
ಬಸವರಾಜ ಗುರಿಕಾರ, ಮೋಹನ್ ಲಿಂಬಿಕಾಯಿ, ಕುಬೇರಪ್ಪ
ಹಾವೇರಿ: ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಲು ಮೋಹನ್ ಲಿಂಬಿಕಾಯಿ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಕೆಲ ಆಕಾಂಕ್ಷಿಗಳು ಪಕ್ಷೇತರ ಸ್ಪರ್ಧೆ ಬಗ್ಗೆ ಚರ್ಚೆ ಶುರು ಮಾಡಿದ್ದಾರೆ.
ಹಾವೇರಿ, ಗದಗ, ಉತ್ತರ ಕನ್ನಡ ಹಾಗೂ ಧಾರವಾಡ ಜಿಲ್ಲೆ ವ್ಯಾಪ್ತಿ ಒಳಗೊಂಡು ಪದವೀಧರರ ಪಶ್ಚಿಮ ಮತಕ್ಷೇತ್ರವನ್ನು ರಚಿಸಲಾಗಿದೆ. ಈಗಾಗಲೇ 88,087 ಮತದಾರರ ನೋಂದಣಿಯಾಗಿದೆ.
ಹಾವೇರಿ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಬಿಜೆಪಿ ಮುಕ್ತವಾಗಿರುವ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಆಕಾಂಕ್ಷಿಗಳಿಗೆ ಟಿಕೆಟ್ ಸಿಗುವ ನಿರೀಕ್ಷೆಯಿತ್ತು. ಹೀಗಾಗಿ, ಎಲ್ಲರೂ ಪದವೀಧರರ ನೋಂದಣಿ ಹಾಗೂ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ಟಿಕೆಟ್ ಸಿಗುವ ನಿರೀಕ್ಷೆ ಹುಸಿಯಾಗಿದೆ.
ಧಾರವಾಡ ಜಿಲ್ಲೆಯ ಮೋಹನ್ ಲಿಂಬಿಕಾಯಿ ಅವರು ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡವರು. ಅವರಿಗೆ ಟಿಕೆಟ್ ನೀಡಿದ್ದಕ್ಕೆ ಕೆಲ ಆಕಾಂಕ್ಷಿಗಳು ಬೇಸರ ಹೊರಹಾಕಿದ್ದು, ವರಿಷ್ಠರಿಗೂ ಮಾಹಿತಿ ನೀಡಿದ್ದಾರೆ.
ಹಾವೇರಿ ಜಿಲ್ಲೆಯಿಂದ ಮುಖಂಡ ಆರ್.ಎಂ. ಕುಬೇರಪ್ಪ, ರಾಘವೇಂದ್ರ ಬಾಸೂರು, ರಾಜು ಕುನ್ನೂರು (ಮಾಜಿ ಸಂಸದ ಮಂಜುನಾಥ ಕುನ್ನೂರು ಮಗ), ರಾಜೇಶ್ವರಿ ಪಾಟೀಲ ಅವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಟಿಕೆಟ್ ಕೈತಪ್ಪಿದ್ದಕ್ಕೆ ನಾಲ್ವರೂ ಆಕಾಂಕ್ಷಿಗಳು ಅಸಮಾಧಾನಗೊಂಡಿದ್ದು, ಬೆಂಬಲಿಗರ ಜೊತೆ ಸಭೆಗಳನ್ನು ನಡೆಸುತ್ತಿದ್ದಾರೆ.
2020ರ ಚುನಾವಣೆಯಲ್ಲಿ ಕುಬೇರಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಕೆಪಿಸಿಸಿ ಶಿಕ್ಷಕರ ಹಾಗೂ ಪದವೀಧರರ ಘಟಕದ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಕುಬೇರಪ್ಪ ಒಬ್ಬರೇ, ಸ್ಪರ್ಧೆಗೆ ಇಳಿದು ಸೋತಿದ್ದರು. ಈ ಬಾರಿ 28ರಲ್ಲಿ 18 ಕಾಂಗ್ರೆಸ್ ಶಾಸಕರಿದ್ದಾರೆ. ಇಂಥ ಸಂದರ್ಭದಲ್ಲಿ ಟಿಕೆಟ್ ಸಿಗದಿದ್ದಕ್ಕೆ ಕುಬೇರಪ್ಪ ಅಸಮಾಧಾನಗೊಂಡಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರೆಯೆ? ಎಂಬ ಚರ್ಚೆ ಶುರುವಾಗಿದೆ.
