ಹಾವೇರಿ ತಾಲ್ಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ಬಾಲಕನೊಬ್ಬ ತಳ್ಳುಗಾಡಿಯಲ್ಲಿ ನೀರಿನ ಕೊಡಗಳನ್ನು ಕೊಂಡೊಯ್ಯುತ್ತಿರುವುದು
–ಪ್ರಜಾವಾಣಿ ಚಿತ್ರ / ಮಹಾಂತೇಶ ಇಚ್ಚಂಗಿ
ಹಾವೇರಿ: ತಾಲ್ಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ಬೇಸಿಗೆ ಆರಂಭದ ದಿನಗಳಲ್ಲಿಯೇ ನೀರಿನ ಸಮಸ್ಯೆ ಎದುರಾಗಿದೆ. ಸ್ಥಳಿಯ ಹಲವು ನಿವಾಸಿಗಳು, ನೀರಿಗಾಗಿ ಓಣಿ ಓಣಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮದ ಹಲವರಿಗೆ ನೀರು ತರುವುದೇ ಕಾಯಕವಾಗಿದೆ.
ಗ್ರಾಮದಲ್ಲಿರುವ ಕೊಳವೆ ಬಾವಿ ನಿರ್ವಹಣೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ವಿಫಲವಾಗಿದ್ದು, ಇದರ ಪರಿಣಾಮವಾಗಿ ಜನರು ತೊಂದರೆ ಅನುಭವಿಸುತ್ತಿದ್ದಾರೆ. ನಿತ್ಯವೂ ಬೆಳಿಗ್ಗೆಯಿಂದ ರಾತ್ರಿಯವರೆಗೂ ಅಗತ್ಯವಿರುವ ನೀರು ತರಲು, ಕಿ.ಮೀ.ಗಟ್ಟಲೇ ಅಲೆದಾಡುತ್ತಿದ್ದಾರೆ. ಗ್ರಾಮದಲ್ಲಿರುವ ಪ್ಲಾಟ್ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ 150ಕ್ಕೂ ಹೆಚ್ಚು ಮನೆಗಳಿವೆ. ಈ ಮನೆಗಳಿಗೆ ನಳದ ಸಂಪರ್ಕವನ್ನೂ ನೀಡಲಾಗಿದೆ. ಆದರೆ, ಇದುವರೆಗೂ ನೀರು ಬಂದಿಲ್ಲ. ಈ ಪ್ರದೇಶಕ್ಕೆ ಸಮೀಪದಲ್ಲಿ ನಾಲ್ಕು ಕೊಳವೆ ಬಾವಿಗಳಿದ್ದು, ಅವುಗಳ ಉಪಯೋಗಕ್ಕೆ ಬಾರದಂತಾಗಿವೆ.
ಎರಡು ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, ಪಂಪ್ ಮೋಟರ್ ಇಳಿಸಿಲ್ಲ. ಇನ್ನೆರಡು ಕೊಳವೆಬಾವಿಗಳಿಗೆ ಮೇಲ್ಸೇತುವೆ ಕಾಮಗಾರಿ ಹೆಸರಿನಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಈ ನಾಲ್ಕು ಕೊಳವೆ ಬಾವಿಗಳಿಂದ ನೀರು ಬಾರದಿದ್ದರಿಂದಾಗಿ, ನೀರಿನ ಸಮಸ್ಯೆ ಉಲ್ಭಣಿಸಿದೆ.
ಗ್ರಾಮದ ಹಲವು ಓಣಿಗಳಲ್ಲಿಯೂ ಕೊಳವೆಬಾವಿಗಳನ್ನು ಕೊರೆಸಲಾಗಿದ್ದು, ಅಲ್ಲಿ ನೀರು ಬರುತ್ತಿದೆ. ಅಲ್ಲಿಯೇ ಜನರು ನೀರು ತುಂಬಿಕೊಳ್ಳುತ್ತಿದ್ದಾರೆ. ಇದೀಗ ಬೇರೆ ಓಣಿಯ ಜನರು ನೀರು ತರಲು ಬರುತ್ತಿರುವುದರಿಂದ ಸ್ಥಳೀಯರಿಂದ ಆಕ್ಷೇಪಗಳೂ ಉಂಟಾಗುತ್ತಿವೆ.
‘ಬಮ್ಮನಕಟ್ಟಿ ಗ್ರಾಮದ ಬಹುತೇಕ ಓಣಿಗಳಿಗೆ ಕೊಳವೆಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಪ್ಲಾಟ್ ಹಾಗೂ ಸುತ್ತಮುತ್ತಲಿನ ಸ್ಥಳಗಳಲ್ಲಿ ನಾಲ್ಕು ತಿಂಗಳಿನಿಂದ ನೀರಿನ ಸರಬರಾಜು ಆಗಿಲ್ಲ. ಈ ಭಾಗದ ಜನರು, ನೀರಿಗಾಗಿ ಕೊಡ ಹಿಡಿದು ದೂರದ ಓಣಿಗಳಿಗೆ ಹೋಗಿ ಬರುತ್ತಿದ್ದಾರೆ’ ಎಂದು ಗ್ರಾಮಸ್ಥ ಯಲ್ಲಪ್ಪ ಹೇಳಿದರು.
