ADVERTISEMENT

ಚಿಂಚೋಳಿ: ಎರಡು ತಿಂಗಳಲ್ಲಿ 4.30 ಲಕ್ಷ ಮಾನವ ದಿನ ಸೃಜನೆ

ನರೇಗಾ: 2 ತಿಂಗಳಲ್ಲಿ ಮಹತ್ವದ ಸಾಧನೆ ಮಾಡಿದ ಚಿಂಚೋಳಿ ತಾಲ್ಲೂಕು

ಜಗನ್ನಾಥ ಡಿ.ಶೇರಿಕಾರ
Published 10 ಜೂನ್ 2021, 5:18 IST
Last Updated 10 ಜೂನ್ 2021, 5:18 IST
ಚಿಂಚೋಳಿ ತಾಲ್ಲೂಕು ಅಂತಾವರ ಕೆರೆ ಹೂಳೆತ್ತುವ ಕೆಲಸದಲ್ಲಿ ಕೂಲಿ ಕಾರ್ಮಿಕರು ತೊಡಗಿರುವುದು
ಚಿಂಚೋಳಿ ತಾಲ್ಲೂಕು ಅಂತಾವರ ಕೆರೆ ಹೂಳೆತ್ತುವ ಕೆಲಸದಲ್ಲಿ ಕೂಲಿ ಕಾರ್ಮಿಕರು ತೊಡಗಿರುವುದು   

ಚಿಂಚೋಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ 2021-22ನೇ ಸಾಲಿನ ಅನುಷ್ಠಾನದಲ್ಲಿ ಚಿಂಚೋಳಿ ತಾಲ್ಲೂಕು ಉತ್ತಮ ಸಾಧನೆ ಮಾಡಿದೆ.

29 ಗ್ರಾಮ ಪಂಚಾಯಿತಿಗಳ ಮೂಲಕ ಕೇವಲ (ಏಪ್ರಿಲ್ ಮತ್ತು ಮೇ) 2 ತಿಂಗಳಲ್ಲಿಯೇ 4.3 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಕೂಲಿಕಾರರಿಗೆ, ರೈತರಿಗೆ ನೆರವಾಗಿದೆ. ರಾಷ್ಟ್ರೀಯ ಸಂಪನ್ಮೂಲಗಳ ನಿರ್ವಹಣೆಯ ಕಾಮಗಾರಿಗಳು ಅಂದರೆ ಕೆರೆ ಕಟ್ಟೆಗಳ, ನಾಲಾಗಳ, ಬಾಂದಾರು ಸೇತುವೆಗಳ, ಗೋಕಟ್ಟೆ, ಚೆಕ್ ಡ್ಯಾಂ ಹೂಳು ತೆಗೆಯುವ ಮತ್ತು ರೈತರ ಹೊಲದಲ್ಲಿ ಬದು ನಿರ್ಮಾಣ, ಅರಣ್ಯ ಪ್ರದೇಶದಲ್ಲಿ ಟ್ರೆಂಚ್ ನಿರ್ಮಾಣದಂತಹ ಜಲಾನಯನ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಅನುಷ್ಠಾನಗೊಳಿಸಿದೆ.

ತಾಲ್ಲೂಕಿನಲ್ಲಿ 5,273 ಕಾಮಗಾರಿ ಮಂಜೂರಾಗಿದ್ದು ಇದರಲ್ಲಿ 321 ಕಾಮಗಾರಿ ಪೂರ್ಣಗೊಂಡಿವೆ. ಒಟ್ಟು 29 ಗ್ರಾಮ ಪಂಚಾಯಿತಿಗಳ ಮೂಲಕ 56,623 ಕಾರ್ಮಿಕರು ಕೆಲಸ ಮಾಡುವ ಮೂಲಕ 2021-22ನೇ ಸಾಲಿನಲ್ಲಿ ನರೇಗಾ ಅನುಷ್ಠಾನದಲ್ಲಿ ಗುರಿ ಮೀರಿ ಸಾಧನೆ ಮಾಡುವತ್ತ ದಾಪುಗಾಲಿರಿಸಿದೆ. ಇದರಲ್ಲಿ ಶೇ 37 ಪರಿಶಿಷ್ಟ ಜಾತಿಯ ಕಾರ್ಮಿಕರಿರುವುದು ವಿಶೇಷವಾಗಿದೆ. ತಾಲ್ಲೂಕಿನಲ್ಲಿ 4,9050 ಜಾಬ್ ಕಾರ್ಡಗಳಿವೆ. ಇದರಲ್ಲಿ 30,821 ಕ್ರೀಯಾಶೀಲ ಜಾಬ್‌ ಕಾರ್ಡ್‌ಗಳಿವೆ.

ADVERTISEMENT

ತಾಲ್ಲೂಕಿನ ಗಾರಂಪಳ್ಳಿ ಗ್ರಾಮ ಪಂಚಾಯಿತಿ 32,202, ಹಸರಗುಂಡಗಿ 31,306, ಕುಂಚಾವರಂ 25,428, ಗಡಿಲಿಂಗದಳ್ಳಿ 26,481, ಸಲಗರ ಬಸಂತಪುರ 25,239, ದೇಗಲಮಡಿ 24328, ಗರಗಪಳ್ಳಿ 22785 ಮಾನವ ದಿನಗಳ ಸೃಜನೆ ಮಾಡುವ ಮೂಲಕ ಉತ್ತಮ ಸಾಧನೆ ಮಾಡಿದರೆ, ಕರ್ಚಖೇಡ್ 1,688 ಮಾನವ ದಿನಗಳ ಸೃಜನೆ ಮೂಲಕ ಕನಿಷ್ಠ ಸಾಧನೆ ಮಾಡಿದೆ.

2017-18ನೇ ಸಾಲಿನಲ್ಲಿ ಒಂದು ವರ್ಷದಲ್ಲಿ 3,23,242, 2018-19ರಲ್ಲಿ 4,14,216 ಮಾನವ ದಿಗಳ ಸೃಜನೆಯಾಗಿತ್ತು. 2019-20ರಲ್ಲಿ 6.63,068, 2020-21ರಲ್ಲಿ 11,42,804 ಮಾನವ ದಿನಗಳ ಸೃಜನೆಯಾಗಿತ್ತು.

ಆಳಂದ ನಂ.1, ಚಿಂಚೋಳಿ ಎರಡನೇ ಸ್ಥಾನ: ಜಿಲ್ಲೆಯಲ್ಲಿ ಆಳಂದ ಮೊದಲ ಸ್ಥಾನದಲ್ಲಿದ್ದರೆ ಅಲ್ಲಿ 5.54ಲಕ್ಷ, ಚಿಂಚೋಳಿ 4.30ಲಕ್ಷ ಮಾನವ ದಿನಗಳು ಸೃಜಿಸಲಾಗಿದೆ. ಆಳಂದ ಮೊದಲ ಸ್ಥಾನ, ಎರಡನೇ ಸ್ಥಾನದಲ್ಲಿದೆ. ಆಳಂದದಲ್ಲಿ 42 ಗ್ರಾ.ಪಂ. ಇದ್ದರೆ ಚಿಂಚೋಳಿಯಲ್ಲಿ 29 ಗ್ರಾ.ಪಂ.ಗಳಿವೆ.

ವಲಸೆಗಾರರು ಚಿಂಚೋಳಿಯಲ್ಲಿ ಅತಿ ಹೆಚ್ಚು ಅಂದರೆ 10ಸಾವಿರಕ್ಕಿಂತಲೂ ಅಧಿಕ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.