ADVERTISEMENT

ಹಾನಗಲ್ | ಕಾಡುಪ್ರಾಣಿ ಬೇಟೆಗೆ ಯತ್ನ: ನಾಲ್ಕು ಜನರ ಮೇಲೆ ಪ್ರಕರಣ, ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 3:50 IST
Last Updated 28 ನವೆಂಬರ್ 2025, 3:50 IST
ಹಾನಗಲ್ ತಾಲ್ಲೂಕು ಮಕರವಳ್ಳಿ ಅರಣ್ಯ ಭಾಗದಲ್ಲಿ ಕಾಡುಪ್ರಾಣಿಗಳ ಬೇಟೆಗೆ ಯತ್ನಿಸಿದವರನ್ನು ಬಂಧಿಸಿ ಅವರಿಂದ ಬಂದೂಕು ವಶಕ್ಕೆ ಪಡೆಯಲಾಗಿದೆ
ಹಾನಗಲ್ ತಾಲ್ಲೂಕು ಮಕರವಳ್ಳಿ ಅರಣ್ಯ ಭಾಗದಲ್ಲಿ ಕಾಡುಪ್ರಾಣಿಗಳ ಬೇಟೆಗೆ ಯತ್ನಿಸಿದವರನ್ನು ಬಂಧಿಸಿ ಅವರಿಂದ ಬಂದೂಕು ವಶಕ್ಕೆ ಪಡೆಯಲಾಗಿದೆ   

ಹಾನಗಲ್: ಅರಣ್ಯದಂಚಿನಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಖದೀಮರನ್ನು ಬಂಧಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ, ನಾಲ್ಕು ಜನರ ಮೇಲೆ ಪ್ರಕರಣ ದಾಖಲಿಸಿದೆ.

ತಾಲ್ಲೂಕಿನ ಮಕರವಳ್ಳಿ ಅರಣ್ಯ ಪ್ರದೇಶದಲ್ಲಿ ಗುರುವಾರ ಬೆಳಿಗ್ಗೆ 1 ಗಂಟೆಗೆ ಈ ಘಟನೆ ನಡೆದಿದ್ದು, ನಾಲ್ಕು ಜನರ ಪೈಕಿ ಮೂರು ಜನರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಂದು ಬಂದೂಕು, ಒಂದು ಕಾರು ವಶಕ್ಕೆ ಪಡೆಯಲಾಗಿದೆ.

ಶಿಕಾರಿಪುರ ನಿವಾಸಿ ಶಫಿಉಲ್ಲಾ ಅಮೀರ್‌ ಅಹ್ಮದ್‌, ಜಾವಾದ್‌ ಆಫ್ರನ್‌ ಮೊಹಮ್ಮದ್‌ ಜಾಫರ್‌, ಫೈಸಲ್‌ ಹುಸೇನ್‌ ಅಬ್ದುಲ್‌ ವಾಜೀದ್‌ ಬಂಧಿತರು, ತಾರೀಖ್‌ ಅತಾವುಲ್ಲಾ ಪಾರೂಖ್‌ ಪರಾರಿಯಾದ ಆರೋಪಿ.
ಬುಧವಾರ ಮಧ್ಯರಾತ್ರಿ ಈ ಭಾಗದಲ್ಲಿ ಪ್ರಾದೇಶಿಕ ಅರಣ್ಯ ವಲಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುವಾಗ ಅರಣ್ಯದ ಅಂಚಿನಲ್ಲಿ ನಾಲ್ಕು ಜನರ ಗುಂಪು ನಿಂತಿರುವುದನ್ನು ಗಮನಿಸಿ ವಿಚಾರಣೆಗೆ ಮುಂದಾದ ವೇಳೆ ತಮ್ಮ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದವರನ್ನು ಬೆನ್ನಟ್ಟಿದ್ದಾರೆ. ಒಬ್ಬ ತಪ್ಪಿಸಿಕೊಂಡಿದ್ದು, ಮೂರು ಜನರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಹಾವೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಬ್ದುಲ್ಅಜೀಜ್ ಶೇಖ, ಹಾನಗಲ್ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ, ಮಾರ್ಗದರ್ಶನದಲ್ಲಿ ಹಾನಗಲ್ ವಲಯ ಅರಣ್ಯಾಧಿಕಾರಿ ಗಣೇಶಪ್ಪ ಶೆಟ್ಟರ, ಉಪ ವಲಯ ಅರಣ್ಯಾಧಿಕಾರಿ ಎಸ್.ಕೆ.ರಾಠೋಡ, ಗಸ್ತು ಪಾಲಕರಾದ ಆನಂದ ಮಲಗುಂದ, ಹನುಮಂತಪ್ಪ ಉಪ್ಪಾರ, ಮೌಲಾಸಾಬ್, ಸಂತೋಷ ಸವಣೂರ, ಜುಲ್ಫಿಕರಲಿ ಮೇಡ್ಲೇರಿ, ಸಿಬ್ಬಂದಿ ಆರ್.ಪಿ.ಗೊರ್ಖಾ, ಹನುಮಂತಪ್ಪ ಬಿದರಕೊಪ್ಪ, ಎಸ್.ಬಿ.ಪೂಜಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಈ ಭಾಗದಲ್ಲಿ ಪಕ್ಕದ ಜಿಲ್ಲೆಗಳಿಂದ ವನ್ಯ ಜೀವಿಗಳನ್ನು ಬೇಟೆಯಾಡಲು ಬರುವ ಜನರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ನಿರಂತರವಾಗಿ ಗಸ್ತು ನಡೆಸುತ್ತದೆ. ಈ ಹಿಂದೆಯೂ ಈ ಭಾಗದಲ್ಲಿ ಬೇಟೆಗಾಗಿ ಬಂಧವರನ್ನು ಬಂಧಿಸಿದ ಪ್ರಕರಣಗಳು ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.