ADVERTISEMENT

ಚಂದ್ರಂಪಳ್ಳಿ ಪ್ರವಾಸಿ ತಾಣ ನಿರ್ಲಕ್ಷ್ಯ

ಪ್ರವಾಸಿಗರಿಗಿಲ್ಲ ವಸತಿ, ಮಾರ್ಗದರ್ಶಿ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 8:39 IST
Last Updated 5 ಅಕ್ಟೋಬರ್ 2017, 8:39 IST
ಚಂದ್ರಂಪಳ್ಳಿ ಪ್ರವಾಸಿ ತಾಣ ನಿರ್ಲಕ್ಷ್ಯ
ಚಂದ್ರಂಪಳ್ಳಿ ಪ್ರವಾಸಿ ತಾಣ ನಿರ್ಲಕ್ಷ್ಯ   

ಚಿಂಚೋಳಿ: ಪ್ರಕೃತಿಯ ರಮಣೀಯತೆಯಿಂದ ಪ್ರವಾಸಿಗರನ್ನು ಸೆಳೆಯುವ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಚಂದ್ರಂಪಳ್ಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯವಹಿಸಿದೆ.

ಸುತ್ತಲೂ ಬೆಟ್ಟ ಗುಡ್ಡ, ಹಚ್ಚಹಸಿರ ಸಿರಿಯ ನಡುವೆ ಕಂಗೊಳಿಸುವ ಚಂದ್ರಂಪಳ್ಳಿಯಲ್ಲಿ ಪ್ರವಾಸಿಗರಿಗೆ ಸೌಲಭ್ಯಗಳ ಕೊರತೆ ಅಧಿಕವಾಗಿದೆ. ಹೈದರಾಬಾದ್‌ ಕರ್ನಾಟಕ ಅಭಿವೃದ್ಧಿ ಮಂಡಳಿ ಅಸ್ತಿತ್ವಕ್ಕೆ ಬಂದು ಹಲವು ವರ್ಷಗಳು ಗತಿಸಿದರೂ ಈ ತಾಣದ ಅಭಿವೃದ್ಧಿಗೆ ಇನ್ನೂ ಗಮನ ಹರಿಸಿಲ್ಲ. ಜತೆಗೆ ಪ್ರವಾಸೋದ್ಯಮ ಸಚಿವರು ಇದೇ ಜಿಲ್ಲೆಯವರಾಗಿದ್ದರೂ ಚಂದ್ರಂಪಳ್ಳಿ ಪ್ರವಾಸಿ ತಾಣ ಉದಾಸೀನಕ್ಕೆ ಒಳಗಾಗಿದೆ ಎಂಬುದು ಸ್ಥಳೀಯರ ಆರೋಪ.

ಇಲ್ಲಿ ಪ್ರವಾಸಿಗರಿಗೆ ತಂಗಲು ಸೌಲಭ್ಯವಿಲ್ಲ. ಪ್ರವಾಸಿ ಮಾರ್ಗದರ್ಶಿಗಳಿಲ್ಲ. ಊಟ ಹಾಗೂ ಶುದ್ಧ ನೀರಿನ ಕೊರತೆ ಹಾಗೂ ಜಲಾಶಯದಲ್ಲಿ ದೋಣಿ ವಿಹಾರದ ಅಭಾವ ಎದ್ದು ಕಾಣುತ್ತಿದೆ.

ADVERTISEMENT

ದಶಕದ ಹಿಂದೆಯೇ ಇಲ್ಲಿ 2 ದೋಣಿ ಸೌಲಭ್ಯ ಕಲ್ಪಿಸಲಾಗಿತ್ತು. ದಶಕದ ನಂತರ ಇಲ್ಲಿ 10ಕ್ಕೂ ಹೆಚ್ಚು ದೋಣಿಗಳು ಪ್ರವಾಸಿಗರಿಗೆ ಕಾಯಬೇಕಿತ್ತು. ಆದರೆ ಹೀಗಾಗದೇ ಪ್ರವಾಸೋದ್ಯಮ ಹಿಮ್ಮುಖವಾಗಿ ಸಾಗಿದಂತಾಗಿದೆ.

