ADVERTISEMENT

22 ಮೀನುಗಾರರ ಸಹಕಾರ ಸಂಘಗಳು: ಜಿಲ್ಲೆಯಲ್ಲಿ ಹೆಚ್ಚಿದ ಮೀನು ಕೃಷಿ

6 ಜಲಾಶಯಗಳಲ್ಲಿ ಮೀನುಗಾರಿಕೆಗೆ ಅವಕಾಶ

ಭೀಮಣ್ಣ ಬಾಲಯ್ಯ
Published 23 ಅಕ್ಟೋಬರ್ 2021, 3:04 IST
Last Updated 23 ಅಕ್ಟೋಬರ್ 2021, 3:04 IST
ಕಮಲಾಪುರ ತಾಲ್ಲೂಕಿನ ಓಕಳಿ ಕೆರೆಯಲ್ಲಿ ಮರಿಗಳಿಗೆ ಆಹಾರ ಹಾಕುತ್ತಿರುವುದು
ಕಮಲಾಪುರ ತಾಲ್ಲೂಕಿನ ಓಕಳಿ ಕೆರೆಯಲ್ಲಿ ಮರಿಗಳಿಗೆ ಆಹಾರ ಹಾಕುತ್ತಿರುವುದು   

ಕಲಬುರಗಿ: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಕೆರೆಗಳು ಭರ್ತಿಯಾಗಿದ್ದು, ಮೀನು ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಜಿಲ್ಲೆಯಲ್ಲಿ 7500 ಮೀನುಗಾರರಿದ್ದಾರೆ. ಮೀನುಗಾರಿಕೆ ಇಲಾಖೆಯು 82 ಕೆರೆಗಳು ಹಾಗೂ 6 ಜಲಾಶಯಗಳಿಗೆ ಪರವಾನಗಿ ನೀಡುವ ಅಧಿಕಾರ ಹೊಂದಿದೆ. ಈಗಾಗಲೇ 74 ಕೆರೆ ಹಾಗೂ 6 ಜಲಾಶಯಗಳನ್ನು ಗುತ್ತಿಗೆ ನೀಡಿದೆ. ಇದಕ್ಕೆ ಮೀನುಗಾರರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

ಮೀನುಗಾರರು ಜಿಲ್ಲೆಯಲ್ಲಿ 22 ಸಹಕಾರ ಸಂಘಗಳನ್ನು ರಚಿಸಿಕೊಂಡಿದ್ದಾರೆ. ಇಲಾಖೆಯ ಚಿಂಚೋಳಿ ಸಹಾಯಕ ನಿರ್ದೇಶಕರ ಕಚೇರಿ ವ್ಯಾಪ್ತಿಯಲ್ಲಿ ಏಳು ಸಂಘಗಳಿವೆ. ಸೇಡಂ, ಚಿತ್ತಾಪುರ, ಕಾಳಗಿ ಮತ್ತು ಶಹಾಬಾದ್‌ ತಾಲ್ಲೂಕುಗಳು ಈ ಕಚೇರಿ ವ್ಯಾಪ್ತಿಗೆ ಬರುತ್ತವೆ.

ADVERTISEMENT

ಕಲಬುರಗಿ ಕಚೇರಿ ವ್ಯಾಪ್ತಿಯಲ್ಲಿ 15 ಸಂಘಗಳಿವೆ. ಅಫಜಲಪುರ, ಆಳಂದ, ಜೇವರ್ಗಿ, ಕಮಲಾಪುರ ಹಾಗೂ ಯಡ್ರಾಮಿ ಇದರ ವ್ಯಾಪ್ತಿಗೆ ಬರುತ್ತವೆ. ಪ್ರತಿ ಸಂಘವೂ 100 ರಿಂದ 200 ಜನ ಸದಸ್ಯರನ್ನು ಹೊಂದಿದೆ. ಅವರು ಜಿಲ್ಲೆಯ ಕೆಲ ಕೆರೆಗಳನ್ನು ಗುತ್ತಿಗೆ ಪಡೆದು ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.

ಗುತ್ತಿಗೆ ವಿಧಾನ: ಇಲಾಖೆಯು ಕೆರೆ ಹಾಗೂ ಜಲಾಶಯಗಳನ್ನು ನೇರ ಹಾಗೂ ಹರಾಜು ಪ್ರಕ್ರಿಯೆಯ ಮೂಲಕ 5 ವರ್ಷದ ಅವಧಿಗೆ ಗುತ್ತಿಗೆ ನೀಡುತ್ತದೆ. ಮೊದಲ ವರ್ಷ ಹೊರತುಪಡಿಸಿ ಉಳಿದ ಅವಧಿಗೆ ಪ್ರತಿ ವರ್ಷ ಗುತ್ತಿಗೆ ಹಣ ಶೇ 5 ರಷ್ಟು ಹೆಚ್ಚಳವಾಗುತ್ತದೆ. ವಿಶೇಷವಾಗಿ ಸಂಘಗಳಿಗೆ ಸದ್ಯ ಒಂದು ಎಕರೆ ಕೆರೆ ಹಾಗೂ ಜಲಾಶಯ ಪ್ರದೇಶಕ್ಕೆ ₹300 ನಿಗದಿ ಮಾಡಲಾಗಿದೆ. ಇದನ್ನು ಸರ್ಕಾರ ₹500ಕ್ಕೆ ಹೆಚ್ಚಿಸಿದೆ. ಆದರೆ ಅದು ಇನ್ನೂ ಜಾರಿಯಾಗಿಲ್ಲ.

