ADVERTISEMENT

ವಿದೇಶಿ ದೇಣಿಗೆಗೆ ಕೇಂದ್ರ ಅಡ್ಡಗಾಲು: ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2018, 10:42 IST
Last Updated 24 ಆಗಸ್ಟ್ 2018, 10:42 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರ್ಗಿ: ‘ಕೇರಳದ ಮಳೆ ಪರಿಹಾರಕ್ಕಾಗಿ ವಿವಿಧ ದೇಶಗಳು ಘೋಷಿಸಿದ್ದ ದೇಣಿಗೆಗೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ’ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ವಿದೇಶಗಳಿಂದ ಹಣಕಾಸು ನೆರವು ಪಡೆಯುವ ನೀತಿ ಈ ಹಿಂದೆ ಇತ್ತು. ಆದರೆ, ನಮ್ಮ ಸರ್ಕಾರ (ಯುಪಿಎ) ಅಧಿಕಾರದಲ್ಲಿದ್ದಾಗ ಹಣಕಾಸು ನೆರವು ಪಡೆಯದೇ ಇರುವ ನೀತಿಯನ್ನು ಅನುಷ್ಠಾನಗೊಳಿಸಲಾಗಿತ್ತು. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಲೇ ಸರ್ವ ಪಕ್ಷಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಬೇಕು. ವಿದೇಶಾಂಗ ನೀತಿಗೆ ಧಕ್ಕೆ ಬಾರದಂತೆ ದೇಣಿಗೆ ಸ್ವೀಕರಿಸಲು ನೀತಿ ರೂಪಿಸಬೇಕು’ ಎಂದು ಆಗ್ರಹಿಸಿದರು.

‘ವಿಕೋಪ ಪರಿಹಾರದ ಭಾಗವಾಗಿ ಕೇರಳ ಸರ್ಕಾರ ಕೇಂದ್ರಕ್ಕೆ ₹2 ಸಾವಿರ ಕೋಟಿ ಅನುದಾನ ಕೇಳಿತ್ತು. ಮೋದಿ ಅವರು ಖುದ್ದು ತಾವೇ ಪ್ರಕೃತಿ ವಿಕೋಪವನ್ನು ವೀಕ್ಷಿಸಿ, ಅವರು ಕೇಳಿದ್ದರ ಅರ್ಧದಷ್ಟು ನೆರವನ್ನು ಬಿಡುಗಡೆ ಮಾಡಿದ್ದಾರೆ. ವಿದೇಶಿ ದೇಣಿಗೆ ಸ್ವೀಕರಿಸುವುದು ಬೇಡ ಎಂದಾದರೆ ಮೋದಿ ಅವರು ಉದಾರತೆ ತೋರಬೇಕು. ಕೇರಳ ಸರ್ಕಾರ ಕೇಳಿದಷ್ಟು ನೆರವನ್ನು ನೀಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಕೇರಳಕ್ಕೆ ನೆರವು ನೀಡುವಲ್ಲಿ ಮೋದಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಸದ್ಯದ ಮಟ್ಟಿಗೆ ಕೇರಳ ಮತ್ತು ರಾಜ್ಯದ ಕೊಡಗು ಜಿಲ್ಲೆ ಅಪಾಯದ ಸ್ಥಿತಿಯಲ್ಲಿವೆ. ಆದ್ದರಿಂದ ತಕ್ಷಣ ಪರಿಹಾರನಿಧಿ ಬಿಡುಗಡೆ ಮಾಡಬೇಕು. ಕೇರಳ ಮತ್ತು ಕೊಡಗು ಮರು ನಿರ್ಮಾಣಕ್ಕೆ ಮುಂದಾಗಬೇಕು. ಆ ಬಳಿಕ ಬೇಕಿದ್ದರೆ ಹಾನಿಯ ವರದಿ ತರಿಸಿಕೊಳ್ಳಲಿ’ ಎಂದು ಹೇಳಿದರು.

‘ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ರಾಜಕೀಯ ಮುತ್ಸದ್ಧಿ. ಅವರನ್ನು ನಾವು ಅಪಾರವಾಗಿ ಗೌರವಿಸುತ್ತೇವೆ. ಅವರು ಆರ್‌ಎಸ್‌ಎಸ್‌ ಹಿನ್ನೆಲೆಯವರಾದರೂ ಇತರೆ ಧರ್ಮ, ಜನಾಂಗದ ಜನರ ಜತೆ ಸಹಿಷ್ಣುತೆ ಹೊಂದಿದ್ದರು. ಅವರಿಗೆ ಗೌರವ ಕೊಡುವುದನ್ನು ನಾವು ಮೋದಿ ಅವರಿಂದ ಕಲಿಯಬೇಕಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಮೋದಿ ಅವರಿಗೆ ವಾಜಪೇಯಿ ರಾಜಧರ್ಮ ಬೋಧನೆ ಮಾಡಿದ್ದರು. ಆದರೆ ವಾಜಪೇಯಿ ಅನಾರೋಗ್ಯಕ್ಕೆ ಒಳಗಾದಾಗ ಮೋದಿ ಎಷ್ಟು ಬಾರಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಎಂಬುದನ್ನು ಅವರೇ ಹೇಳಬೇಕು. ಪಕ್ಷದ ಸಮಾವೇಶವೊಂದರಲ್ಲಿ ನಮಸ್ಕಾರ ಮಾಡಿದ ಎಲ್.ಕೆ.ಅಡ್ವಾಣಿ ಅವರಿಗೆ ಮರು ನಮಸ್ಕರಿಸದೆ ಮೋದಿ ಅಗೌರವ ತೋರಿದ್ದಾರೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.