ADVERTISEMENT

ಬಸವೇಶ್ವರ ಜಾತ್ರೆಯಲ್ಲಿ ಐಟಂ ಡ್ಯಾನ್ಸ್‌..!

ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ತುಣುಕು; ಬಸವ ಭಕ್ತರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 11:43 IST
Last Updated 30 ಆಗಸ್ಟ್ 2018, 11:43 IST

ವಿಜಯಪುರ: 12ನೇ ಶತಮಾನದ ಕ್ರಾಂತಿಪುರುಷ, ಬಸವೇಶ್ವರರ ಜನ್ಮಭೂಮಿ, ಮನೆತನದ ಆರಾಧ್ಯದೈವ ಬಸವನಬಾಗೇವಾಡಿಯ ಬಸವೇಶ್ವರ ಜಾತ್ರೆಯಲ್ಲಿ ಮಂಗಳವಾರ ರಾತ್ರಿ ನಡೆದ ಸಾಂಸ್ಕೃತಿಕ ಕಲರವದಲ್ಲಿ ಯುವತಿಯೊಬ್ಬರು ಐಟಂ ಡ್ಯಾನ್ಸ್‌ ಪ್ರದರ್ಶಿಸಿದ್ದು, ಇದರ ವಿಡಿಯೊ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಈ ನೃತ್ಯದ ದೃಶ್ಯಾವಳಿ ಹರಿದಾಡಿದ್ದು, ಹಿಂದಿಯ ಚಲನಚಿತ್ರ ಗೀತೆಯೊಂದಕ್ಕೆ ಯುವತಿ ಹೆಜ್ಜೆ ಹಾಕಿದ್ದಾರೆ. ಇದಕ್ಕೆ ಹಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಜಾತ್ರಾ ಸಮಿತಿ ವಿರುದ್ದ ಹರಿಹಾಯ್ದಿದ್ದಾರೆ. ವಚನ ಗಾಯನ, ನೃತ್ಯೋತ್ಸವ ಆಯೋಜಿಸುವ ಬದಲು ಐಟಂ ಡ್ಯಾನ್ಸ್‌ ನಡೆಸಿ, ಬಸವೇಶ್ವರರ ಹೆಸರಿಗೆ ಕಪ್ಪು ಮಸಿ ಬಳಿಯಲಾಗಿದೆ ಎಂದು ದೂರಿದ್ದಾರೆ.

ಕ್ಷಮೆಯಾಚನೆ:
‘ಐದು ವರ್ಷದಿಂದಲೂ ಜನಪದ ಕಲಾವಿದ ಶಬ್ಬೀರ ಡಾಂಗೆ ತಂಡವನ್ನು ಜನಪದ ಗಾಯನಕ್ಕಾಗಿ ಜಾತ್ರೆಗೆ ಆಹ್ವಾನಿಸುತ್ತಿದ್ದೇವೆ. ಅದೇ ರೀತಿ ಈ ಬಾರಿಯೂ ಆಹ್ವಾನಿಸಿದ್ದೆವು. ಡಾಂಗೆ ತಂಡ ಆರಂಭದಿಂದಲೂ ಜನಪದ ಹಾಡುಗಳನ್ನು ಹಾಡಿ ಜನರನ್ನು ರಂಜಿಸುತ್ತಿತ್ತು.

ADVERTISEMENT

ಕೆಲ ಹೊತ್ತಿನ ಬಳಿಕ ನಾವು ಜಾತ್ರಾ ಕೆಲಸದ ನಿಮಿತ್ತ ಬಯಲು ರಂಗಮಂದಿರದಿಂದ ಹೊರಬಂದೆವು. ಈ ಸಂದರ್ಭ ಜಮಾಯಿಸಿದ್ದ ಯುವ ಸಮೂಹ ರೊಕ್ಕ ಕೊಟ್ಟು ಹಿಂದಿ ಚಿತ್ರಗೀತೆಗೆ ಯುವತಿಯಿಂದ ಐಟಂ ಡ್ಯಾನ್ಸ್‌ ಮಾಡಿಸಿದೆ. ಈ ನೃತ್ಯದ ದೃಶ್ಯಾವಳಿ ಇದೀಗ ಎಲ್ಲರ ಮೊಬೈಲ್‌ನಲ್ಲಿ ಹರಿದಾಡುತ್ತಿದೆ. ಇದು ಬಸವ ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ. ಇದಕ್ಕಾಗಿ ಜಾತ್ರಾ ಸಮಿತಿ ಕ್ಷಮೆ ಕೋರಲಿದೆ’ ಎಂದು ಸಮಿತಿಯ ಅಧ್ಯಕ್ಷ ಶೇಖರ ಗೊಳಸಂಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.