ADVERTISEMENT

ಜೇವರ್ಗಿ: ಪಾಳುಬಿದ್ದ ಶಾಪಿಂಗ್ ಮಾಲ್‌...

ಜನವಸತಿ ಪ್ರದೇಶದಿಂದ ದೂರದಲ್ಲಿ ನಿರ್ಮಾಣ; ₹1.9 ಕೋಟಿ ವೆಚ್ಚ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:18 IST
Last Updated 13 ಜುಲೈ 2025, 3:18 IST
ಜೇವರ್ಗಿ : ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿರ್ಮಿಸಿದ ಶಾಪಿಂಗ್ ಕಾಂಪ್ಲೆಕ್ಸ್ ಪಾಳು ಬಿದ್ದಿರುವುದು.
ಜೇವರ್ಗಿ : ಪಟ್ಟಣದ ಎಪಿಎಂಸಿ ಆವರಣದಲ್ಲಿ ನಿರ್ಮಿಸಿದ ಶಾಪಿಂಗ್ ಕಾಂಪ್ಲೆಕ್ಸ್ ಪಾಳು ಬಿದ್ದಿರುವುದು.   

ಜೇವರ್ಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಿರ್ಮಿಸಿರುವ ಶಾಪಿಂಗ್ ಮಾಲ್‌ ಬಳಕೆಯಾಗದೇ ಪುಂಡಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಅಂದಾಜು ₹ 1.9 ಕೋಟಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದವರು ನಿರ್ಮಿಸಿರುವ ಶಾಪಿಂಗ್ ಮಾಲ್‌ ಮೂಲಸೌಕರ್ಯ ಇಲ್ಲದೇ ಹಾಳಾಗುತ್ತಿದೆ. ಈ ಮಾಲ್‌ನಲ್ಲಿ ಒಟ್ಟು 42 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದ್ದು, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಬೇಕಾಗಿದೆ.

ಪಟ್ಟಣದ ಬಡ ವ್ಯಾಪಾರಸ್ಥರಿಗೆ ಕಡಿಮೆ ಬಾಡಿಗೆ ದರದಲ್ಲಿ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಕೋಟ್ಯಂತರ ಅನುದಾನ ಒದಗಿಸಿ ನಿರ್ಮಿಸಲಾದ ಶಾಪಿಂಗ್ ಮಾಲ್‌ ಬಳಕೆಗೆ ಮುನ್ನವೇ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ. ಬಹುತೇಕ ಶಟರ್‌ಗಳು ಈಗಾಗಲೇ ಹಾಳಾಗಿದ್ದು, ಕಿಡಿಗೇಡಿಗಳ ಹಾವಳಿಗೆ ಮಾಲ್‌ ಮೇಲ್ಭಾಗದ ಗ್ಲಾಸಿನ ಕಿಟಕಿಗಳು ಹಾಳಾಗಿವೆ. ಸುತ್ತಮುತ್ತಲಿನ ಬಡಾವಣೆಯ ಹಾಗೂ ಹೋಟೆಲ್, ಬೀದಿ ಬದಿಯ ವ್ಯಾಪಾರಸ್ಥರು ಕಸ, ಕಡ್ಡಿ, ಮುಸುರೆ ಹಾಕುವುದು, ಎಪಿಎಂಸಿಗೆ ಹಾಗೂ ತಹಶೀಲ್ದಾರ್‌ ಕಚೇರಿಗೆ ಬರುವ ಜನ ಎಲ್ಲೆಂದರಲ್ಲಿ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಕಟ್ಟಡದ ಸುತ್ತಲೂ ಜಾಲಿಕಂಟಿಗಳು ಬೆಳೆದು ಹೋಗಲು ದಾರಿಯಿಲ್ಲದಾಗಿದೆ.

