ADVERTISEMENT

ನನ್ನ ಊರಿಗೆ ಬಂದರೆ ಏಕೆ ಹೊಟ್ಟೆ ಉರಿ; ಸಂಸದ ಡಾ. ಉಮೇಶ ಜಾಧವ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 3:55 IST
Last Updated 7 ಡಿಸೆಂಬರ್ 2021, 3:55 IST
ಡಾ. ಉಮೇಶ ಜಾಧವ
ಡಾ. ಉಮೇಶ ಜಾಧವ   

ಚಿಂಚೋಳಿ: ‘ನನ್ನ ಊರಿಗೆ ನಾನು ಬಂದರೆ ನಿಮಗೆ ಏಕೆ ಹೊಟ್ಟೆ ಉರಿ? ನನ್ನೂರಿಗೆ ಬಂದು ಹೋಗಲು ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ’ ಎಂದು ಸಂಸದ ಡಾ. ಉಮೇಶ ಜಾಧವ ಹೇಳಿದರು.

ಚಿಂಚೋಳಿಯಲ್ಲಿ ಕಾಂಗ್ರೆಸ್ ಮುಖಂಡರುಈಚೆಗೆ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಸಂಸದರ ವಿರುದ್ಧ ಮಾಡಿದ್ದ ಆರೋಪಗಳಿಗೆ ಸೋಮವಾರ ಇಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಜಾಧವ ಅವರು ನೀಡಿದ ಪ್ರತಿಕ್ರಿಯೆ ಇದು.

‘ನಾನು ಹುಟ್ಟಿ ಬೆಳೆದದ್ದು ಬೆಡಸೂರು ತಾಂಡಾದಲ್ಲಿ. ರಾಜಕೀಯ ಜನ್ಮ ನೀಡಿ ಪೋಷಿಸಿ, ಬೆಳೆಸಿದವರು ಚಿಂಚೋಳಿ ಕ್ಷೇತ್ರದ ಮತದಾರರು. ಸಂಸದರಾಗಲೂ ಪ್ರೇರಣೆ ಸಿಕ್ಕಿದ್ದು ಇದೇ ಕ್ಷೇತ್ರದಿಂದ’ ಎಂದು ಹೇಳಿದರು.

ADVERTISEMENT

‘ಸಂಸದರಾದ ಬಳಿಕ ಚಿಂಚೋಳಿಗೆ ಬರಬಾರದೇ? ನಾನು ಇಲ್ಲಿಗೆ ಬರಬಾರದು ನನ್ನನ್ನು ಹೊರಗಿನವನು ಎಂದು ನೀವು ಭಾವಿಸಿದ್ದರೆ, ಚಿಂಚೋಳಿಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಹೊರಗಿನವರು ಅಲ್ಲವೇ? ನನ್ನ ವಿರುದ್ಧ ಟೀಕೆ ಮಾಡುವ ನೈತಿಕತೆ ನಿಮಗೆ ಇದೆಯಾ?’ ಎಂದು ಪ್ರಶ್ನಿಸಿದರು.

‘ಡಾ. ರಾಮರಾವ್ ಮಹಾರಾಜರ ಸಮ್ಮುಖದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವು. ಶಾಸಕ ಪ್ರಿಯಾಂಕ್ ಖರ್ಗೆ ಅವರು ಮನವಿಯಲ್ಲಿನ ಅಂಶಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದು ಟೀಕಿಸಿದರು.

‘ನನ್ನ ವಿರುದ್ಧ ಬಂಜಾರ ಸಮುದಾಯಕ್ಕೆ ತಪ್ಪು ಸಂದೇಶ ರವಾನಿಸಿ ನನ್ನ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿದ ಮೇಲೂ ತಮ್ಮ ಹಳೆಯ ಚಾಳಿ ಮುಂದುವರಿಸಿದ್ದಾರೆ. ಇದು ಹೀಗೆ ಮುಂದುವರಿದರೆ ಅವರ ವಿರುದ್ಧ ಕಾನೂನು ಹೋರಾಟ ನಡೆಸುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ಸಂಸತ್‌ನಲ್ಲಿ ಎರಡು ಬಾರಿ ಪ್ರಶ್ನಿಸಿದ್ದೇನೆ’ ಎಂದು ಸ್ಪಷ್ಟನೆ ನೀಡಿದರು.

‘ಅಧಿಕಾರಿಯೊಬ್ಬ ವಿಮಾನ ನಿಲ್ದಾಣದಲ್ಲಿದ್ದ ಸೇವಾಲಾಲ್ ಮರಿಯಮ್ಮ ದೇವಿಯ ಮಂದಿರ ಉರುಳಿಸಿ, ಮೂರ್ತಿಗಳನ್ನು ಪುಡಿ ಮಾಡಿದ್ದರು. ಇದರಿಂದ ಬಂಜಾರ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಈ ಘಟನೆಯನ್ನು ಲೋಕಸಭೆಯ ಗಮನಕ್ಕೆ ತಂದು, ವಿಮಾನ ನಿಲ್ದಾಣಕ್ಕೆ ಸೇವಾಲಾಲ್ ಮಹಾರಾಜರ ಹೆಸರಿಡಬೇಕು. ಇದು ಬಂಜಾರ ಸಮುದಾಯದವರ ಭಾವನೆ ವಿಷಯ ಎಂದಿದ್ದೆ. ವಿಮಾನ ನಿಲ್ದಾಣಕ್ಕೆ ಬಸವಣ್ಣ ಅವರ ಹೆಸರು ಇಡುತ್ತೇನೆ ಎಂದು ನಾನು ಎಲ್ಲೂ ಹೇಳಿಲ್ಲ. ಈ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ’ ಎಂದು ಸವಾಲು ಹಾಕಿದರು.