‘ನೀರಿನ ಸಮಸ್ಯೆ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸದಸ್ಯರಿಗೆ ತಿಳಿಸಲಾಗಿದೆ. ಅಷ್ಟಾದರೂ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಬೇಸಿಗೆಯ ಬಿಸಿ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ನೀರಿನ ಸಮಸ್ಯೆ ಉಂಟಾಗಲಿದೆ. ಕೂಡಲೇ ನಮ್ಮೂರಿನ ನೀರಿನ ಸಮಸ್ಯೆಗೆ ಪರಿಹಾರ ಸೂಚಿಸಬೇಕು’ ಎಂದು ಅವರು ಆಗ್ರಹಿಸಿದರು.
ತಳ್ಳುಗಾಡಿಯಲ್ಲಿ ಕೊಡ: ‘ಮನೆಯ ಎದುರಿನ ನಳದಲ್ಲಿ ನೀರು ಬರುತ್ತಿಲ್ಲ. ಮನೆ ಸಮೀಪದಲ್ಲಿ ಕೊಳವೆಬಾವಿಗಳಿವೆ. ಅವುಗಳಿಂದಲೂ ನೀರು ಬರುತ್ತಿಲ್ಲ. ಅನಿವಾರ್ಯವಾಗಿ ತಳ್ಳುಗಾಡಿಗಳಲ್ಲಿ ಕೊಡಗಳನ್ನು ಇಟ್ಟುಕೊಂಡು ಬೇರೆ ಓಣಿಗಳಿಗೆ ಹೋಗಿ ನೀರು ತರುತ್ತಿದ್ದೇವೆ’ ಎಂದು ಸ್ಥಳೀಯ ಮಹಿಳೆಯರು ಹೇಳಿದರು.
‘ಕುಡಿಯಲು, ಸ್ನಾನಕ್ಕೆ, ಬಟ್ಟೆ ತೊಳೆಯಲು, ಶೌಚಾಲಯ ಹಾಗೂ ಇತರೆ ಕೆಲಸಗಳಿಗೆ ನೀರು ಅತ್ಯಗತ್ಯ. ಒಂದು ಮನೆಗೆ ದಿನಕ್ಕೆ 15ರಿಂದ 20 ಕೊಡ ನೀರು ಬೇಕು. ನಮ್ಮ ಓಣಿಯಲ್ಲಿ ನೀರು ಸಿಗುತ್ತಿಲ್ಲ. ಹೀಗಾಗಿ, ದೂರದ ಓಣಿಗಳಿಗೆ ಹೋಗಿ ನೀರು ತರುತ್ತಿದ್ದೇವೆ’ ಎಂದು ಅವರು ಅಳಲು ತೋಡಿಕೊಂಡರು.
ಜಾತ್ರೆಗೂ ಮುನ್ನ ನೀರು ನೀಡಿ: ಬಮ್ಮನಕಟ್ಟಿ ಗ್ರಾಮದಲ್ಲಿ ಮಾರ್ಚ್ 30ರಿಂದ ಜಾತ್ರೆ ನಡೆಯಲಿದೆ. ನೆಂಟರು ಹಾಗೂ ಪರಿಚಯಸ್ಥರು ಊರಿಗೆ ಬರಲಿದ್ದಾರೆ. ಜಾತ್ರೆಗೂ ಮುನ್ನವೇ ಎಲ್ಲ ಮನೆಗಳಿಗೆ ನೀರು ಸರಬರಾಜು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.
‘ಜಲಜೀವನ್ ನಳದಲ್ಲಿ ನೀರಿಲ್ಲ’
ಬಮ್ಮನಕಟ್ಟಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಳಗಳನ್ನು ಅಳವಡಿಸಲಾಗಿದೆ. ಆದರೆ ನಳಗಳು ಹಾಳಾಗಿವೆ. ಹಲವು ಮನೆಗಳ ಎದುರು ನಳಗಳಿದ್ದು ನೀರು ಸರಬರಾಜು ಆಗುತ್ತಿಲ್ಲ. ಈ ಬಗ್ಗೆಯೂ ಅಧಿಕಾರಿಗಳಿಗೆ ಜನರು ದೂರು ನೀಡಿದ್ದಾರೆ. ಈ ಹಿಂದೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ನಳಗಳ ಪರಿಶೀಲನೆ ನಡೆಸಿತ್ತು. ಆದರೆ ಪರಿಹಾರ ಮಾತ್ರ ಜನರಿಗೆ ದೊರಕಿಲ್ಲ. ‘ಗ್ರಾಮೀಣ ಭಾಗದ ಮನೆಗಳಿಗೆ ನೀರು ನೀಡುವ ಜಲಜೀವನ್ ಮಿಷನ್ ಯೋಜನೆ ಅರ್ಥಪೂರ್ಣವಾಗಿದೆ. ಆದರೆ ಯೋಜನೆಯನ್ನು ಪ್ರಾಮಾಣಿಕವಾಗಿ ಅನುಷ್ಠಾನಗೊಳಿಸಬೇಕು. ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಸರಿಪಡಿಸಿ ಮನೆ ಮನೆಗೆ ನೀರು ಬರುವಂತೆ ಮಾಡಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.