ADVERTISEMENT

₹1.9 ಕೋಟಿ ವೆಚ್ಚದ ಭವ್ಯವಾದ ಮಾಲ್‌ ನಿರ್ಮಿಸಿ ಮೂಲಸೌಕರ್ಯ ಒದಗಿಸಿ ವ್ಯಾಪಾರಸ್ಥರಿಗೆ ಅನೂಕೂಲ ಕಲ್ಪಿಸದೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆಕೆಆರ್‌ಡಿಬಿ ಅಧ್ಯಕ್ಷರೂ ಆಗಿರುವ ಶಾಸಕ ಡಾ.ಅಜಯ್ ಸಿಂಗ್ ಸೂಕ್ತ ಸೌಲಭ್ಯ ಒದಗಿಸಿ ಮಳಿಗೆಗಳ ಹರಾಜು ಪ್ರಕ್ರಿಯೆ ನಡೆಸುವ ಮೂಲಕ ಬಡ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ.

ಜನವಸತಿ ಪ್ರದೇಶದಿಂದ ದೂರದ ಸ್ಥಳದಲ್ಲಿ ಶಾಪಿಂಗ್ ಮಾಲ್‌ ನಿರ್ಮಾಣ ಮಾಡಿದ್ದರಿಂದ ಅಲ್ಲಿ ವ್ಯಾಪಾರ ನಡೆಯುವುದು ಕಷ್ಟ ಎನ್ನಲಾಗುತ್ತಿದೆ. ಪಟ್ಟಣದ ಕೇಂದ್ರ ಸ್ಥಾನದಲ್ಲಿರುವ ಹಾಗೂ ಜನವಸತಿ ಇರುವ ಡಾ.ಅಂಬೇಡ್ಕರ್ ಪುತ್ಥಳಿ ಎದುರು ಟೌನ್ ಹಾಲ್ ನಿರ್ಮಿಸಿದ ಸ್ಥಳದಲ್ಲಿ ಶಾಪಿಂಗ್ ಮಾಲ್‌ ನಿರ್ಮಿಸಿ, ಅಲ್ಲಿಯೇ ಟೌನ್ ಹಾಲ್ ನಿರ್ಮಾಣ ಮಾಡಬೇಕಾಗಿತ್ತು. ಈ ವಿಷಯದಲ್ಲಿ ಶಾಸಕರು ತಪ್ಪು‌ ಹಾಗೂ ಅವಸರದ ನಿರ್ಧಾರ ಕೈಗೊಂಡಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಶಾಪಿಂಗ್ ಮಾಲ್‌ ಬಳಕೆಗೆ ಅನುಕೂಲ ಮಾಡಿಕೊಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಶಾಪಿಂಗ್ ಮಾಲ್‌ಗೆ ಅಗತ್ಯವಿರುವ ವಿದ್ಯುತ್ ಸಂಪರ್ಕ ಕುಡಿಯುವ ನೀರು ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಿ ಕೂಡಲೇ ವ್ಯಾಪಾರಸ್ಥರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು
– ಸುಮಂಗಲಾದೇವಿ ಹೂಗಾರ, ಕಾರ್ಯದರ್ಶಿ ಎಪಿಎಂಸಿ ಜೇವರ್ಗಿ
ಟೌನ್ ಹಾಲ್ ನಿರ್ಮಿಸಿದ ಸ್ಥಳದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಿಸಿದರೆ ವ್ಯಾಪಾರಿಗಳಿಗೆ ‌ಬಹಳ ಉಪಯೋಗವಾಗುತ್ತಿತ್ತು. ಅವಸರದ ನಿರ್ಧಾರದಿಂದ ಕೋಟ್ಯಂತರ ವೆಚ್ಚದ ಶಾಪಿಂಗ್ ಮಾಲ್‌ ಹಾಳು ಬಿದ್ದಿದೆ
–ಭೀಮರಾಯ ಹಳ್ಳಿ, ಸ್ಥಳೀಯ
ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಶಾಪಿಂಗ್ ಮಾಲ್‌ಗೆ ಅಗತ್ಯ ಸೌಕರ್ಯ ಒದಗಿಸಿ ಕೂಡಲೇ ಹರಾಜು ಪ್ರಕ್ರಿಯೆ ನಡೆಸಬೇಕು
– ರವಿಚಂದ್ರ ಗುತ್ತೇದಾರ, ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.