ADVERTISEMENT

ನ್ಯಾಯಾಲಯಗಳಲ್ಲಿ 566 ಸಿಬ್ಬಂದಿ ಹುದ್ದೆ ಖಾಲಿ

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ನ್ಯಾಯಾಲಯಗಳಿಗೆ ಒಟ್ಟು 2,893 ವಿವಿಧ ಹಂತದ ಸಿಬ್ಬಂದಿ ಹುದ್ದೆಗಳು ಮಂಜೂರು

ಭೀಮಣ್ಣ ಬಾಲಯ್ಯ
Published 31 ಮೇ 2025, 5:50 IST
Last Updated 31 ಮೇ 2025, 5:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರಗಿ: ಕಲ್ಯಾಣ ಕರ್ನಾಟಕದ ನ್ಯಾಯಾಲಯಗಳು ಸಿಬ್ಬಂದಿ ಕೊರತೆ ಎದುರಿಸುತ್ತಿವೆ. ನ್ಯಾಯಾಲಯದ ಆಡಳಿತದಲ್ಲಿ ಪ್ರಮುಖ ಪಾತ್ರ ವಹಿಸುವ ಸಿಬ್ಬಂದಿ ನ್ಯಾಯಾಂಗ, ವಕೀಲರು ಹಾಗೂ ಕಕ್ಷಿದಾರರ ನಡುವೆ ಸಂಪರ್ಕ ಸೇತುವೆಯಾಗಿರುತ್ತಾರೆ. ಆದ ಕಾರಣ ಸಿಬ್ಬಂದಿ ಕೊರತೆ ಪ್ರಕರಣಗಳ ವಿಲೇವಾರಿ ಮೇಲೆ ಪರಿಣಾಮ ಬೀರುತ್ತಿದೆ.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ನ್ಯಾಯಾಲಯಗಳಿಗೆ ಒಟ್ಟು 2,893 ವಿವಿಧ ಹಂತದ ಸಿಬ್ಬಂದಿ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಆ ಪೈಕಿ 566 ಹುದ್ದೆಗಳು ಖಾಲಿ ಇವೆ.

ಬೀದರ್ ಜಿಲ್ಲೆಗೆ ಒಟ್ಟು 481 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 156 ಹುದ್ದೆಗಳು ಖಾಲಿ ಇವೆ. ಬಳ್ಳಾರಿ–ವಿಜಯನಗರಕ್ಕೆ ಮಂಜೂರಾದ 679 ಹುದ್ದೆಗಳಲ್ಲಿ 133 ಹುದ್ದೆಗಳು ಖಾಲಿ ಇವೆ. ಕಲಬುರಗಿ ಜಿಲ್ಲೆಗೆ ಮಂಜೂರಾದ 722 ಹುದ್ದೆಗಳಲ್ಲಿ 91 ಹುದ್ದೆ ಖಾಲಿ ಇವೆ. ಕೊಪ್ಪಳದಲ್ಲಿ 331 ಹುದ್ದೆಗಳ ಪೈಕಿ 63, ರಾಯಚೂರು 434 ಹುದ್ದೆಗಳಲ್ಲಿ 80 ಹುದ್ದೆ ಮತ್ತು ಯಾದಗಿರಿಯಲ್ಲಿ 246 ಹುದ್ದೆಗಳ ಪೈಕಿ 43 ಹುದ್ದೆಗಳು ಖಾಲಿ ಇವೆ.

ADVERTISEMENT

ಸಿಬ್ಬಂದಿಯ ಪಾತ್ರ ಏನು?: ನ್ಯಾಯಾಲಯಗಳಲ್ಲಿರುವ ಸಿಬ್ಬಂದಿ ಪ್ರಕರಣ ಪರಿಶೀಲನೆ, ಕಡತ ನಿರ್ವಹಣೆ ಹಾಗೂ ನೋಟಿಸ್ ಸಿದ್ಧಪಡಿಸುವುದು, ಅದನ್ನು ರವಾನಿಸುವುದು ಹಾಗೂ ಇತರ ಕೆಲಸಗಳನ್ನು ಮಾಡುತ್ತಾರೆ.

ನೇಮಕಾತಿ ಪ್ರಕ್ರಿಯೆ ಹೇಗೆ?: ನ್ಯಾಯಾಲಯಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಭರ್ತಿ ಮಾಡುತ್ತದೆ. ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ನೇತೃತ್ವದ ನೇಮಕಾತಿ ಪ್ರಾಧಿಕಾರವು ಉಳಿದ ಹುದ್ದೆಗಳನ್ನು ಭರ್ತಿ ಮಾಡುತ್ತದೆ. ಕೆಲವು ಹುದ್ದೆಗಳನ್ನು ಮುಂಬಡ್ತಿ ಮೂಲಕ ಭರ್ತಿ ಮಾಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.