ಗುತ್ತಿಗೆ ಹಣವನ್ನು ಏಪ್ರಿಲ್‌ 30ರೊಳಗೆ ಪಾವತಿಸಬೇಕು. ಇಲ್ಲದಿದ್ದರೆ, ಇಲಾಖೆ ವತಿಯಿಂದ ಮೇ ತಿಂಗಳಲ್ಲಿ ನೋಟಿಸ್‌ ಕಳುಹಿಸಲಾಗುವುದು. ಸಕರಾತ್ಮಕವಾಗಿ ಸ್ಪಂದಿಸದಿದ್ದರೆ ಅವರ ಪರವಾನಗಿ ರದ್ದುಪಡಿಸಿ, ನೇರ ಗುತ್ತಿಗೆ ಹಾಗೂ ಹರಾಜಿನಲ್ಲಿ ಆ ಕೆರೆಯನ್ನು ಬೇರೆಯವರಿಗೆ ನೀಡಲಾಗುತ್ತದೆ. ಒಂದು ವೇಳೆ ಬರಗಾಲದಂಥ ನೈಸರ್ಗಿಕ ವಿಕೋಪಗಳು ಎದುರಾದರೆ, ಜಲಮೂಲಗಳ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಸರ್ಕಾರದಿಂದ ಆದೇಶ ಬಂದರೆ, ಗುತ್ತಿಗೆ ಹಣ ಮನ್ನಾ ಮಾಡಲಾಗುತ್ತದೆ.

ಸಾಮಗ್ರಿ ಕಿಟ್‌ ವಿತರಣೆ: ಎಸ್‌ಟಿಪಿ, ಟಿಎಸ್‌ಪಿ ಅನುದಾನದಲ್ಲಿ ಇಲಾಖೆಯಿಂದ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮೀನುಗಾರರಿಗೆ ಮೀನುಗಾರಿಕಾ ಸಾಮಗ್ರಿ ಕಿಟ್‌ ವಿತರಿಸಲಾಗುತ್ತದೆ. ಅದು ಮೀನಿನ ಬಲೆ, ಜೀವರಕ್ಷಕ ಜಾಕೇಟ್ ಹಾಗೂ ತಕ್ಕಡಿ ಹೊಂದಿರುತ್ತದೆ. ಈಗಾಗಲೇ ಪರಿಶಿಷ್ಟ ಜಾತಿಯ 30 ಹಾಗೂ ಪರಿಶಿಷ್ಟ ಪಂಗಡದ 20 ಜನ ಮೀನುಗಾರರಿಗೆ ಕಿಟ್‌ ವಿತರಿಸಲಾಗಿದೆ.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಮೀನು ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಯೋಜನೆ ಜಾರಿ ಮಾಡಲಾಗಿದೆ. ಇದರಡಿ ಮೀನು ಕೊಳ ನಿರ್ಮಾಣಕ್ಕೆ ಒಂದು ಹೆಕ್ಟೇರ್‌ಗೆ ಸಾಮಾನ್ಯ ವರ್ಗದವರಿಗೆ ಶೇ 40 ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ 60 ರಷ್ಟು ಸಹಾಯಧನನೀಡಲಾಗುತ್ತದೆ. ಯೋಜನೆಯಡಿ 2020–21 ನೇ ಸಾಲಿನಲ್ಲಿ 25 ಮೀನುಗಾರರು ಕೊಳ ನಿರ್ಮಿಸಿಕೊಂಡಿದ್ದಾರೆ. 24 ಹೆಕ್ಟೇರ್‌ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದಾರೆ.

ಮೀನು ಕೊಳ ನಿರ್ಮಿಸಿದ ಬಳಿಕ ಮೀನು ಸಾಕಾಣಿಕೆಗಾಗಿ ಒಂದು ಹೆಕ್ಟೇರ್‌ಗೆ ₹4 ಲಕ್ಷದವರೆಗೂ ಹಣ ನೀಡಲಾಗುತ್ತದೆ.

ಒಳನಾಡು ಮೀನು ಕೃಷಿ ಪ್ರೋತ್ಸಾಹ ಯೋಜನೆಯಡಿ ಸಹಕಾರ ಸಂಘಗಳು ಗುತ್ತಿಗೆ ಪಡೆದ ಕೆರೆ ಹಾಗೂ ಜಲಾಶಯಗಳಲ್ಲಿ ಒಂದು ಹೆಕ್ಟೇರ್‌ ಪ್ರದೇಶದಲ್ಲಿ 40 ಸಾವಿರ ಮೀನು ಮರಿಗಳನ್ನು ಇಲಾಖೆ ವತಿಯಿಂದ ಉಚಿತವಾಗಿ ಬಿಡಲಾಗುತ್ತದೆ.

ಸಂಚಾರ ಹಾಗೂ ಚಿಲ್ಲರೆ ಮೀನು ಖಾದ್ಯಗಳ ಕ್ಯಾಂಟೀನ್‌ ತೆಗೆಯಲು ಇಲಾಖೆ ಧನಸಹಾಯ ನೀಡುತ್ತಿದೆ. ಆದರೆ, ಜಿಲ್ಲೆಯಲ್ಲಿ ಯಾರೂ ಇದಕ್ಕೆ ಅರ್ಜಿ ಹಾಕಿಲ್ಲ ಎನ್ನುವುದು ಇಲಾಖೆ ಅಂಕಿ–ಅಂಶಗಳಿಂದ ತಿಳಿದುಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.