‘ಬಿಜೆಪಿಯಲ್ಲಿದ್ದ ಸಂದರ್ಭದಲ್ಲಿ ಮೋಹನ ಲಿಂಬಿಕಾಯಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. ಕ್ಷೇತ್ರದಲ್ಲಿ ಅವರ ವರ್ಚಸ್ಸಿದೆ. ಬಿಜೆಪಿ ತೆಕ್ಕೆಯಲ್ಲಿರುವ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲಬೇಕಿದೆ. ಹೀಗಾಗಿ, ಗೆಲುವು ಪ್ರಮಾಣ ಹೆಚ್ಚಿರುವ ಕಾರಣಕ್ಕೆ ಲಿಂಬಿಕಾಯಿ ಅವರಿಗೆ ಟಿಕೆಟ್ ನೀಡಲಾಗಿದೆ’ ಎಂದು ಪಕ್ಷದ ವರಿಷ್ಠರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಟಿಕೆಟ್ ವಿಷಯದಲ್ಲಿ ಕೆಲವರಿಗೆ ಅಸಮಾಧಾನವಿದೆ. ಆಕಾಂಕ್ಷಿಗಳ ಜೊತೆ ವರಿಷ್ಠರು ಮಾತನಾಡಲಿದ್ದಾರೆ. ಎಲ್ಲರೂ ಸೇರಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಆರಂಭಿಸಿದ್ದೇವೆ
-ಸಂಜೀವಕುಮಾರ ನೀರಲಗಿ ಹಾವೇರಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ
–––––
‘40 ವರ್ಷ ರಾಜಕೀಯ: ಅಹಿಂದಕ್ಕೆ ಅನ್ಯಾಯ’: ಕುಬೇರಪ್ಪ
‘ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 40 ವರ್ಷಗಳಿಂದ ದುಡಿಯುತ್ತಿದ್ದೇನೆ. ಅಧಿಕಾರ ಇಲ್ಲದ ಸಂದರ್ಭದಲ್ಲೂ ಪಕ್ಷದ ಜೊತೆಗಿದ್ದೆ. ಅಹಿಂದ ಸಂಘಟನೆಗೆ ಬುನಾದಿ ಹಾಕಿದ್ದೇನೆ. ಈಗ ಕಾಂಗ್ರೆಸ್ ಟಿಕೆಟ್ ಸಿಗದಿರುವುದು ತುಂಬಾ ನೋವಾಗಿದೆ. ಅಹಿಂದ ವರ್ಗದ ನಾಯಕನಾದ ನನಗೆ ಕಾಂಗ್ರೆಸ್ ವರಿಷ್ಠರು ಅನ್ಯಾಯ ಮಾಡಿದ್ದಾರೆ’ ಎಂದು ಆಕಾಂಕ್ಷಿ ಆರ್.ಎಂ. ಕುಬೇರಪ್ಪ ಆಕ್ರೋಶ ಹೊರಹಾಕಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘2020ರಲ್ಲಿ ಕೇವಲ ಮೂವರು ಕಾಂಗ್ರೆಸ್ ಶಾಸಕರಿದ್ದಾಗ ಚುನಾವಣೆಗೆ ಸ್ಪರ್ಧಿಸಿ ಹೆಚ್ಚಿನ ಮತಗಳನ್ನು ಪಡೆದಿದ್ದೆ. ಈಗ ಹೆಚ್ಚಿನ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ನನಗೆ ಟಿಕೆಟ್ ಕೊಟ್ಟಿದ್ದರೆ ಶೇ 100ರಷ್ಟು ಗೆಲುವು ಖಚಿತ’ ಎಂದರು. ‘ಕಾಂಗ್ರೆಸ್ ಕಾರ್ಯಕರ್ತರಿಗೆ ಮುಖ ಪರಿಚಯ ಇಲ್ಲದ ಹಾಗೂ ಹೊರಗಡೆಯಿಂದ ಬಂದವರಿಗೆ ಟಿಕೆಟ್ ಕೊಡಲಾಗಿದೆ. ಟಿಕೆಟ್ ವಿಚಾರದಲ್ಲಿ ಸಾಮಾಜಿಕ ನ್ಯಾಯ ನೀಡಿಲ್ಲ. ಪಕ್ಷಕ್ಕಾಗಿ ದುಡಿದ ನನ್ನನ್ನು ಕಡೆಗಣಿಸಲಾಗಿದೆ. ಬೆಂಬಲಿಗರ ಜೊತೆ ಸಭೆ ಮಾಡಿ ಸದ್ಯದಲ್ಲೇ ನನ್ನ ನಡೆ ಪ್ರಕಟಿಸುವೆ’ ಎಂದು ಹೇಳಿದರು.
ಗುರಿಕಾರ ಪಕ್ಷೇತರ ಸ್ಪರ್ಧೆಗೆ ಒತ್ತಾಯ?
ಧಾರವಾಡ ಜಿಲ್ಲೆಯಿಂದ ಬಸವರಾಜ ಗುರಿಕಾರ, ಸಲ್ಲುಖಾನ್ ಪಠಾಣ, ಎಸ್.ಜಿ. ಸೊನೆಖಾನ್ ಅರ್ಜಿ ಸಲ್ಲಿಸಿದ್ದರು. ಇವರೆಲ್ಲರೂ ಈಗ ಅತೃಪ್ತರಾಗಿದ್ದಾರೆ. ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ನ ರಾಷ್ಟ್ರೀಯ ಘಟಕದ ಅಧ್ಯಕ್ಷರಾಗಿರುವ ಬಸವರಾಜ ಗುರಿಕಾರ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಹೆಚ್ಚಿನ ಮತ ಪಡೆದಿದ್ದರು. ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲುವು ತಮ್ಮದಾಗುವುದಾಗಿ ವರಿಷ್ಠರಿಗೆ ತಿಳಿಸಿದ್ದರು. ಅವರಿಗೂ ಟಿಕೆಟ್ ಕೈತಪ್ಪಿದೆ. ಮತದಾರರಲ್ಲಿ ಸರ್ಕಾರಿ ನೌಕರರು ಅತ್ಯಧಿಕ ಸಂಖ್ಯೆಯಲ್ಲಿದ್ದು ಅವರ ಜೊತೆ ಗುರಿಕಾರ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಅವರು ಪಕ್ಷೇತರರಾಗಿ ಸ್ಪರ್ಧಿಸಿದರೆ ಮತಗಳು ವಿಭಜನೆಗೊಂಡು ಕಳೆದ ಚುನಾವಣೆ ರೀತಿಯಲ್ಲಿ ಕಾಂಗ್ರೆಸ್‌ಗೆ ಸೋಲು ಖಚಿತವೆಂಬ ಚರ್ಚೆ ನಡೆಯುತ್ತಿದೆ. ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆಯೂ ಬೆಂಬಲಿಗರು ಗುರಿಕಾರ ಅವರನ್ನು ಒತ್ತಾಯಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.