ADVERTISEMENT

ಕಲಬುರಗಿ: ರಾಜ್ಯ ಸರ್ಕಾರ ಕೆವೈಡಿಸಿಸಿಗೆ ನೀಡುವ ₹17.86 ಕೋಟಿ ಸಹಾಯಧನ ಬಾಕಿ

ಮಧ್ಯಮ ಅವಧಿಯ ಕೃಷಿ ಸಾಲದ ಬಡ್ಡಿ ಮನ್ನಾ ಯೋಜನೆಯ ಸಹಾಯಧನ

ಮಲ್ಲಿಕಾರ್ಜುನ ನಾಲವಾರ
Published 1 ಏಪ್ರಿಲ್ 2025, 23:55 IST
Last Updated 1 ಏಪ್ರಿಲ್ 2025, 23:55 IST
ಕಲಬುರಗಿಯಲ್ಲಿನ ಕೆವೈಡಿಸಿಸಿ ಬ್ಯಾಂಕ್ ಕಚೇರಿ
ಕಲಬುರಗಿಯಲ್ಲಿನ ಕೆವೈಡಿಸಿಸಿ ಬ್ಯಾಂಕ್ ಕಚೇರಿ   

ಕಲಬುರಗಿ: ಕೃಷಿ ಸಂಬಂಧಿತ ಮಧ್ಯಮಾವಧಿ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಮಾಡುವ ಯೋಜನೆಯಡಿ ಕಲಬುರಗಿ– ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ (ಕೆವೈಡಿಸಿಸಿ) ರಾಜ್ಯ ಸರ್ಕಾರವು ₹ 17.86 ಕೋಟಿ ಸಹಾಯಧನದ ಮೊತ್ತ ಪಾವತಿಸಬೇಕಿದೆ.

ಮಧ್ಯಮ ಅವಧಿಯ ಸುಸ್ತಿ ಸಾಲದ ಅಸಲು ಪಾವತಿ ಮಾಡಿದ ರೈತರ ಬಡ್ಡಿ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರವು 2024ರಲ್ಲಿ ಘೋಷಿಸಿತ್ತು. 2024ರ ಜನವರಿ 1ರಿಂದ ಅದೇ ವರ್ಷದ ಮಾರ್ಚ್‌ 31ರ ವರೆಗೆ ಗಡುವು ಸಹ ನಿಗದಿಪಡಿಸಿತ್ತು.

₹200 ಕೋಟಿಗೂ ಹೆಚ್ಚು ಮಧ್ಯಮಾವಧಿ ಸಾಲವನ್ನು ಸಾವಿರಾರು ರೈತರು ಪಡೆದಿದ್ದರು. ಗಡುವು ನೀಡಿದ್ದ ಮೂರು ತಿಂಗಳಲ್ಲಿ  ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ 528 ರೈತರು ₹18.12 ಕೋಟಿ ಸುಸ್ತಿ ಅಸಲು ಮರು ಪಾವತಿಸಿದ್ದರು. ಇದರ ಬಡ್ಡಿ ಮೊತ್ತ ₹18.62 ಕೋಟಿಯಷ್ಟು ಆಗಿತ್ತು. ರಾಜ್ಯ ಸರ್ಕಾರವು ಕೆವೈಡಿಸಿಸಿಗೆ ₹18.62 ಕೋಟಿ ಸಹಾಯಧನವನ್ನು ಪಾವತಿಸಬೇಕಿತ್ತು. ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿ ಮಾಡಿಲ್ಲ.

ADVERTISEMENT

ಬಡ್ಡಿ ಮನ್ನಾ ಘೋಷಿಸಿದ ಒಂದು ವರ್ಷದ ಬಳಿಕ, 2025–26ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಕೊಡುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದು, 2025ರ ಮಾರ್ಚ್ 19ಕ್ಕೆ ₹76.47 ಲಕ್ಷ (ಶೇ 4) ಸಹಾಯಧನವನ್ನು ಪಾವತಿಸಿದ್ದಾರೆ. ಇನ್ನು ₹17.86 ಕೋಟಿ ನೀಡಬೇಕಿದೆ.

