ADVERTISEMENT

ದೇವಸ್ಥಾನಗಳಿಗೆ ₹ 28 ಕೋಟಿ ಬಿಡುಗಡೆ: ಶಶಿಕಲಾ ಜೊಲ್ಲೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 16:25 IST
Last Updated 23 ಸೆಪ್ಟೆಂಬರ್ 2022, 16:25 IST
ಶಶಿಕಲಾ ಜೊಲ್ಲೆ
ಶಶಿಕಲಾ ಜೊಲ್ಲೆ   

ಕಲಬುರಗಿ: ಕಳೆದ ಮೂರು ವರ್ಷಗಳಲ್ಲಿ ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಗಳ ದೇವಸ್ಥಾನಗಳ ದುರಸ್ತಿ, ಜೀರ್ಣೋದ್ಧಾರ ಸೇರಿ ವಿವಿಧ ಯೋಜನೆಗಳಿಗೆ ಸರ್ಕಾರ ₹ 28 ಕೋಟಿ ಬಿಡುಗಡೆ ಮಾಡಿದೆ ಎಂದು ಮುಜರಾಯಿ, ಹಜ್ ಮತ್ತು ವಕ್ಫ್‌ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಚಿವರು, ‘ದುರಸ್ತಿ, ಜೀರ್ಣೋದ್ಧಾರ, ನಿರ್ಮಾಣ, ಆರಾಧನಾ ಯೋಜನೆ, ಗಿರಿಜನ ಉಪ ಯೋಜನೆ, ತಸ್ತಿಕ್, ವರ್ಷಾಸನದ ಲೆಕ್ಕ ಶೀರ್ಷಿಕೆಗಳಡಿ ಕಲಬುರಗಿ ಜಿಲ್ಲೆಗೆ ₹ 18.42 ಕೋಟಿ ಹಾಗೂ ಯಾದಗಿರಿ ಜಿಲ್ಲೆಗೆ ₹ 9.71 ಕೋಟಿ ಬಿಡುಗಡೆ ಮಾಡಲಾಗಿದೆ’ ಎಂದರು.

‘ಕಲಬುರಗಿ ಜಿಲ್ಲೆಗೆ 2019–20ರಲ್ಲಿ ₹ 6.29 ಕೋಟಿ, 2020–21ರಲ್ಲಿ ₹ 7.70 ಕೋಟಿ ಹಾಗೂ 2021–22ರಲ್ಲಿ ₹ 4.42 ಕೋಟಿ ಬಿಡುಗಡೆಗೊಳಿಸಲಾಗಿದೆ. ಯಾದಗಿರಿ ಜಿಲ್ಲೆಯ ದೇವಸ್ಥಾನಗಳಿಗೆ ಕ್ರಮವಾಗಿ, ₹ 2.89 ಕೋಟಿ, ₹ 4.16 ಕೋಟಿ, ₹ 2.65 ಕೋಟಿ ನೀಡಲಾಗಿದೆ. ಹೊಸದಾಗಿ ಅನುದಾನ ಬಿಡುಗಡೆಗೆ ಕೋರಿ ಕಲಬುರಗಿ ಜಿಲ್ಲೆಯಲ್ಲಿ 12 ಪ್ರಸ್ತಾವನೆಗಳು ಹಾಗೂ ಯಾದಗಿರಿ ಜಿಲ್ಲೆಯಲ್ಲಿ 3 ಪ್ರಸ್ತಾವಗಳು ಸ್ವೀಕೃತವಾಗಿವೆ’ ಎಂದರು.

ADVERTISEMENT

ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 1630 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 1212 ದೇವಸ್ಥಾನಗಳಿವೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.