ADVERTISEMENT

ಬಾಕಿ ಪ್ರಕರಣ ಹೆಚ್ಚಳ; ನ್ಯಾಯಮೂರ್ತಿ ಕಳವಳ

50 ವರ್ಷ ವಕೀಲಿ ವೃತ್ತಿ ಪೂರೈಸಿದ ಹಿರಿಯರಿಗೆ ನ್ಯಾಯವಾದಿಗಳ ಸಂಘದಿಂದ ಸನ್ಮಾನ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 15:30 IST
Last Updated 24 ಸೆಪ್ಟೆಂಬರ್ 2022, 15:30 IST
ಗುಲಬರ್ಗಾ ನ್ಯಾಯವಾದಿಗಳ ಸಂಘದ ಹೈಕೋರ್ಟ್ ಹಾಗೂ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ ಅರಾಧೆ (ಮಧ್ಯದಲ್ಲಿ) ಅವರು ಹಿರಿಯ ವಕೀಲರನ್ನು ಸನ್ಮಾನಿಸಿದರು. ನ್ಯಾಯಮೂರ್ತಿಗಳಾದ ಬಿ. ಶ್ಯಾಮಪ್ರಸಾದ್, ಅಶೋಕ ಕಿಣಗಿ, ಬಿ. ವೀರಪ್ಪ, ಎಚ್‌.ಬಿ.ಪ್ರಭಾಕರ ಶಾಸ್ತ್ರಿ, ದಿನೇಶ್‌ಕುಮಾರ್, ಶಿವಶಂಕರ ಅಮರಣ್ಣವರ, ವಕೀಲರ ಪರಿಷತ್ ರಾಜ್ಯ ಅಧ್ಯಕ್ಷ ಕಾಶಿನಾಥ ಮೋತಕಪಲ್ಲಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಉಪಾಧ್ಯಕ್ಷೆ ಫತ್ರುಬಿ ಎ.ಕೆ. ಶಹಾ ಇದ್ದರು
ಗುಲಬರ್ಗಾ ನ್ಯಾಯವಾದಿಗಳ ಸಂಘದ ಹೈಕೋರ್ಟ್ ಹಾಗೂ ಜಿಲ್ಲಾ ಘಟಕ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟ್ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ ಅರಾಧೆ (ಮಧ್ಯದಲ್ಲಿ) ಅವರು ಹಿರಿಯ ವಕೀಲರನ್ನು ಸನ್ಮಾನಿಸಿದರು. ನ್ಯಾಯಮೂರ್ತಿಗಳಾದ ಬಿ. ಶ್ಯಾಮಪ್ರಸಾದ್, ಅಶೋಕ ಕಿಣಗಿ, ಬಿ. ವೀರಪ್ಪ, ಎಚ್‌.ಬಿ.ಪ್ರಭಾಕರ ಶಾಸ್ತ್ರಿ, ದಿನೇಶ್‌ಕುಮಾರ್, ಶಿವಶಂಕರ ಅಮರಣ್ಣವರ, ವಕೀಲರ ಪರಿಷತ್ ರಾಜ್ಯ ಅಧ್ಯಕ್ಷ ಕಾಶಿನಾಥ ಮೋತಕಪಲ್ಲಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಉಪಾಧ್ಯಕ್ಷೆ ಫತ್ರುಬಿ ಎ.ಕೆ. ಶಹಾ ಇದ್ದರು   

ಕಲಬುರಗಿ: ಕರ್ನಾಟಕ ಹೈಕೋರ್ಟ್‌ನಲ್ಲಿ ಇತ್ಯರ್ಥಗೊಳ್ಳಲು ಬಾಕಿ ಇರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಕಳವಳ ವ್ಯಕ್ತಪಡಿಸಿದರು.

ಗುಲಬರ್ಗಾ ನ್ಯಾಯವಾದಿಗಳ ಸಂಘವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 50 ವರ್ಷಗಳ ಕಾಲ ವಕೀಲಿ ವೃತ್ತಿ ‍ಪೂರೈಸಿದ ಹಿರಿಯ ವಕೀಲರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.