ಕಳೆದ ವರ್ಷ ಇಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ಮಿತ್ರರೊಬ್ಬರನ್ನು ನಿಯೋಜಿಸಲಾಗಿತ್ತು. ಆದರೆ ಈಗ ಅದನ್ನು ರದ್ದುಪಡಿಸಿದ್ದಾರೆ. 3 ತಿಂಗಳಿನಿಂದ ಇಲ್ಲಿ ಪ್ರವಾಸಿ ಮಿತ್ರರಿಲ್ಲ.

‘ಕಳೆದ ವಾರ ಹೈದರಾಬಾದ್‌ನಿಂದ ಸುಮಾರು 20 ಮಂದಿ ಪ್ರವಾಸಿಗರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ ಚಿತ್ರಗಳನ್ನು ನೋಡಿ ಇಲ್ಲಿಗೆ ಭೇಟಿ ನೀಡಿದ್ದರು. ಅವರು ಕುಟುಂಬ ಸಮೇತ ಬಂದಿದ್ದಲ್ಲದೇ ತಮ್ಮ ಜತೆಗೆ 4 ದೋಣಿಗಳನ್ನು ತಂದಿದ್ದರು. ಅವರು ಇಡೀ ದಿನ ದೋಣಿಯಲ್ಲಿ ವಿಹರಿಸಿ ಆನಂದಿಸಿದರು. ದೋಣಿಯ ಸೌಲಭ್ಯ ಸರ್ಕಾರವೇ ಕಲ್ಪಿಸಿದ್ದರೆ ಆದಾಯವೂ ಬರುತ್ತಿತ್ತು’ ಎಂದು ಪ್ರವಾಸಿ ಎಜಾಜ್‌ ಕರನಕೋಟ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಕಾಲ್ತುಳಿದು ನಡೆಸುವ ದೋಣಿ ಕಲ್ಪಿಸಬಹುದು. ಆದರೆ, ಅದರ ನಿರ್ವಹಣೆಗೆ ಒಂದು ತಂಡದ ಅಗತ್ಯವಿದೆ. ಮೋಟಾರ್‌ ಚಾಲಿತ ದೋಣಿಗೆ ವನ್ಯಜೀವಿ ಧಾಮದವರು ಹಾಗೂ ನೀರಾವರಿ ಇಲಾಖೆಯವರು ಅನುಮತಿ ನೀಡಬೇಕು. ಆದರೆ ಇದಕ್ಕೆ ಅವಕಾಶವಿಲ್ಲ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಹೇಳುತ್ತಾರೆ.

₹10ರಿಂದ ₹12 ಲಕ್ಷ
ವೆಚ್ಚದಲ್ಲಿ ಪೈನ್‌ ವುಡ್‌ನ ಮನೆ ನಿರ್ಮಿಸಿದ್ದು (ನೇಚರ್‌ ಕ್ಯಾಂಪ್‌) ಪ್ರವಾಸಿಗರನ್ನು ಸೆಳೆಯುತ್ತಿವೆ. ಆದರೆ ಇವುಗಳನ್ನು ನಿರ್ಮಿಸಿ 6 ತಿಂಗಳು ಸಮೀಪಿಸಿದರೂ ಇನ್ನೂ ಉದ್ಘಾಟನೆ ಭಾಗ್ಯ ಲಭಿಸಿಲ್ಲ. ₹30 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ರೈತ ತರಬೇತಿ ಭವನಕ್ಕೆ ಕಾಯಕಲ್ಪ ನೀಡಲಾಗಿದೆ. ಆದರೆ ಇದರ ನಿರ್ವಹಣೆಯೂ ಸರಿಯಾಗಿ ಆಗುತ್ತಿಲ್ಲ.

‘ಜಂಗಲ್‌ ಲಾಡ್ಜ್‌ ಮತ್ತು ರೆಸಾರ್ಟ್‌ ಸ್ಥಳ ಪರಿಶೀಲನೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಮತ್ತು ವ್ಯವಸ್ಥಾಪಕರು ಬಂದು ಹೋಗಿ ವರ್ಷವಾದರೂ ಪ್ರಯೋಜನವಾಗಿಲ್ಲ’ ಎಂದು ಸ್ಥಳೀಯರು ದೂರುತ್ತಾರೆ.

ಜಗನ್ನಾಥ ಡಿ.ಶೇರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.