
ಹಾವೇರಿ: ಪಶ್ಚಿಮ ಪದವೀಧರರ ಮತಕ್ಷೇತ್ರದ ಚುನಾವಣೆ ಕಾವು ಹೆಚ್ಚುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಈಗಾಗಲೇ ಪ್ರಚಾರ ಆರಂಭಿಸಿದ್ದಾರೆ.
ಧಾರವಾಡ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿ ಒಳಗೊಂಡಿರುವ ಈ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಎಸ್.ವಿ. ಸಂಕನೂರ ಜಯ ಗಳಿಸಿದ್ದರು. ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ತಮ್ಮದಾಗಿಸಿಕೊಳ್ಳಲು ಆಡಳಿತ ಪಕ್ಷ ಕಾಂಗ್ರೆಸ್ ಬಿರುಸಿನ ತಯಾರಿ ನಡೆಸಿದೆ.
ಈ ಕ್ಷೇತ್ರದಲ್ಲಿ ಹಿಂದಿನ ಮೂರು ಅವಧಿಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಮೋಹನ ಲಿಂಬಿಕಾಯಿ ಸಹ ಇದೇ ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದಿದ್ದರು.
ಲಿಂಬಿಕಾಯಿ ಆಯ್ಕೆಗೆ ಸ್ವಪಕ್ಷದಲ್ಲೇ ಆಕ್ಷೇಪ ವ್ಯಕ್ತವಾಗುತ್ತಿದೆ. ‘ಪಕ್ಷದಲ್ಲಿರುವವರನ್ನು ಬಿಟ್ಟು, ಬಿಜೆಪಿಯಿಂದ ಬಂದವರಿಗೆ ಟಿಕೆಟ್ ನೀಡಲಾಗಿದೆ’ ಎಂದು ಆಕಾಂಕ್ಷಿಗಳು ಬೇಸರ ಹೊರಹಾಕಿದ್ದಾರೆ. ಕೆಪಿಸಿಸಿ ಶಿಕ್ಷಕರ ಹಾಗೂ ಪದವೀಧರರ ಘಟಕದ ಅಧ್ಯಕ್ಷರಾಗಿದ್ದ ಆರ್.ಎಂ. ಕುಬೇರಪ್ಪ, ಹಾವೇರಿಯ ರಾಘವೇಂದ್ರ ಬಾಸೂರು ಬಹಿರಂಗವಾಗಿಯೇ ಅಭ್ಯರ್ಥಿ ಬದಲಾವಣೆಗೆ ಒತ್ತಾಯಿಸಿದ್ದಾರೆ.
ಆಕಾಂಕ್ಷಿಗಳಾದ ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ನ ರಾಷ್ಟ್ರೀಯ ಘಟಕದ ಅಧ್ಯಕ್ಷ ಬಸವರಾಜ ಗುರಿಕಾರ, ರಾಜು ಕುನ್ನೂರು, ರಾಜೇಶ್ವರಿ ಪಾಟೀಲ ಸಹ ಅಸಮಾಧಾನಗೊಂಡಿದ್ದಾರೆ.
ಇನ್ನೂ ಬಿಜೆಪಿ ಅಭ್ಯರ್ಥಿ ಘೋಷಣೆ ಬಾಕಿಯಿದೆ. ಹಾಲಿ ಸದಸ್ಯ ಎಸ್.ವಿ. ಸಂಕನೂರು, ಬಿಜೆಪಿ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಹಾಗೂ ರಾಜ್ಯ ಬಿಜೆಪಿ ಪ್ರಕೋಷ್ಠಗಳ ಸಹ ಸಂಯೋಜಕ ಭೋಜರಾಜ ಕರೂದಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.
