಲಿ ಹರಿಯುತ್ತಿರುವ ವರದಾ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವರದಾ ನದಿಗೆ ನಿರ್ಮಿಸಿರುವ ಕೆಲ ಬಾಂದಾರಗಳು ಮುಳುಗಡೆಯಾಗಿವೆ. ಇದರಿಂದಾಗಿ ನದಿಯ ಅಕ್ಕ–ಪಕ್ಕದ ಗ್ರಾಮಗಳ ಜನರಿಗೆ ಸಂಚಾರ ಸಮಸ್ಯೆ ಎದುರಾಗಿದೆ.
ಮುಂಗಾರು ಆರಂಭವಾಗುತ್ತಿದ್ದಂತೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿತ್ತು. ಆದರೆ, ವರದಾ ನದಿಯಲ್ಲಿ ನೀರಿನ ಹರಿಯುವಿಕೆ ಕಡಿಮೆಯಿತ್ತು. ಈಗ ಶಿವಮೊಗ್ಗ ಹಾಗೂ ಸುತ್ತಮುತ್ತಲ ಜಿಲ್ಲೆಯ ಪಶ್ಚಿಮಘಟ್ಟದಲ್ಲಿ ಜೋರು ಮಳೆಯಾಗುತ್ತಿದ್ದು, ಅದೇ ನೀರು ವರದಾ ನದಿ ಮೂಲಕ ಜಿಲ್ಲೆಯಲ್ಲಿ ಹರಿಯುತ್ತಿದೆ.
ವರದಾ ನದಿಗೆ ಅಡ್ಡವಾಗಿ ಸವಣೂರು ತಾಲ್ಲೂಕಿನ ಕಳಸೂರು ಹಾಗೂ ಹಾನಗಲ್ ತಾಲ್ಲೂಕಿನ ಕೂಡಲ ಬಳಿ ಬಾಂದಾರಗಳನ್ನು ನಿರ್ಮಿಸಲಾಗಿದೆ. ವರದಾ ನದಿಯಲ್ಲಿ ನೀರು ಹೆಚ್ಚಿರುವುದರಿಂದ, ಎರಡೂ ಬಾಂದಾರಗಳು ಮುಳುಗಡೆಯಾಗಿವೆ. ಬಾಂದಾರದ ಮೂಲಕ ಜಿಲ್ಲಾ ಕೇಂದ್ರ ಹಾವೇರಿಯನ್ನು ಕೆಲ ನಿಮಿಷಗಳಲ್ಲಿ ತಲುಪುತ್ತಿದ್ದ ಗ್ರಾಮಸ್ಥರು, ಈಗ ಸುತ್ತಿ ಬಳಸಿ ಹಾವೇರಿಗೆ ಹೋಗಿ ಬರುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲಿಯೂ ಎರಡೂ ಗ್ರಾಮಗಳ ಜನರು, ಸಂಚಾರ ಸಮಸ್ಯೆ ಎದುರಿಸುತ್ತಿದ್ದಾರೆ.
ಅವೈಜ್ಞಾನಿಕ ಬಾಂದಾರ: ಸವಣೂರು ತಾಲ್ಲೂಕಿನ ಗಡಿಯಲ್ಲಿರುವ ಕಳಸೂರು ಗ್ರಾಮದಿಂದ ದೇವಗಿರಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆ ವರದಾ ನದಿಯಿದೆ. ಇದೇ ನದಿಗೆ ಅಡ್ಡವಾಗಿ ಬಾಂದಾರ ನಿರ್ಮಿಸಲಾಗಿದೆ. ಆದರೆ, ದಡದಿಂದ ದಡಕ್ಕೆ ಅತೀ ಕಡಿಮೆ ಎತ್ತರದಲ್ಲಿ ಬಾಂದಾರ ನಿರ್ಮಿಸಿರುವುದರಿಂದ ಬಹುಬೇಗನೇ ಮುಳುಗಡೆಯಾಗುತ್ತಿರುವುದಾಗಿ ಗ್ರಾಮಸ್ಥರು ದೂರುತ್ತಿದ್ದಾರೆ.
