ADVERTISEMENT

ಕಲಬುರಗಿ: ಬಹುಮಾನದ ಆಮಿಷವೊಡ್ಡಿ ಮಹಿಳೆಗೆ ₹12.67 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2023, 7:02 IST
Last Updated 13 ಜುಲೈ 2023, 7:02 IST
.
.   

ಕಲಬುರಗಿ: ಲಾಟರಿ ಬಹುಮಾನ ಬಂದಿರುವುದಾಗಿ ಹೇಳಿ ನಗರದ ಮಹಿಳೆಯೊಬ್ಬರಿಂದ ₹12.67 ಲಕ್ಷ ವಂಚಿಸಲಾಗಿದ್ದು, ಈ ಸಂಬಂಧ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ(ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೇವರ್ಗಿ ರಸ್ತೆಯ ವಿದ್ಯಾನಗರ ನಿವಾಸಿ ಮೇಘನಾ ಸುಂದರೇಶ್ ಎಂಬುವವರು ದೂರು ನೀಡಿದ್ದಾರೆ. ಆರೋಪಿ ಆಕಾಶ್ ವರ್ಮಾ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

2022ರ ಜು.1ರಂದು ಮೇಘನಾ ಅವರಿಗೆ ಕರೆ ಮಾಡಿದ್ದ ಆರೋಪಿ, ‘ನಿಮ್ಮ ಹೆಸರಿನ ಸಿಮ್ ಕಾರ್ಡ್‌ಗೆ ₹30 ಲಕ್ಷ ಲಾಟರಿ ಬಹುಮಾನ ಬಂದಿದೆ. ಸದ್ಯ ನೀವು ₹8,200 ಬ್ಯಾಂಕ್‌ ಖಾತೆಗೆ ಜಮೆ ಮಾಡಿ, ನಿಮ್ಮ ಬಹುಮಾನ ಹಣ ವರ್ಗಾವಣೆ ಮಾಡುತ್ತೇವೆ’ ಎಂದಿದ್ದ. ಅದನ್ನು ನಂಬಿ ಮಹಿಳೆ, ಆರೋಪಿ ಹೇಳಿದ್ದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹12.67 ಲಕ್ಷ ಸಂದಾಯ ಮಾಡಿದ್ದರು. ಜಮಾ ಮಾಡಿಸಿಕೊಂಡ ಹಣ ಮರಳಿಸಿಲ್ಲ. ಬಹುಮಾನದ ಹಣ ಕೊಡುವುದಾಗಿ ವಂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಕೊಲೆಗೆ ಯತ್ನಸಿದ್ದ ಇಬ್ಬರ ಬಂಧನ: ಹಣಕಾಸಿನ ವಿಚಾರಕ್ಕಾಗಿ ಸ್ನೇಹಿತನಿಗೆ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿ ಪರಾರಿಯಾದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ರಾಘವೇಂದ್ರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇಕ್ಬಾಲ್ ಕಾಲೊನಿ ನಿವಾಸಿ ಶೇಖ್ ಮುಬಿನ್(19) ಮತ್ತು ಮಿಸ್ಬಾ ನಗರ ನಿವಾಸಿ ಮಹಮದ್ ಇರ್ಫಾನ್ ಖಾಸಿಂ(20) ಬಂಧಿತ ಆರೋಪಿಗಳು.

ಇಕ್ಬಾಲ್ ಕಾಲೊನಿಯಲ್ಲಿ ಜು.3ರ ಮಧ್ಯಾಹ್ನದ ವೇಳೆ ಹಣಕಾಸಿನ ಸಂಬಂಧ ಗಲಾಟೆ ನಡೆಯಿತು. ಮುಬಿನ್ ಮತ್ತು ಇರ್ಫಾನ್ ಅವರು ಮಹಮದ್ ಹುಸೇನ್ ಅವರ ಹೊಟ್ಟೆ, ಎದೆಗೆ ಚಾಕುವಿನಿಂದ ಇರಿದು ಪರಾರಿ ಆಗಿದ್ದರು. ತನಿಖಾ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾ ತಂಡದಲ್ಲಿ ಪಿಐ ಶಿವಾನಂದ ಎ.ಗಾಣಗೇರ, ಹೆಡ್‌ಕಾನ್‌ಸ್ಟೆಬಲ್‌ಗಳಾದ ಎಚ್‌.ಸಿ. ಸಿಕ್ರೇಶ್ವರ, ಮುಜಾಹಿದ್ ಕೊತ್ವಾಲ್, ಕಾನ್‌ಸ್ಟೆಬಲ್ ಶರಣಬಸವ ಇದ್ದರು.

ಗಾಂಜಾ ಮಾರಾಟ ಆರೋಪ: ಇಬ್ಬರ ಬಂಧನ

ಇಲ್ಲಿನ ಭರತ ನಗರ ತಾಂಡಾದಲ್ಲಿ ಗಾಂಜಾ ಮಾರುತ್ತಿದ್ದ ಆರೋಪದಡಿ ಇಬ್ಬರನ್ನು ಬ್ರಹ್ಮಪುರ ಪೊಲೀಸರು ಬಂಧಿಸಿದ್ದಾರೆ.

ಬಾಪುನಗರ ನಿವಾಸಿಗಳಾದ ವಿಘ್ನೇಶ ಉಪಾಧ್ಯ(25) ಮತ್ತು ಚೆಂಗು ಪಾಟೀಲ ಬಂಧಿತ ಆರೋಪಿಗಳು. ₹4,880 ಮೌಲ್ಯದ ಗಾಂಜಾ, ₹800 ನಗದು ವಶಕ್ಕೆ ಪಡೆಯಲಾಗಿದೆ.

₹32,400 ದಂಡ ವಸೂಲಿ‌

ನಿಗದಿಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗಳಿಗೆ ಕರೆದೊಯ್ಯುತ್ತಿದ್ದ ಆಟೋಗಳ ಮೇಲೆ ಬುಧವಾರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, 162 ಪ್ರಕರಣ ದಾಖಲಿಸಿ ₹32,400 ದಂಡ ವಸೂಲಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.