
ಅಫಜಲಪುರ: ತಾಲ್ಲೂಕಿನ ಚಿಣಮಗೇರಿ ಹಾಗೂ ಚೌಡಾಪುರ ಸೀಮೆಯಲ್ಲಿರುವ ಮಹಾಂತಪುರದಲ್ಲಿ ಮಹಾ ತಪಸ್ವಿ ಗುರು ಮಹಾಂತೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಾನುವಾರ ಸಂಜೆ ಸಂಭ್ರಮದ ಚಿನ್ಮಯಗಿರಿಯ ಗುರು ಮಹಾಂತೇಶ್ವರರ ಭವ್ಯ ರಥೋತ್ಸವ ಜರುಗಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಗುರು ಮಹಾಂತೇಶ್ವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಳೆದ 5 ದಿನಗಳಿಂದ ಮಠಕ್ಕೆ ಸಹಸ್ರಾರು ಭಕ್ತರು ಬಂದು ದರ್ಶನ ಪಡೆಯುವುದು ಸಾಮಾನ್ಯವಾಗಿತ್ತು. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಭಾನುವಾರ ಸಂಜೆ ಮಠದ ಭಕ್ತಾದಿಗಳು ರಥವನ್ನು ಸಿಂಗರಿಸಿ ಪೂಜೆಯನ್ನು ಸಲ್ಲಿಸಿದರು. ನಂತರ ಅದ್ದೂರಿಯಾಗಿ ಜೋಡಿ ರಥೋತ್ಸವ ಕಾರ್ಯಕ್ರಮ ಜರುಗಿತು.
ಜ.31ರ ಶನಿವಾರದಂದು ಬೆಳಿಗ್ಗೆ 6 ಗಂಟೆಗೆ ಶಿವಯೋಗಿಗಳ ಕರ್ತೃ ಗದ್ದುಗೆಗೆ ಮಹಾ ರುದ್ರಾಭಿಷೇಕ, 8 ಗಂಟೆಗೆ ಪಂಚಾಚಾರ್ಯರ ಧ್ವಜಾರೋಹಣ, ಜಾನುವಾರು ಜಾತ್ರೆ ಉದ್ಘಾಟನೆ, 11 ಗಂಟೆಗೆ ಉಚಿತ ಸಾಮೂಹಿಕ ವಿವಾಹ ಜರುಗಿದವು. ಸಂಜೆ ಶ್ರೀ ವೀರಭದ್ರೇಶ್ವರ ಪಲ್ಲಕ್ಕಿಯೊಂದಿಗೆ ಪಟ್ಟದಪುರವಂತರ ಆಗಮನ, ನಂತರ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಿಳಾ ಗೋಷ್ಠಿ ಜರುಗಿದವು.
ಸಂಜೆ 6 ಗಂಟೆಗೆ ಸೋಲಾಪುರ ಭಕ್ತರ ನಂದಿಕೋಲು ಮೆರವಣಿಗೆಯೊಂದಿಗೆ ಮಹಾಂತೇಶ್ವರರ ಭವ್ಯ ರಥೋತ್ಸವ ಜರುಗಿತು. ಮಹಾಂತ ಜ್ಯೋತಿ ಆಯುರ್ವೇದಿಕ ಆಸ್ಪತ್ರೆ ವತಿಯಿಂದ ಉಚಿತ ತಪಾಸಣಾ ಶಿಬಿರ ಜರುಗಿತು. ರಥೋತ್ಸವ ನಂತರ ಮದ್ದು ಸುಡುವ ಕಾರ್ಯಕ್ರಮ ಜರುಗಿತು.
ಕಾಯಕಯೋಗಿ ಶ್ರೀ ಸಿದ್ದರಾಮ ಶಿವಯೋಗಿಗಳ ಸಂಕಲ್ಪದಂತೆ ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಣೆ, ರಾತ್ರಿಯಿಡೀ ಖ್ಯಾತ ಸಂಗೀತ ಕಲಾವಿದರಿಂದ ಕಡಕೋಳ ಮಡಿವಾಳಪ್ಪನವರ ಹಾಡುಗಳ ಸಂಗೀತ ಕಾರ್ಯಕ್ರಮ ಜರುಗಿತು. ಜಾತ್ರಾ ಮಹೋತ್ಸವಕ್ಕೆ ದೇವಲ ಗಾಣಗಾಪುರ ಪೊಲೀಸ್ ಠಾಣೆ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.