ADVERTISEMENT

ನಿಫಾ: ಬಾವಲಿ, ಹಂದಿಗಳ ತೆರವಿಗೆ ಸೂಚನೆ

ಆರೋಗ್ಯ ಇಲಾಖೆಯ ಜಿಲ್ಲಾ ಸಮನ್ವಯ ಸಮಿತಿ ಸಭೆ; ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಮೇ 2018, 9:20 IST
Last Updated 30 ಮೇ 2018, 9:20 IST

ಕಲಬುರ್ಗಿ: ಕೇರಳದಲ್ಲಿ ನಿಫಾ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ  ಬಾವಲಿಗಳು ವಾಸ ಮಾಡುವ ಸ್ಥಗಳನ್ನು ಗುರುತಿಸಿ ತೆರವುಗೊಳಿಸ ಬೇಕು. ಹಂದಿಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ್‌ ಸೂಚಿಸಿದರು.

ಮಂಗಳವಾರ ಇಲ್ಲಿ ನಡೆದ ಆರೋಗ್ಯ ಇಲಾಖೆಯ ಜಿಲ್ಲಾ ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಿಫಾ ಸೋಂಕು ತಗುಲಿದರೆ ಅದಕ್ಕೆ ಯಾವುದೇ ನಿಖರ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಇದು ಬರದಂತೆ ನೋಡಿಕೊಳ್ಳುವುದಕ್ಕೆ ಮುಂಜಾಗ್ರತೆ ವಹಿಸುವುದೇ ಸೂಕ್ತ ಎಂದರು.

ADVERTISEMENT

ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಾವಲಿಗಳು ವಾಸಮಾಡುವ ಸ್ಥಳಗಳನ್ನು ಗುರುತಿಸಬೇಕು. ಬಾವಿಗ
ಳಲ್ಲಿ ವಾಸವಾಗಿದ್ದರೆ ಅಂತಹ ಬಾವಿಗಳಿಗೆ ಬೇಲಿ ಅಳವಡಿಸುವ ಮೂಲಕ ಬಾವಲಿಗಳು ಬಾವಿಯನ್ನು ಪ್ರವೇಶಿಸದಂತೆ ನೋಡಿಕೊಳ್ಳಬೇಕು. ಮರಗಳಲ್ಲಿ ವಾಸಮಾಡುವ ಬಾವಲಿಗಳಿಂದ ಎಚ್ಚರಿಕೆ ವಹಿಸಬೇಕು. ಸ್ಥಳೀಯ ಸಂಸ್ಥೆಗಳ
ವರು ಜಿಲ್ಲೆಯಲ್ಲಿರುವ ಹಂದಿಗಳನ್ನು ಹಿಡಿದು ಸುರಕ್ಷಿತ ಸ್ಥಳಗಳಿಗೆ ಸಾಗಿಸಬೇಕು ಎಂದು ಸೂಚಿಸಿದರು.

ಹಣ್ಣುಗಳನ್ನು ಸಂಸ್ಕರಿಸಿ ಸೇವಿಸಬೇಕು. ಜಿಲ್ಲಾ ಆಸ್ಪತ್ರೆಯಲ್ಲಿ ನಿಫಾ ಸೋಂಕಿತರ ಚಿಕಿತ್ಸೆಗೆ ಪ್ರತ್ಯೇಕ ವಾರ್ಡ್‌ ಪ್ರಾರಂಭಿಸಬೇಕು. ಆರೋಗ್ಯ ಇಲಾಖೆಯವರು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಕೇರಳದ ನಾಲ್ಕು ಜಿಲ್ಲೆಗಳನ್ನು ನಿಫಾ ಸೋಂಕು ಹರಡುವ ಅಪಾಯಕಾರಿ ಜಿಲ್ಲೆಗಳೆಂದು ಗುರುತಿಸಲಾಗಿದೆ. ಈ ಜಿಲ್ಲೆಗಳಿಗೆ ಈಗ ಪ್ರವಾಸ ಕೈಗೊಳ್ಳಬಾರದು. ಕೇರಳದಿಂದ ಜಿಲ್ಲೆಗೆ ಬರುವ ಪ್ರವಾಸಿಗರು ಅಥವಾ ಸ್ಥಳೀಯರ ಮೇಲೆ ನಿಗಾವಹಿಸಬೇಕು. ಅಪ್ಪಾ ಪಬ್ಲಿಕ್ ಶಾಲೆಯ 10ನೇ ತರಗತಿಯ ಮಕ್ಕಳು ಕೇರಳಕ್ಕೆ ಪ್ರವಾಸ ಹೋಗಿದ್ದಾರೆ. ಅವರು ಬಂದ ತಕ್ಷಣ ಅವರನ್ನು ಮುಂಜಾಗೃತಾ ಕ್ರಮವಾಗಿ ತಪಾಸಣೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಕೆ. ಪಾಟೀಲ, ಡಾ.ಬಾಲಚಂದ್ರ ಜೋಶಿ ಇದ್ದರು.

ಡೆಂಗಿ, ಚಿಕೂನ್‌ ಗುನ್ಯ ನಿಯಂತ್ರಿಸಿ: ಮಳೆ ಬಂದ ನಂತರ ನಿಂತ ನೀರಿನಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಕೈಗೊಳ್ಳುವುದರಿಂದ ಡೆಂಗಿ ಹಾಗೂ ಚಿಕೂನ್‌ ಗುನ್ಯಾ ರೋಗ ಹರಡುವ ಸಾಧ್ಯತೆಗಳಿವೆ. ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಬೂತ್‌ ಮಟ್ಟದಲ್ಲಿ ಮಹಾನಗರ ಪಾಲಿಕೆ ನೌಕರರು, ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರ
ನ್ನೊಳಗೊಂಡ ತಂಡಗಳನ್ನು ರಚಿಸಬೇಕು. ಈ ತಂಡಗಳು ಮನೆ ಮನೆಗೆ ಭೇಟಿ ನೀಡಿ ಮಳೆ ನೀರು ಸಂಗ್ರಹ
ವಾಗದಂತೆ ಎಚ್ಚರಿಕೆ ವಹಿಸಬೇಕು ಹಾಗೂ ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಾಶಪಡಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾರಂಭಿಸಲಾಗಿ ರುವ ಡೆಂಗಿ ವಾರ್ಡ್‌ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಹಾಗೆ ಸಿದ್ಧತೆ ಮಾಡಿಕೊಳ್ಳಬೇಕು. ಡೆಂಗಿ ತಪಾಸಣೆಗೆ ₹250 ಗಿಂತ ಹೆಚ್ಚಿನ ಶುಲ್ಕ ಪಡೆಯದಂತೆ ಹಾಗೂ ತಪಾಸಣೆಗೆ ಗುಣಮಟ್ಟದ ತಂತ್ರಜ್ಞಾನವನ್ನು ಬಳಸುವಂತೆ ಸೂಚಿಸಬೇಕು ಎಂದರು.

**
ಜಿಲ್ಲೆಯಲ್ಲಿ ನಿಫಾ ಸೋಂಕು ಈವರೆಗೆ ಕಂಡು ಬಂದಿಲ್ಲ. ಯಾವುದೇ ಶಂಕಿತ ಪ್ರಕರಣಗಳು ಸಹ ವರದಿಯಾಗಿಲ್ಲ. ಸಾರ್ವಜನಿಕರು ಆತಂಕಪಡುವುದು ಬೇಡ
ಆರ್‌.ವೆಂಕಟೇಶಕುಮಾರ್‌, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.