ADVERTISEMENT

ಕಾಮಗಾರಿ ವಿಳಂಬ: ಸಾರ್ವಜನಿಕರ ಪರದಾಟ

ಅವಿನಾಶ ಬೋರಂಚಿ
Published 13 ಅಕ್ಟೋಬರ್ 2017, 7:10 IST
Last Updated 13 ಅಕ್ಟೋಬರ್ 2017, 7:10 IST

ಸೇಡಂ: ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕೆಲಸ ಹಾಗೂ 24/7 ಕುಡಿಯುವ ನೀರಿನ ಅಭಿವೃದ್ಧಿ ಕಾಮಗಾರಿಗಳ ವಿಳಂಬ ನೀತಿಯಿಂದ ಸಾರ್ವಜನಿಕರು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಪಟ್ಟಣದ ವಿದ್ಯಾನಗರ, ಗಣೇಶ ನಗರ, ಚೋಟಿಗಿರಣಿ, ಲೋಹಾರಗಲ್ಲಿ, ಹೋಳಿತಿಪ್ಪಿ, ನಾಗರಕಟ್ಟಾ, ಚೌರಸ್ತಾ, ಹಳೆ ಗಂಜ, ಕೆಇಬಿ ಕಾಲೋನಿ, ವೆಂಕಟೇಶ ನಗರ, ಊಡಗಿ ರಸ್ತೆ ಸೇರಿದಂತೆ ವಿವಿಧೆಡೆ ಅಭಿವೃದ್ಧಿ ಕೆಲಸಕ್ಕಾಗಿ ಅಗೆದ ರಸ್ತೆಗಳು ಹದಗೆಟ್ಟಿವೆ. ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡು ಜನಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆಗಳು ಕೆಸರಿನಿಂದ ನಿರ್ಮಾಣವಾಗಿವೆ.

ಈಚೆಗೆ ವಾರವಿಡಿ ಸುರಿದ ಭಾರಿ ಮಳೆಯಿಂದ ಜನರು ರಸ್ತೆಯಲ್ಲಿ ಜಾರಿ ಬಿದ್ದು, ವಿವಿಧೆಡೆ ವಾಹನಗಳು ಕೆಸರಿನಲ್ಲಿ ಸಿಲುಕಿ ತೊಂದರೆ ಅನುಭವಿಸಿದರು. ಬೆಳಗಾದರೆ ಸಾಕು ಜನರು ಕೆಸರಿನ ಗದ್ದೆಯಲ್ಲಿನ ರಸ್ತೆ ಪ್ರಯಾಣಕ್ಕೆ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಪ್ರತಿನಿಧಿಗಳ ವಿರುದ್ಧ ಹಿಡಿಶಾಪ ಹಾಕುತ್ತಲೇ ಪ್ರಯಾಣಿಸುತ್ತಿದ್ದಾರೆ.

ADVERTISEMENT

ಸೇಡಂ-ಕೋಡಂಗಲ್ ರಸ್ತೆಗೆ ಹೊಂದಿಕೊಂಡಂತೆ ಅಗೆದಿರುವ ಬಿಎಸ್ಎನ್ಎಲ್ ಕಾಲುವೆಯಲ್ಲಿ ಪಟ್ಟಣದ ನಿವಾಸಿ ಚೆನ್ನಪ್ಪ ತುಳೇರ ಎಂಬುವವರಿಗೆ ಎತ್ತು ಸಿಲುಕಿತ್ತು. ಅದನ್ನು ಎತ್ತಲು ಸುಮಾರು ಹೊತ್ತು ಜನರು ಹರಸಾಹಸ ಪಟ್ಟು ವಿಫಲರಾದರು. ನಂತರ ಜೆಸಿಬಿ ಯಂತ್ರದಿಂದ ಕಾಲುವೆ ಅಗೆದು ಎತ್ತನ್ನು ಮೇಲಕ್ಕೆ ಎತ್ತಲಾಯಿತು.

