ADVERTISEMENT

ಚುನಾವಣಾ ಕಾರ್ಯವಿಧಾನ ಅರಿಯಿರಿ

ಚುನಾವಣೆಗೆ ತರಬೇತಿ ಕಾರ್ಯಾಗಾರ: ಅಧಿಕಾರಿಗಳಿಗೆ ವೆಂಕಟೇಶಕುಮಾರ್ ಸಲಹೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 9:02 IST
Last Updated 27 ಮಾರ್ಚ್ 2018, 9:02 IST
ಕಲಬುರ್ಗಿಯ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಮಾತನಾಡಿದರು
ಕಲಬುರ್ಗಿಯ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಮಾತನಾಡಿದರು   

ಕಲಬುರ್ಗಿ: ‘ಚುನಾವಣಾ ಕಾರ್ಯಕ್ಕೆ ನೇಮಿಸಲಾಗಿರುವ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದ ಎಲ್ಲ ತಂಡಗಳ ಕಾರ್ಯವಿಧಾನವನ್ನು ತಿಳಿದುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಇಲ್ಲಿನ ಡಾ.ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಚುನಾವಣೆಗೆ ನಿಯೋಜಿಸಿರುವ ಎಲ್ಲ ತಂಡಗಳ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಸೆಕ್ಟರ್ ಅಧಿಕಾರಿಗಳ ಕಾರ್ಯ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಮುಂಚೆ ಸ್ವೀಪ್ ಕಾರ್ಯಕ್ರಮದಿಂದ ಪ್ರಾರಂಭವಾಗಿ ನೀತಿ ಸಂಹಿತೆ ಮುಕ್ತಾಯದವರೆಗೆ ಜಾರಿಯಲ್ಲಿರುತ್ತದೆ. ಸೆಕ್ಟರ್ ಅಧಿಕಾರಿಗಳಿಗೆ ಚುನಾವಣಾ ಸಂದರ್ಭದಲ್ಲಿ ವಿಶೇಷ ಕಾನೂನಾತ್ಮಕ ಅಧಿಕಾರವನ್ನು ನೀಡಲಾಗುತ್ತಿದೆ’ ಎಂದರು.

ADVERTISEMENT

‘ಜಿಲ್ಲೆಯಲ್ಲಿ 10ರಿಂದ 11 ಮತಗಟ್ಟೆಗಳಿಗೆ ಒಬ್ಬರು ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಚುನಾವಣಾ ಸಂದರ್ಭದಲ್ಲಿ ಅವಶ್ಯಕತೆ ಇದ್ದಲ್ಲಿ ಚುನಾವಣಾಧಿಕಾರಿಗಳ ಪರವಾನಗಿಯೊಂದಿಗೆ ಕಾನೂನಾತ್ಮಕ ಅಧಿಕಾರವನ್ನು ಚಲಾಯಿಸಬಹುದಾಗಿದೆ’ ಎಂದರು.

'ರಾಜ್ಯದಾದ್ಯಂತ ಮುಂಬರುವ ಚುನಾವಣೆಯಲ್ಲಿ ವಿವಿಪ್ಯಾಟ್ ಯಂತ್ರವನ್ನು ಬಳಸಲಾಗುತ್ತಿದೆ. ಸೆಕ್ಟರ್ ಹಾಗೂ ಚುನಾವಣಾ ಅಧಿಕಾರಿಗಳು ಸಾರ್ವಜನಿಕರಿಗೆ ವಿವಿಪ್ಯಾಟ್ ಯಂತ್ರದ ಬಗ್ಗೆ ಪ್ರತಿ ಮತಗಟ್ಟೆಯಲ್ಲಿ ಸುಮಾರು ಅರ್ಧ ಗಂಟೆ ಪ್ರಾತ್ಯಕ್ಷಕೆ ಮೂಲಕ ಮಾಹಿತಿ ನೀಡಬೇಕು. ಜಿಲ್ಲೆಯಲ್ಲಿ ನೂತನವಾಗಿ 109 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ನಗರದ ಉತ್ತರ ಮತ್ತು ದಕ್ಷಿಣ ಮತಕ್ಷೇತ್ರಗಳಲ್ಲಿ ನೂತನವಾಗಿ ಸ್ಥಾಪಿಸಿರುವ ಮತಗಟ್ಟೆಗಳ ವಿವರಗಳನ್ನು ಮತದಾರರಿಗೆ ತಿಳಿಸಿಕೊಡಬೇಕು’ ಎಂದು ಸೂಚಿಸಿದರು.