‘ಪ್ರಿಯಾಂಕ್ ಖರ್ಗೆ ಅವರು ಚಿಂಚೋಳಿಗೆ ಬಂದಿದ್ದು ಶಿವಾನಂದ ಪಾಟೀಲ ಗೆಲ್ಲಿಸಲು ಅಲ್ಲ. ಬದಲಾಗಿ, ಅವಿನಾಶ ಮತ್ತು ಉಮೇಶ ಜಾಧವ ಅವರನ್ನು ಟೀಕಿಸಲು. ಹೇಗಾದರೂ ಮಾಡಿ ಕೋಲಿ, ಕುರುಬ, ಲಿಂಗಾಯತ ಮತ್ತು ಬಂಜಾರ ಸಮುದಾಯವರನ್ನು ನನ್ನ ವಿರುದ್ಧ ಎತ್ತಿ ಕಟ್ಟಿ ಸೋಲಿಸಲು ಬಂದಿದ್ದರು’ ಎಂದು ಆರೋಪಿಸಿದರು.

‘ನೀವು ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದ್ದಾಗ ಹಲವು ಬಾರಿ ಸಕ್ಕರೆ ಕಾರ್ಖಾನೆ ಕುರಿತು ಪ್ರಸ್ತಾಪಿಸಿದ್ದೇನೆ. ಆದರೆ, ನೀವು ಅವುಗಳಿಗೆ ಸ್ಪಂದಿಸಲಿಲ್ಲ. ಬಸನಗೌಡ ಯತ್ನಾಳ್ ಅವರು ಕಾರ್ಖಾನೆ ಸ್ಥಾಪಿಸುತ್ತಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕರಿಗೆಅರಗಿಸಿಕೊಳ್ಳಲು ಆಗುತ್ತಿಲ್ಲ‘ ಎಂದರು.

ಜನರ ಹಾದಿ ತಪ್ಪಿಸುತ್ತಿರುವ ಕಾಂಗ್ರೆಸ್


ಚಿಂಚೋಳಿ: ‘ಚುನಾವಣೆ ಬಂದಾಗ ಜನರ ದಾರಿ ತಪ್ಪಿಸುವುದರಲ್ಲಿ ಕಾಂಗ್ರೆಸ್‌ ನಾಯಕರು ನಿಸ್ಸೀಮರು’ ಎಂದು ಶಾಸಕ ಡಾ. ಅವಿನಾಶ ಜಾಧವ ಟೀಕಿಸಿದರು.

ತಾಲ್ಲೂಕಿನ ಕುಂಚಾವರಂನಲ್ಲಿ ಸೋಮವಾರ ನಡೆದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಅಭ್ಯರ್ಥಿ ಬಿ.ಜಿ ಪಾಟೀಲ ಪರ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಮುಲ್ಲಾಮಾರಿ ಯೋಜನೆಯ ಕಾಲುವೆ ನವೀಕರಣದ ಅವ್ಯವಹಾರ ಪ್ರಶ್ನಿಸಿದ್ದು ನಾನು. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಏನು ಮಾಡುತ್ತಿದ್ದೀರಿ? ಎಷ್ಟು ಬಾರಿ ಕೆಡಿಪಿ ಸಬೆ ನಡೆಸಿದ್ದೀರಿ’ ಎಂದು ಪರೋಕ್ಷವಾಗಿಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಬಿಜೆಪಿ ಅಭ್ಯರ್ಥಿ ಬಿ.ಜಿ.ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೆವಾಡಿ, ಕೆ.ಎಂ.ಬಾರಿ ಮಾತನಾಡಿದರು.

ಮುಖಂಡರಾದ ಮುಕುಂದ ದೇಶಪಾಂಡೆ, ಬಾಬುರಾವ್ ಪಾಟೀಲ, ಡಾ. ವಿಕ್ರಮ ಪಾಟೀಲ, ಗೌತಮ ಪಾಟೀಲ, ಅಶೋಕ ಚವ್ಹಾಣ್, ಜಗದೀಶಸಿಂಗ್ ಠಾಕೂರ್, ದೀವಾಕರರಾವ್ ಜಹಾಗಿರದಾರ್, ಶಶಿಧರ ಸೂಗೂರು, ಸಂಜೀವ ಕೊಂಡ, ಚನ್ನಯ್ಯ ಶೇಠ, ಡಾ. ಅಂಜಯ್ಯ, ಗ್ರಾ.ಪಂ. ಅಧ್ಯಕ್ಷೆ ಸುಜಾತಾ ರಮೇಶ ಸಂಕಟಿ, ಸಂತೋಷ ಗಡಂತಿ, ವಿಜಯಕುಮಾರ ರಾಠೋಡ್, ರಾಜು ರಾಠೋಡ್ ಇದ್ದರು.

ಚಿಮ್ಮನಚೋಡದಲ್ಲೂ ಪ್ರಚಾರ ಸಭೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.