ADVERTISEMENT

ಸೊನ್ನ: 2,500 ಕ್ಯುಸೆಕ್‌ ನೀರು ನದಿಗೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 14:42 IST
Last Updated 6 ಜುಲೈ 2020, 14:42 IST
ಅಫಜಲಪುರ ತಾಲ್ಲೂಕಿನ ಸೊನ್ನಾ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಹರಿಸಿದ್ದನ್ನು ಎಂಜಿನಿಯರ್‌ ಅಶೋಕ ಆರ್. ಕಲಾಲ್ ಸೋಮವಾರ ಪರಿಶೀಲಿಸಿದರು
ಅಫಜಲಪುರ ತಾಲ್ಲೂಕಿನ ಸೊನ್ನಾ ಬ್ಯಾರೇಜ್‌ನಿಂದ ಭೀಮಾ ನದಿಗೆ ನೀರು ಹರಿಸಿದ್ದನ್ನು ಎಂಜಿನಿಯರ್‌ ಅಶೋಕ ಆರ್. ಕಲಾಲ್ ಸೋಮವಾರ ಪರಿಶೀಲಿಸಿದರು   

ಕಲಬುರ್ಗಿ: ಅಫಜಲಪುರ ತಾಲ್ಲೂಕಿನ ಸೊನ್ನ ಬ್ಯಾರೇಜ್‌ನಿಂದ ಸೋಮವಾರ 2,500 ಕ್ಯುಸೆಕ್‌ ನೀರನ್ನು ಭೀಮಾ ನದಿಗೆ ಹರಿಸಲಾಗಿದೆ ಎಂದು ಭೀಮಾ ಏತ‌ ನೀರಾವರಿ ಯೋಜನೆಯ ಕಾರ್ಯಪಾಲಕ ಎಂಜಿನಿಯರ್‌ ಅಶೋಕ ಆರ್. ಕಲಾಲ್ ತಿಳಿಸಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಬ್ಯಾರೇಜಿಗೆ ಒಳಹರಿವಿನ‌ ನೀರಿನ ಪ್ರಮಾಣ 2,500 ಕ್ಯುಸೆಕ್‌ ಇದೆ. ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಆದ್ದರಿಂದ ನದಿ ಡಂಡೆಯಲ್ಲಿರುವ ಸಾರ್ವಜನಿಕರು ನದಿಯ ದಡಕ್ಕೆ ಹೋಗದಂತೆ ಮತ್ತು ಜಾನುವಾರುಗಳನ್ನು ಬಿಡದಂತೆ ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ಸೊನ್ನ ಬ್ಯಾರೇಜ್‌ ಸಾಮರ್ಥ್ಯ 3.16 ಟಿ‌ಎಂ‌ಸಿ ಅಡಿ. ಸೋಮವಾರ ಬೆಳಿಗ್ಗೆ 2.8 ಟಿಎಂಸಿ ಅಡಿ ನೀರು ಸಂಗ್ರಹಗೊಂಡಿದೆ. ಕಳೆದ ವರ್ಷ ಇದೇ ದಿನಕ್ಕೆ ಹೋಲಿಸಿದರೆ ನೀರಿನ ಸಂಗ್ರಹಣೆ‌ ಪ್ರಮಾಣ ಹೆಚ್ಚಿದೆ. ಕಳೆದ ವರ್ಷದ ಆಗಸ್ಟ್ 2ನೇ ವಾರದಲ್ಲಿ ಈ ಪ್ರಮಾಣದ ನೀರು ಬ್ಯಾರೇಜಿನಲ್ಲಿ ಸಂಗ್ರಹವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ADVERTISEMENT

ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಭೀಮಾ ಜಲಾನಯನ ಪ್ರದೇಶದಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಿದ್ದು, ಆಗ ನೀರಿನ ಒಳಹರಿವು ಇನ್ನೂ ಹೆಚ್ಚಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಹರಿಸಲಾಗಿದೆ.

ಇದಲ್ಲದೇ, 3.5 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಸಾಮರ್ಥ್ಯವಿರುವ ಮೂರು ಘಟಕಗಳ ಪೈಕಿ ಎರಡು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸಹ ಮಾಡಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.