ADVERTISEMENT

ಹೇರೂರ (ಬಿ): 12 ಎಕರೆ ಕಬ್ಬಿನ ಹೊಲಕ್ಕೆ ಬೆಂಕಿ

₹18 ಲಕ್ಷಕ್ಕೂ ಅಧಿಕ ನಷ್ಟ; ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 5:46 IST
Last Updated 14 ಜನವರಿ 2022, 5:46 IST
ಕಲಬುರಗಿ ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಗೌಡಗೊಂಡ ಕುಟುಂಬದವರ ಕಬ್ಬಿನ ಹೊಲಕ್ಕೆ ಬೆಂಕಿ ಹೊತ್ತಿಕೊಂಡು ಭಸ್ಮವಾಗಿರುವುದು
ಕಲಬುರಗಿ ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಗೌಡಗೊಂಡ ಕುಟುಂಬದವರ ಕಬ್ಬಿನ ಹೊಲಕ್ಕೆ ಬೆಂಕಿ ಹೊತ್ತಿಕೊಂಡು ಭಸ್ಮವಾಗಿರುವುದು   

ಕಲಬುರಗಿ: ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಬೈಲಪ್ಪ ಹುಲೆಪ್ಪ ಗೌಡಗೊಂಡ ಹಾಗೂ ಅವರ ಸಹೋದರರ ಹೊಲದ ಮಧ್ಯದ ಟಿ.ಸಿ.ಯಿಂದ ಬೆಂಕಿಯ ಜ್ವಾಲೆ ಸಿಡಿದು ಸುಮಾರು 12 ಎಕರೆಗೂ ಅಧಿಕ ಕಬ್ಬಿನ ಹೊಲ ಗುರುವಾರ ಸಂಜೆ ಬೆಂಕಿಗೆ ಆಹುತಿಯಾಗಿದೆ.

ಅಂದಾಜು ₹ 18 ಲಕ್ಷ ನಷ್ಟವಾಗಿದೆ ಎಂದು ರೈತರು ತಿಳಿಸಿದ್ದಾರೆ.

ಬೈಲಪ್ಪ ಹುಲೆಪ್ಪ ಗೌಡಗೊಂಡ ಅವರ 6 ಎಕರೆ 7 ಗುಂಟೆ, ನಾಗಪ್ಪ ನಿಂಗಪ್ಪ ಗೌಡಗೊಂಡ ಅವರ 2 ಎಕರೆ 1 ಗುಂಟೆ, ದ್ಯಾವಪ್ಪ ನಿಂಗಪ್ಪ ಗೌಡಗೊಂಡ ಅವರ 4 ಎಕರೆ 1 ಗುಂಟೆ ಜಮೀನಲ್ಲಿರುವ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಹೋಗಿದೆ. ಸರ್ವೆ ನಂ. 274ರಲ್ಲಿರುವ ಕಬ್ಬು ಒಂದೇ ಕುಟುಂಬದ ಮೂವರು ಸಹೋದರರಿಗೆ ಸೇರಿದೆ.

ADVERTISEMENT

ಟಿ.ಸಿ.ಯ ಡಿವಾಲ್ ಹಾರಿದ ವೇಳೆ ಸಿಡಿದ ಕಿಡಿ ನೆಲಕ್ಕೆ ಬಿದ್ದು ಕಬ್ಬಿನ ರವದಿಯ ಮೂಲಕ ಇಡೀ ಕಬ್ಬಿಗೆ ಬೆಂಕಿ ವ್ಯಾಪ್ತಿಸಿದೆ ಎಂದು ಬೈಲಪ್ಪ ಗೌಡಗೊಂಡ ತಿಳಿಸಿದ್ದಾರೆ.

ಈ ಕುರಿತು ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಕೆನ್ನಾಲಿಗೆ ಹರಡುತ್ತಿದ್ದಂತೆ ಕಲಬುರಗಿ ಅಗ್ನಿ ಶಾಮಕ ಠಾಣೆಗೆ ಫೋನ್ ಮಾಡಿದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಆದರೆ, ಅಷ್ಟರಲ್ಲಾಗಲೇ ಸಾಕಷ್ಟು ನಷ್ಟ ಉಂಟಾಗಿತ್ತು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.