ADVERTISEMENT

ಶಹಾಪುರ: 27 ಮನೆಗಳು ಭಾಗಶಃ ಕುಸಿತ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 3:53 IST
Last Updated 14 ಅಕ್ಟೋಬರ್ 2020, 3:53 IST
ಶಹಾಪುರ ತಾಲ್ಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಮಳೆಯಿಂದ ಮಣ್ಣಿನ ಮನೆ ಕುಸಿದಿದೆ
ಶಹಾಪುರ ತಾಲ್ಲೂಕಿನ ಶಾರದಹಳ್ಳಿ ಗ್ರಾಮದಲ್ಲಿ ಸೋಮವಾರ ಸುರಿದ ಮಳೆಯಿಂದ ಮಣ್ಣಿನ ಮನೆ ಕುಸಿದಿದೆ   

ಶಹಾಪುರ: ಶನಿವಾರ ತಡರಾತ್ರಿಯಿಂದ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನಲ್ಲಿ 27 ಮಣ್ಣಿನ ಮನೆ ಭಾಗಶಃ ಕುಸಿದಿವೆ. ಆದರೆ ಯಾವುದೇ ಜೀವ ಹಾನಿಯಾಗಿಲ್ಲ ಎಂದು ತಹಶೀಲ್ದಾರ್ ಜಗನಾಥರಡ್ಡಿ ತಿಳಿಸಿದ್ದಾರೆ.

ತಾಲ್ಲೂಕಿನ ಶಾರದಹಳ್ಳಿ ಗ್ರಾಮವು ತಗ್ಗು ಪ್ರದೇಶದಲ್ಲಿದ್ದು, ಅದರ ಸುತ್ತಮುತ್ತಲು ಭತ್ತದ ಗದ್ದೆಯ ಜಮೀನುಗಳಿವೆ. ಇದರಿಂದ ಅಲ್ಲಿ ಸದಾ ನೀರು ನಿಲ್ಲುತ್ತದೆ. ಈಗ ಹೆಚ್ಚಿರುವ ಮಳೆ ಹಾಗೂ ಕಾಲುವೆ ನೀರು ಹರಿದು ಬರುತ್ತಿರುವುದರಿಂದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕಳೆದ 20 ದಿನಗಳಲ್ಲಿ 13 ಮನೆ ಬಿದ್ದಿವೆ. ಸೋಮವಾರ 3 ಮನೆಗಳು ಕುಸಿದಿವೆ ಎಂದು ಅವರು ತಿಳಿಸಿದ್ದಾರೆ.

ಮಳೆಯಿಂದ ಹಾನಿ ಸಂಭವಿಸಿದರೂ ಕಂದಾಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿರಲಿಲ್ಲ. ಮಂಗಳವಾರ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಂತರ ತಹಶೀಲ್ದಾರ್ ಹಾಗೂ ಇತರ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ. ಮನೆ ಬಿದ್ದವರಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಡಬೇಕು ಎಂದು ಗ್ರಾಮದ ಯುವಕ ರಾಮಣ್ಣ ಮನವಿ ಮಾಡಿದರು.

ADVERTISEMENT

ತಾಲ್ಲೂಕಿನ ಮರಕಲ್, ಬಿರನೂರ ಗ್ರಾಮದ ಸುತ್ತಮುತ್ತ ಪ್ರದೇಶದಲ್ಲಿ ಭತ್ತದ ನೆಲಕ್ಕೆ ಬಿದ್ದಿರುವ ಬಗ್ಗೆ ಮಾಹಿತಿ ಬಂದಿದೆ. ಅಲ್ಲದೆ ಹತ್ತಿ ಬೆಳೆದ ತಗ್ಗು ಪ್ರದೇಶದ ಜಮೀನುಗಳಲ್ಲಿ ನೀರು ಸಂಗ್ರಹವಾಗಿದೆ. ಸದ್ಯ ಬೆಳೆ ಹಾನಿಯ ಬಗ್ಗೆ ನಿಖರವಾಗಿ ಮಾಹಿತಿ ಇಲ್ಲ. ತಾಲ್ಲೂಕಿನಲ್ಲಿ ಮಳೆ ಮಾಪನದಲ್ಲಿ ದಾಖಲಾಗಿರುವ ವಿವರದಂತೆ ಶಹಾಪುರ 16 ಮಿ.ಮೀ, ಭೀಮರಾಯನಗುಡಿ 17, ಗೋಗಿ 10, ದೋರನಹಳ್ಳಿ 14, ಹಯ್ಯಾಳ 14, ವಡಗೇರಾ 56, ಹತ್ತಿಗೂಡೂರ 13 ಮಿ.ಮೀ ಮಳೆಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಗೌತಮ ವಾಗ್ಮೋರೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.