ಆಳಂದದಲ್ಲಿ 123 ರೈತರು ₹2.98 ಕೋಟಿ, ಕಲಬುರಗಿ ತಾಲ್ಲೂಕಿನ 84 ರೈತರು ₹3.21 ಕೋಟಿ, ಜೇವರ್ಗಿ ತಾಲ್ಲೂಕಿನ 75 ರೈತರು ₹3.43 ಕೋಟಿ ಮತ್ತು ಅಫಜಲಪುರ ತಾಲ್ಲೂಕಿನ 74 ರೈತರು ₹2.60 ಕೋಟಿ ಅತ್ಯಧಿಕ ಸಾಲದ ಅಸಲು ಮೊತ್ತ ಪಾವತಿಸಿದ್ದರು. ಕಲಬುರಗಿಯ ಒಟ್ಟು 464 ರೈತರು ₹15.76 ಕೋಟಿ ಪಾವತಿಸಿದ್ದು, ಇದರ ಬಡ್ಡಿ ಮೊತ್ತ ₹16.43 ಕೋಟಿ ಆಗಿತ್ತು.

ಯಾದಗಿರಿ ಜಿಲ್ಲೆಯಲ್ಲಿ 64 ರೈತರು ₹2.36 ಕೋಟಿ ಸಾಲದ ಅಸಲು ಮೊತ್ತ ಕಟ್ಟಿದ್ದರು. ಅವರ ಬಡ್ಡಿ ಮೊತ್ತ ₹2.17 ಕೋಟಿಯಾಗಿತ್ತು. ಶಹಾಪುರ ತಾಲ್ಲೂಕಿನ 52 ರೈತರು ₹1.81 ಕೋಟಿಯಷ್ಟು ಅತ್ಯಧಿಕ ಸಾಲ ತೀರಿಸಿದ್ದರು ಎಂಬುದು ಕೆವೈಡಿಸಿಸಿ ನೀಡಿದ ಅಂಕಿ–ಅಂಶಗಳಿಂದ ತಿಳಿದುಬಂದಿದೆ.

ಶೇ 3ರಷ್ಟು ಬಡ್ಡಿ ಶೇ 14.75ಕ್ಕೆ ಏರಿಕೆ: ‘ಕಳೆದ 10 ವರ್ಷಗಳಿಂದ ಗರಿಷ್ಠ ₹8 ಲಕ್ಷದಂತೆ ಟ್ರ್ಯಾಕ್ಟರ್, ಪೈಪ್‌ಲೈನ್ ಖರೀದಿ, ತೋಟಗಾರಿಕೆ ಬೆಳೆಗಳಿಗಾಗಿ ಶೇ 3ರಷ್ಟು ಬಡ್ಡಿ ದರದಲ್ಲಿ ಮಧ್ಯಮಾವಧಿ ಸಾಲ ನೀಡಲಾಗಿತ್ತು. ಆರಂಭದ ಎರಡು ವರ್ಷಗಳಲ್ಲಿ ಸಕಾಲಕ್ಕೆ ಅಸಲು ಮರುಪಾವತಿಸಿದ ರೈತರು, ಆ ಬಳಿಕ ನಿರ್ಲಕ್ಷಿಸಿದರು. ಒಂದೇ ವರ್ಷ ಅಸಲು ಮರುಪಾವತಿ ತಪ್ಪಿಸಿದ್ದರಿಂದ ಬಡ್ಡಿಯ ದರ ಶೇ 14.75ರಷ್ಟು ಆಗಿತ್ತು. ಇದರಿಂದ ಸುಸ್ತಿ ಸಾಲ ಹೆಚ್ಚಾಗಿ, ರೈತರು ಮರುಪಾವತಿಯಿಂದ ಹಿಮ್ಮುಖರಾದರು. ರಾಜ್ಯ ಸರ್ಕಾರವು ಎಚ್ಚೆತ್ತು ಬಡ್ಡಿ ಮನ್ನಾ ಮಾಡುವುದಾಗಿ ಘೋಷಿಸಿತ್ತು’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಸರ್ಕಾರದಿಂದ ತ್ವರಿತ ಸ್ಪಂದನೆ’