‘ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯು ₹28 ಲಕ್ಷ ವರೆಗೆ ಚುನಾವಣೆಗಾಗಿ ಖರ್ಚು ಮಾಡಬಹುದು. ಅಭ್ಯರ್ಥಿಗಳು ಚುನಾವಣೆಗೆ ಖರ್ಚು ಮಾಡುವ ಹಣದ ವಿವರವನ್ನು ಪ್ರತಿದಿನ ನೀಡಬೇಕು. ಕಾರ್ಯಕ್ರಮ, ಸಭೆ, ಸಮಾರಂಭಗಳಿಗೆ ಮುಂಚಿತವಾಗಿ ಪರವಾನಗಿ ಪಡೆಯಬೇಕು. ಮತದಾರರಿಗೆ ಆಮಿಷ ಒಡ್ಡುವುದು, ಭ್ರಷ್ಟಾಚಾರ ನಡೆಸುವವರಿಗೆ ಸೂಕ್ತ ಶಿಕ್ಷೆ ನೀಡುವ ಅವಕಾಶಗಳಿದ್ದು, ಚುನಾವಣಾ ವೆಚ್ಚ ನಿರ್ವಹಣಾ ತಂಡದ ಎಲ್ಲ ಅಧಿಕಾರಿಗಳು ತಿಳಿದುಕೊಳ್ಳಬೇಕು’ ಎಂದು ಹೇಳಿದರು.

‘ಚುನಾವಣಾ ಸಂಹಿತೆಯು ಚುನಾವಣಾ ವೇಳಾಪಟ್ಟಿ ಘೋಷಣೆಯಾದ ದಿನದಂದು ಮತ ಎಣಿಕೆ ಮುಗಿಯುವರೆಗೆ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಕೋಮು ಸೌಹಾರ್ದ ಕಾಪಾಡಬೇಕು. ಬೆಳಿಗ್ಗೆ 6ರಿಂದ ರಾತ್ರಿ 10ಗಂಟೆ ವರೆಗಿನ ಪ್ರಚಾರದ ಸಮಯ ಪಾಲಿಸಬೇಕು. ಕಾನೂನು ಉಲ್ಲಂಘನೆ, ಧಾರ್ಮಿಕ ಚಿಹ್ನೆಗಳ ದುರ್ಬಳಕೆ ಮಾಡಬಾರದು. ಮತದಾನದ 48 ಗಂಟೆ ಮುಂಚೆ ಬಹಿರಂಗ ಪ್ರಚಾರ ನಿಲ್ಲಿಸಬೇಕು' ಎಂದು ತರಬೇತುದಾರ ಶಶಿ ಶೇಖರರೆಡ್ಡಿ ತಿಳಿಸಿದರು.

ರಜೆಗೆ ಅನುಮತಿ: ‘ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ಸರ್ಕಾರಿ ನೌಕರರು ರಜೆಗೆ ತೆರಳಲು ಚುನಾವಣಾ ಅಧಿಕಾರಿಗಳ ಮಂಜೂರಾತಿ ಪಡೆಯಬೇಕು. ನಿಷ್ಪಕ್ಷಪಾತವಾಗಿ ಸೇವೆ ನಿರ್ವಹಿಸಬೇಕು.

ಕಾನೂನು ಪಾಲನೆ ಮಾಡಬೇಕು. ಚುನಾವಣೆ ಸಮಯದಲ್ಲಿ ಚುನಾವಣಾ ಆಯೋಗದ ಅನುಮತಿ ಇಲ್ಲದೇ ವರ್ಗಾವಣೆ ಮಾಡುವುದಿಲ್ಲ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಸಹಾಯಕ ಆಯುಕ್ತ ಮಾರುತಿ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಚುನಾವಣಾ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.