ಜೆಡಿಎಸ್ ಪಕ್ಷದಿಂದಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ತಯಾರಿ ನಡೆದಿದೆ. ಶಿವಶಂಕರ ಕಲ್ಲೂರ ಹಾಗೂ ವೆಂಕನಗೌಡ್ರ ಗೋವಿಂದಗೌಡ್ರ ಹೆಸರು ಪ್ರಸ್ತಾಪವಾಗಿವೆ.
ಮತಕ್ಷೇತ್ರದ ಮತದಾರರ ಪಟ್ಟಿ ಸಿದ್ಧಪಡಿಸುವ ಕೆಲಸ ಶುರುವಾಗುತ್ತಿದ್ದಂತೆ, ಶಿಕ್ಷಕರೇ ಮೊದಲಿಗರಾಗಿ ನೋಂದಣಿ ಮಾಡಿಸಿದ್ದಾರೆ. ಮತದಾರರ ಪೈಕಿ ಶೇ 40ರಿಂದ 60ರಷ್ಟು ಶಿಕ್ಷಕರಿದ್ದಾರೆ. ಹೀಗಾಗಿ, ಮತದಾನದಲ್ಲಿ ಶಿಕ್ಷಕರ ಪಾತ್ರವೇ ಪ್ರಮುಖವಾಗಿರುವುದಾಗಿ ಆಕಾಂಕ್ಷಿಗಳು ಹೇಳುತ್ತಿದ್ದಾರೆ.
ಕಾಂಗ್ರೆಸ್ ಆಕಾಂಕ್ಷಿಯಾಗಿದ್ದ ಬಸವರಾಜ ಗುರಿಕಾರ ಅವರು ಶಿಕ್ಷಕರಾಗಿದ್ದವರು. ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ನ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಬಹುಪಾಲು ಶಿಕ್ಷಕರ ಬೆಂಬಲವಿದೆ. ಆದರೆ, ಗುರಿಕಾರ ಅವರಿಗೆ ಟಿಕೆಟ್ ಕೈ ತಪ್ಪಿದೆ. ಪಕ್ಷೇತರರಾಗಿ ಕಣಕ್ಕೆ ಇಳಿಯುವಂತೆ ಶಿಕ್ಷಕರು ಒತ್ತಾಯಿಸುತ್ತಿದ್ದಾರೆ. ಕಳೆದ ಬಾರಿ ಗುರಿಕಾರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರಿಂದ, ಮತಗಳ ವಿಭಜನೆಯಾಗಿ ಕಾಂಗ್ರೆಸ್‌ಗೆ ಸೋಲಾಗಿದೆ. ಇದೇ ಕಾರಣಕ್ಕೆ ಗುರಿಕಾರ ಮನವೋಲಿಸಲು ವರಿಷ್ಠರು ಪ್ರಯತ್ನಿಸುತ್ತಿದ್ದಾರೆ.
ನಾವೆಲ್ಲರೂ ಕಾಂಗ್ರೆಸ್ ಕಾರ್ಯಕರ್ತರು. ಕಾಂಗ್ರೆಸ್ ಗೆಲ್ಲಿಸುವುದೇ ನಮ್ಮ ಗುರಿ. ಎಲ್ಲರನ್ನೂ ಪಕ್ಷದ ವರಿಷ್ಠರು ಸಮಾಧಾನಪಡಿಸುತ್ತಾರೆಮೋಹನ ಲಿಂಬಿಕಾಯಿ ಕಾಂಗ್ರೆಸ್ ಅಭ್ಯರ್ಥಿ
ಶಾಸಕರು ಹಾಗೂ ಮುಖಂಡರ ಅಭಿಪ್ರಾಯ ಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ. ಏನೇ ಗೊಂದಲವಿದ್ದರೂ ಬಗೆಹರಿಸಿಕೊಳ್ಳಲಾಗುವುದು. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವುದೊಂದೇ ನಮ್ಮ ಗುರಿಸಲೀಂ ಅಹ್ಮದ್ ವಿಧಾನಪರಿಷತ್‌ನ ಕಾಂಗ್ರೆಸ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.