ಚಿಂಚೋಳಿ: ಲೌಕಿಕ ಹಾಗೂ ಅಲೌಕಿಕತೆಯಲ್ಲಿ ಭಾರತೀಯರು ತಾತ್ವಿಕ ಚಿಂತನೆಯಲ್ಲಿ ಉನ್ನತ ಮಟ್ಟ ತಲುಪಿದವರಾಗಿದ್ದಾರೆ ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರಿ ಮಾತಾಜಿ ಹೇಳಿದರು.
ತಾಲ್ಲೂಕಿನ ಐನೋಳ್ಳಿ ಗ್ರಾಮದ ಮಾತೆ ಮಾಣಿಕೇಶ್ವರಿ ಮಹಿಳಾ ಮಂಡಳದ 36ನೇ ವಾರ್ಷೀಕೋತ್ಸವದಲ್ಲಿ ಮಾತನಾಡಿದರು.
ಶರಣರು ತಾವಿರುವ ನೆಲೆಯೇ ಸ್ವರ್ಗವಾಗಿಸಿಕೊಂಡು ನೆಮ್ಮದಿಯ ಜೀವನ ನಡೆಸಿದವರಾಗಿದ್ದಾರೆ. ಶರಣರಿಗೆ ಕಾಶಿ, ಕೇದಾರ ಪಾಪ ಕಳೆಯುವ ತಾಣವಾಗಿ ಕಾಣಲಿಲ್ಲ ತಮ್ಮ ನೆಲದಲ್ಲಿಯೇ ಕುಳಿತು ಹಸನಾದ ಬದುಕು ನಡೆಸಿದವರು ಶರಣರು ಎಂದರು.
ಪಾಪ ಕಳೆಯಲು ಎಲ್ಲರೂ ಕಾಶಿಗೆ ತೆರಳಿದರೆ, ಕಾಶಿಯ ಜನ ಎಲ್ಲಿಗೆ ಹೋಗಬೇಕು? ಅವರ ಪಾಪ ಕಳೆಯುವುದು ಹೇಗೆ ಎಂಬುದಕ್ಕೆ ಉತ್ತರವಿರಲಿಲ್ಲ ಹೀಗಾಗಿ ಶರಣರು ತಮ್ಮ ನೆಲೆಯೇ ಸ್ವರ್ಗವಾಗಿಸಿಕೊಂಡು ಸಂತೃಪ್ತ ಜೀವನ ನಡೆಸಿದ್ದಾರೆ ಎಂದರು.
ನಿಡಗುಂದಾದ ಕರುಣೇಶ್ವರ ಶಿವಾವಾರ್ಯರು ಮಾತನಾಡಿ, 36ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಮಾತೆ ಮಾಣಿಕೇಶ್ವರಿ ಮಹಿಳಾ ಮಂಡಳವೂ ಶಿಶು ಪಾಲನಾ ಕೇಂದ್ರ, ಮಕ್ಕಳ ಮಾರಾಟದ ಸಂದರ್ಭದಲ್ಲಿ ತಾಂಡಾಗಳಲ್ಲಿ ಜಾಗೃತಿ, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದರು.
ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಕಲಾ ಸಂಘದ ಅಧ್ಯಕ್ಷ ರಾಮಯ್ಯ ಸ್ವಾಮಿ ಉದ್ಘಾಟಿಸಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿವೃತ್ತ ಸಹ ನಿರ್ದೇಶಕ ಡಾ.ಶಿವರಾಜ ಸಜ್ಜನಶೆಟ್ಟಿ ಮಾತನಾಡಿದರು. ಶಾಂತಾ ಪೋಲಿಸಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಜಯಶ್ರೀ ಚಟ್ನಳ್ಳಿ ಮಾತನಾಡಿದರು. ಸುಧಾ ಮಂದಾ ಸ್ವಾಗತಿಸಿದರು. ಜಯಶ್ರೀ ಚಟ್ನಳ್ಳಿ ನಿರೂಪಿಸಿದರು. ಸುರೇಖಾ ಸುಂಕಾ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.