ಕಳಸೂರು ಹಾಗೂ ಕೋಳೂರು ಮಧ್ಯೆ ವರದಾ ನದಿಯಿದೆ. ಕೋಳೂರಿನಲ್ಲಿ ಕಳಸೂರು ರೈತರ ಜಮೀನುಗಳಿವೆ. ಮುಂಗಾರು ಸಂದರ್ಭದಲ್ಲಿ ರೈತರು ಜಮೀನಿಗೆ ಹೋಗಲು 25 ಕಿ.ಮೀ.ನಿಂದ 30 ಕಿ.ಮೀ. ಸಾಗಬೇಕು. ಮಳೆ ಆರಂಭಕ್ಕೂ ಮುನ್ನ ಬಿತ್ತನೆ ಮಾಡುವ ರೈತರು, ಬಾಂದಾರ ಜಲಾವೃತವಾಗುತ್ತಿದ್ದಂತೆ ಕೃಷಿ ಮೇಲಿನ ಆಸೆ ಕೈ ಬಿಡುತ್ತಿದ್ದಾರೆ. ನಿರ್ವಹಣೆ ಇಲ್ಲದೇ ಬೆಳೆಗಳು ಹಾಳಾಗಿ, ರೈತರು ನಷ್ಟ ಅನುಭವಿಸುತ್ತಿದ್ದಾರೆ.
‘ಸವಣೂರು ತಾಲ್ಲೂಕಿನ ಕಳಸೂರು ಹಾಗೂ ಸುತ್ತಮುತ್ತಲಿನ 10 ಹಳ್ಳಿಗಳ ಜನರು, ಬಾಂದಾರ ಮೂಲಕ ಹಾವೇರಿಗೆ ಹೋಗಿಬರಲು ಹತ್ತಿರವಾಗುತ್ತದೆ. ಈಗ ಬಾಂದಾರ ಮುಳುಗಡೆಯಾಗಿರುವುದರಿಂದ 25 ಕಿ.ಮೀ.ನಿಂದ 30 ಕಿ.ಮೀ.ವರೆಗೂ ಸುತ್ತಿ ಬಳಸಿ ಓಡಾಡಬೇಕು. ಇದರಿಂದ ಸಮಯವೂ ವ್ಯರ್ಥವಾಗುತ್ತಿದೆ. ದುಡ್ಡು ಹೋಗುತ್ತಿದೆ’ ಎಂದು ಗ್ರಾಮದ ಪುಟ್ಟಪ್ಪ ಹೇಳಿದರು.
‘ನಮ್ಮೂರಿನ ಹಲವರಿಗೆ ಜಮೀನಿಲ್ಲ. ಬಹುತೇಕರು ಕೂಲಿ ಕೆಲಸಕ್ಕಾಗಿ ಹಾವೇರಿಗೆ ಹೋಗುತ್ತಾರೆ. ವಿದ್ಯಾರ್ಥಿಗಳು, ಗಾರ್ಮೆಂಟ್ಸ್ ಕಾರ್ಖಾನೆ ಮಹಿಳೆಯರು ಎಲ್ಲರೂ ಬಾಂದಾರ ಮೂಲಕ ಸಂಚರಿಸುತ್ತಾರೆ. ಪ್ರತಿ ಮುಂಗಾರಿನಲ್ಲಿ ಮಳೆ ಕಡಿಮೆಯಾಗುವವರೆಗೂ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಬಾಂದಾರದ ಎತ್ತರವನ್ನು ಹೆಚ್ಚಿಸುವಂತೆ ಅಥವಾ ಮೇಲ್ಸೇತುವೆ ನಿರ್ಮಿಸುವಂತೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.