‘2008ರಲ್ಲಿ ಕಲಬುರಗಿಯಲ್ಲಿ ಹೈಕೋರ್ಟ್‌ ಪೀಠವು ಆರಂಭವಾದಾಗ 5 ಸಾವಿರ ಪ್ರಕರಣಗಳು ಇದ್ದವು. ಇದೀಗ 25 ಸಾವಿರ ಪ್ರಕರಣಗಳು ಇರಬಹುದು. ಇಷ್ಟೊಂದು ಪ್ರಕರಣಗಳು ಇತ್ಯರ್ಥಗೊಳಿಸಬೇಕಾದರೆ ನ್ಯಾಯಾಧೀಶರು, ವಕೀಲರು ಎಷ್ಟೊಂದು ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಹಿಂದೆ ಕಲಬುರಗಿಗೆ ಬರಬೇಕೆಂದರೆ ಬೆಂಗಳೂರಿನಿಂದ ಹೈದರಾಬಾದ್‌ವರೆಗೆ ವಿಮಾನದಲ್ಲಿ ಬಂದು, ಅಲ್ಲಿಂದ ರಸ್ತೆ ಮೂಲಕ ಬರಬೇಕಿತ್ತು. ಇದೀಗ ಕೇವಲ ಒಂದು ಗಂಟೆಯಲ್ಲಿ ಬೆಂಗಳೂರಿನಿಂದ ಕಲಬುರಗಿಗೆ ಬರಬಹುದು. ಸರ್ಕಾರ ಇಷ್ಟೊಂದು ಸವಲತ್ತುಗಳನ್ನು ಒದಗಿಸಿಕೊಟ್ಟಿದೆ. ಹೀಗಾಗಿ, ನ್ಯಾಯದಾನ ಮಾಡುವಲ್ಲಿ ವಿಳಂಬವಾಗದಂತೆ ನೋಡಿಕೊಳ್ಳಬೇಕಿದೆ. ಕಾಲಮಿತಿಯಲ್ಲಿ ನ್ಯಾಯದಾನ ಸಿಕ್ಕರೆ ಕಕ್ಷಿದಾರರಿಗೂ ಅನುಕೂಲವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಯುವ ವಕೀಲರು ಹೆಚ್ಚು ಕೆಲಸ ಮಾಡಬೇಕಿದೆ. ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ, ಮಧ್ಯಾಹ್ನ 2.30ರಿಂದ ಸಂಜೆ 4.45ರವರೆಗೆ ಕೋರ್ಟ್‌ ಕಲಾಪಗಳಲ್ಲಿ ಭಾಗವಹಿಸುವ ಪ್ರತಿಜ್ಞೆಯನ್ನು ಮಾಡಬೇಕು. ಬೆಂಗಳೂರಿನಲ್ಲಿ ನಾವು ಬೆಳಿಗ್ಗೆ ನ್ಯಾಯಾಲಯಕ್ಕೆ ಬಂದರೆ ರಾತ್ರಿ 8.30ಕ್ಕೆ ವಾಪಸ್ ಮನೆಗೆ ತೆರಳುತ್ತೇವೆ. ಇಲ್ಲಿಯೂ ಇದೇ ಕಾರ್ಯತತ್ಪರತೆ ಅಳವಡಿಸಿಕೊಳ್ಳಬೇಕು. ಉತ್ತಮ ವಕೀಲರಾದರೆ ಮಾತ್ರ ಉತ್ತಮ ನ್ಯಾಯಾಧೀಶರಾಗಬಹುದು. ಶೇ 60ರಷ್ಟು ವಕೀಲರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಉಳಿದವರು ಆ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು’ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಪ್ರಧಾನ ಕಾರ್ಯದರ್ಶಿ ಪಿ.ಎನ್. ಕಪನೂರ, ಹೈಕೋರ್ಟ್ ಘಟಕದ ಗೌರೀಶ ಎಸ್.ಕಾಶೆಂಪೂರ ಮಾತನಾಡಿದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ಬಿ. ಪಾಟೀಲ ಸೇರಿದಂತೆ ಜಿಲ್ಲಾ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರು, ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷೆ ಫತ್ರುಬಿ ಎ.ಕೆ. ಶಹಾ, ಸಂಘದ ಪದಾಧಿಕಾರಿಗಳಾದ ಜೀತೇಶ್ ಘಾಟೆ, ಮಹಾಬಲೇಶ್ವರ ಶ್ರೀಮಂತರಾವ್, ರೇಣುಕಾ ಬಿರಾದಾರ, ಮಲ್ಲಿಕಾರ್ಜುನ ಎಂ. ಯಳಸಂಗಿ, ನಿರ್ಮಲಾ ಬಿರಾದಾರ, ನೀಲಕಂಠ ಶೆಟಗಾರ, ಸಂತೋಷ ಪಾಟೀಲ, ಸಿದ್ದಲಿಂಗ ಮಡಿವಾಳ, ಸುರೇಖಾ ಸಂಗಣ್ಣ, ಆನಂದ ರೆಡ್ಡಿ, ವಿನೋದಕುಮಾರ್ ಜೆನೇವರಿ ಸೇರಿದಂತೆ ಹಲವು ವಕೀಲರು ಭಾಗವಹಿಸಿದ್ದರು.

ಹಿರಿಯ ವಕೀಲರಿಗೆ ಸನ್ಮಾನ

ವಕೀಲಿ ವೃತ್ತಿಯಲ್ಲಿ 50 ವರ್ಷ ಪೂರೈಸಿದ ಹಿರಿಯ ವಕೀಲರಾದ ಗುರುಲಿಂಗಪ್ಪ ಮಹಾಗಾಂವ, ಸಿ.ವಿ. ಮಾಲಿಪಾಟೀಲ, ಬಿ.ಡಿ.ಹಂಗರಕಿ, ಮೋಹನರಾವ್ ಕಕ್ಕೇರಿ, ಡಿ.ಎಸ್. ಪಾಟೀಲ ಅವರನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರು ಸನ್ಮಾನಿಸಿದರು.

ಹೈಕೋರ್ಟ್‌ ನ್ಯಾಯಮೂರ್ತಿಗಳಾದ ಎಚ್‌.ಬಿ.ಪ್ರಭಾಕರ ಶಾಸ್ತ್ರಿ, ಬಿ. ಶ್ಯಾಮಪ್ರಸಾದ್, ಪಿ.ಎಸ್. ದಿನೇಶ್‌ಕುಮಾರ್, ಎಚ್‌.ಟಿ. ನರೇಂದ್ರಪ್ರಸಾದ್, ಶಿವಶಂಕರ ಅಮರಣ್ಣವರ, ಅಶೋಕ ಎಸ್. ಕಿಣಗಿ, ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷ ಕಾಶಿನಾಥ ಮೋತಕಪಲ್ಲಿ, ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಕಡಗಂಚಿ, ಪ್ರಧಾನ ಕಾರ್ಯದರ್ಶಿ ಪಿ.ಎನ್. ಕಪನೂರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.