‘ಗಣೇಶ ನಗರದ ಎಲ್ಲಾ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ನಿವಾಸಿಗಳು ನಿತ್ಯ ಸಂಚರಿಸಲು ಹರಸಾಹಸ ಪಡುತ್ತಿದ್ದಾರೆ. ಕತ್ತಲಾಗುವ ಮುನ್ನವೇ ಮನೆಗೆ ಸೇರುತ್ತಿದ್ದಾರೆ. ವಾಹನವನ್ನು ಬೇರೆಕಡೆ ನಿಲ್ಲಿಸಿ, ಕೆಸರಿನಲ್ಲಿ ಮನೆಗೆ ತೆರಳುತ್ತಿದ್ದಾರೆ. ಮೊಳಕಾಲಿನವರೆಗೆ ನಿಂತ ನೀರು ಹಾಗೂ ಕೆಸರಿನಿಂದ ಕೂಡಿದ ರಸ್ತೆಯೆ ಮೇಲೆಯೇ ನಾವು ನಿತ್ಯ ಸಂಚರಿಸಬೇಕಾಗಿದೆ’ ಎಂದು ಬಡಾವಣೆಯ ನಿವಾಸಿಗಳು ಆರೋಪಿಸುತ್ತಾರೆ. ಅದೇ ರೀತಿಯಲ್ಲಿ ಪಟ್ಟಣದ ತ್ರಿವೇಣಿ ಲಾಡ್ಜ್‌ ಬಳಿಯಲ್ಲಿ ರಸ್ತೆ ಕೆಟ್ಟು ಹೋಗಿದ್ದು, ಮೊಳಕಾಲಿನ ಆಳದವರೆಗೆ ತಗ್ಗು ನಿರ್ಮಾಣಗೊಂಡಿವೆ.

ಪಟ್ಟಣದ ಮುಖ್ಯರಸ್ತೆಯ ಮಧ್ಯದಲ್ಲಿರುವ ತಾಲ್ಲೂಕು ಪಂಚಾಯಿತಿ ಕಚೇರಿ ಎದುರಿನ ರಸ್ತೆಯಲ್ಲಿ ಇಟ್ಟಿಗೆ ತುಂಬಿದ ಲಾರಿ ಸಿಲುಕಿ ಸಾರ್ವಜನಿಕ ಸಂಚಾರಕ್ಕೆ ತೊಂದರೆಯುಂಟಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸವಾರರು ಪರದಾಡಿದರು. ಲಾರಿಯಲ್ಲಿರುವ ಇಟ್ಟಿಗೆಗಳನ್ನು ಅರ್ಧ ಖಾಲಿ ಮಾಡಿ ನಂತರ ಲಾರಿಯನ್ನು ಮೇಲೆತ್ತಲಾಯಿತು.

ಗ್ಯಾರೆಜ್‌ ಸೇರುತ್ತಿರುವ ವಾಹನ: ಪಟ್ಟಣದಲ್ಲಿನ ಕೆಸರಿನ ರಸ್ತೆಯಲ್ಲಿ ವಾಹನಗಳು ನಿತ್ಯ ಸಂಚರಿಸುವುದರಿಂದ ವಾಹನಗಳಲ್ಲಿ ಗ್ಯಾರೆಜ್‌ಗಳಿಗೆ ಹೆಚ್ಚು ಸೇರುತ್ತಿವೆ. ‘ನಾನು ಹೊಸ ಬೈಕ್ ಖರೀದಿ ಮಾಡಿ ಎರಡು ತಿಂಗಳೂ ಆಗಿಲ್ಲ. ಈ ರಸ್ತೆಯಲ್ಲಿ ನಿತ್ಯ ಸಂಚರಿಸಿದ್ದರಿಂದ ರಿಪೇರಿಗೆ ಬಂದಿದೆ’ ಎಂದು ಬೈಕ್ ಸವಾರ ಮಲ್ಲಿಕಾರ್ಜುನ ‘ಪ್ರಜಾವಾಣಿ’ಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.