ನಿವಾಸಿ ಯಲ್ಲಪ್ಪ ಹೊಮ್ಮರಡಿ, ‘ಬಾಂದಾರ ಮುಳುಗಡೆಯಾಗುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. 3 ಕಿ.ಮೀ. ದೂರದಲ್ಲಿರುವ ದೇವಗಿರಿ ಮೂಲಕ ಹಾವೇರಿಗೆ ಹೋಗಲು ಆಗುತ್ತಿಲ್ಲ. ಕರ್ಜಗಿ, ಮೆಳ್ಳಾಗಟ್ಟಿ, ಹುರುಳಿಕುಪ್ಪಿ ಮೂಲಕ ಹಾವೇರಿಗೆ ಹೋಗಬೇಕಾದ ಸ್ಥಿತಿಯಿದೆ’ ಎಂದರು.
‘ವರದಿ ನದಿಯ ಆಚೆಗಿನ ಜಮೀನುಗಳಿಗೆ ರೈತರು ಹೋಗಲು ಸಾಧ್ಯವಾಗುತ್ತಿಲ್ಲ. ಮೇಲ್ಸೇತುವೆ ನಿರ್ಮಾಣಕ್ಕಾಗಿ ಹಲವು ವರ್ಷಗಳಿಂದ ಆಗ್ರಹಿಸುತ್ತಿದ್ದೇವೆ. ನಮ್ಮದೇ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೂ ಮೇಲ್ಸೇತುವೆ ಮಾಡಲಿಲ್ಲ. ಈಗ ಅವರು ಸಂಸದರಾಗಿದ್ದಾರೆ. ಶಾಸಕ ರುದ್ರಪ್ಪ ಲಮಾಣಿ, ಉಪ ಸಭಾಪತಿಯಾಗಿದ್ದಾರೆ. ಇಬ್ಬರೂ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದರು.
ಕೂಡಲದಲ್ಲಿ ಮೇಲ್ಸೇತುವೆ: ಹಾವೇರಿ ತಾಲ್ಲೂಕಿನ ಗಡಿ ಗ್ರಾಮ ನಾಗನೂರಿನಿಂದ ಹಾನಗಲ್ ತಾಲ್ಲೂಕಿನ ಗಡಿಗ್ರಾಮ ಕೂಡಲದ ಮಧ್ಯೆದಲ್ಲಿ ವರದಾ ನದಿ ಹರಿಯುತ್ತಿದೆ. ಈ ಪ್ರದೇಶದಲ್ಲಿ ಬಾಂದಾರ ನಿರ್ಮಿಸಲಾಗಿದ್ದು, ನದಿಯಲ್ಲಿ ನೀರು ಹೆಚ್ಚಾದಾಗ ಮುಳುಗಡೆಯಾಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮೇಲ್ಸೇತುವೆ ನಿರ್ಮಿಸಲಾಗುತ್ತಿದ್ದು, ಈ ಕಾಮಗಾರಿ ಇದುವರೆಗೂ ಮುಕ್ತಾಯಗೊಂಡಿಲ್ಲ.
‘ಮೇಲ್ಸೇತುವೆ ಕಾಮಗಾರಿ ಆರಂಭಿಸಿ ಹಲವು ವರ್ಷವಾಗಿದೆ. ಮೇಲ್ಸೇತುವೆ ಅಳತೆ ವಿಚಾರಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೆಚ್ಚಿನ ಉದ್ದದ ಮೇಲ್ಸೇತುವೆಗೆ ಆಗ್ರಹಿಸಿದರು. ಈಗ ಬೇಡಿಕೆಗೆ ತಕ್ಕಂತೆ ಮೇಲ್ಸೇತುವೆ ನಿರ್ಮಾಣ ನಡೆದಿದೆ. ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸಿ, ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರತಿ ವರ್ಷ ಸಂಚಾರ ಸಮಸ್ಯೆ ಅನುಭವಿಸಿ ಸಾಕಾಗಿದೆ. ಇನ್ನಾದರೂ ಜನಪ್ರತಿನಿಧಿಗಳು–ಅಧಿಕಾರಿಗಳು ಮೇಲ್ಸೇತುವೆ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಬೇಕುರಮೇಶ ಉಳ್ಳಾಗಡ್ಡಿ ಕಳಸೂರು ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.