‘ಕಳೆದ ವರ್ಷ ಬಡ್ಡಿ ಮನ್ನಾ ಘೋಷಣೆ ಮಾಡಿದ್ದು ಮುಖ್ಯಮಂತ್ರಿಯವರು ಅನುದಾನ ನೀಡುವುದಾಗಿ ಈ ವರ್ಷದ ಬಜೆಟ್‌ನಲ್ಲಿ ಹೇಳಿದ್ದಾರೆ. ಡಿಸಿಸಿ ಬ್ಯಾಂಕ್‌ನ ಬಡ್ಡಿ ಸಹಾಯಧನ ಬಿಡುಗಡೆಯಲ್ಲಿ ಸರ್ಕಾರ ಮತ್ತು ಸಹಕಾರ ಸಚಿವರು ತ್ವರಿತವಾಗಿ ಸ್ಪಂದಿಸುವರು’ ಎಂದು ಕೆವೈಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಧ್ಯಮ ಅವಧಿ ಸಾಲದ ಮೊತ್ತವನ್ನು ಅಪೆಕ್ಸ್ ಬ್ಯಾಂಕ್‌ಗೆ ಈಗಾಗಲೇ ಪಾವತಿಸಿದ್ದೇವೆ. ಉಳಿದ ರೈತರಿಂದ ಸುಮಾರು ₹30 ಕೋಟಿ ಬರಬೇಕಿದ್ದು ಈ ಹಣವೂ ಬ್ಯಾಂಕ್‌ಗೆ ಸೇರಲಿದೆ. ಕೇಂದ್ರ ಸರ್ಕಾರವು ಎರಡು ವರ್ಷಗಳ ₹23 ಕೋಟಿ ಬಡ್ಡಿ ಸಹಾಯಧನ ಪೈಕಿ ₹20 ಕೋಟಿ ಬಿಡುಗಡೆ ಮಾಡಿದೆ. ಬ್ಯಾಂಕ್‌ನಲ್ಲಿ ಆರ್ಥಿಕ ಶಿಸ್ತು ಕಾಪಾಡುತ್ತಿರುವುದರಿಂದ ಈ ವರ್ಷ ₹9 ಕೋಟಿಯಷ್ಟು ಲಾಭಾಂಶದ ನಿರೀಕ್ಷೆ ಇದೆ’ ಎಂದರು. ‘ಸರ್ಕಾರವು ಬಡ್ಡಿ ಮನ್ನಾದ ಹಣವನ್ನು ಸಕಾಲಕ್ಕೆ ನೀಡಿದರೆ ಕೆಳ ಹಂತದಿಂದ ಮೇಲೇಳುತ್ತಿರುವ ಬ್ಯಾಂಕ್‌ಗಳಿಗೆ ಅನುಕೂಲ ಆಗುತ್ತದೆ. ಇಲ್ಲದಿದ್ದರೆ ಬ್ಯಾಲೆನ್ಸ್‌ಶೀಟ್ ನಿರ್ವಹಣೆಯಲ್ಲಿ ಕಷ್ಟವಾಗುತ್ತದೆ. ಆರ್ಥಿಕವಾಗಿ ಸದೃಢತೆ ಇರುವ ಬ್ಯಾಂಕ್‌ಗಳಿಗೆ ಇದರಿಂದ ಸಮಸ್ಯೆಯಾಗಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.