ಅಫಜಲಪುರ(ಕಲಬುರಗಿ ಜಿಲ್ಲೆ): ತಾಲ್ಲೂಕಿನಲ್ಲಿ ಗುರುವಾರ ರಾತ್ರಿ ಧಾರಾಕಾರವಾಗಿ ಸುರಿದ ಮಳೆಗೆ ತಾಲ್ಲೂಕಿನ ಜೇವರ್ಗಿ ಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಲೂ ನೀರು ಆವರಿಸಿದ್ದು, ಶಾಲೆಗೆ ರಜೆ ನೀಡಲಾಗಿದೆ.
ಶಾಲೆಯ ಮುಂದೆ ಅಮರ್ಜಾ ಬೋರಿ ಹಳ್ಳ ಇರುವುದರಿಂದ ಮಹಾರಾಷ್ಟ್ರದಲ್ಲಿ ಮತ್ತು ತಾಲ್ಲೂಕಿನಲ್ಲಿ ಮಳೆಯಾದಾಗ ಬೋರಿಹಳ್ಳ ಉಕ್ಕೇರಿ ಶಾಲಾ ಆವರಣ ಜಾಲಾವೃತಗೊಳ್ಳುತ್ತದೆ. ಧಾರಾಕಾರ ಮಳೆ ಸುರಿದಾಗಲೊಮ್ಮೆ ಈ ರೀತಿ ಸಮಸ್ಯೆಯಾಗುತ್ತದೆ ಅದಕ್ಕಾಗಿ ಶಾಲೆಯನ್ನು ಎತ್ತರದ ಸ್ಥಳಕ್ಕೆ ಸ್ಥಳಾಂತರ ಮಾಡಬೇಕೆಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವರುದ್ರ ಜೋಗದೆ ಒತ್ತಾಯಿಸುತ್ತಾರೆ.
'ಈಗಾಗಲೇ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ₹ 60 ಲಕ್ಷದಲ್ಲಿ ಹೊಸ ಶಾಲಾ ಕೊಠಡಿ ನಿರ್ಮಿಸಲು ಟೆಂಡರ್ ಕರೆದು ಕೆಲಸ ಮಾಡಲಾಗುತ್ತಿದೆ ಆದರೆ ಇದರಿಂದ ಯಾವ ಪ್ರಯೋಜನವಾಗುವುದಿಲ್ಲ ಮತ್ತೆ ಮಳೆ ಬಂದಾಗ ನೀರು ನಿಲ್ಲುತ್ತದೆ ಇದರಿಂದ ಮಕ್ಕಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ ಮತ್ತು ಶಾಲೆಯ ಸುತ್ತಮುತ್ತ ನಿರಂತರವಾಗಿ ನೀರು ನಿಲ್ಲುವುದರಿಂದ ಕಟ್ಟಡ ಹಾಳಾಗುತ್ತದೆ ಮತ್ತು ಯಾವಾಗ ಬೇಕಾದರೂ ಕಟ್ಟಡ ಕುಸಿದು ಬೀಳುವ ಸಂಭವಿದೆ ಅದಕ್ಕಾಗಿ ಈಗಿರುವ ಶಾಲಾ ಕೋಣೆಯ ಕಟ್ಟಡವನ್ನು ರದ್ದು ಮಾಡಿ ನೀರು ಬರೆದ ಎತ್ತರದ ಸ್ಥಳಕ್ಕೆ ಕಟ್ಟಡವನ್ನ ಕಟ್ಟುವ ಕೆಲಸ ಮಾಡಬೇಕು ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಸಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ತಿಳಿಸಿದರು.
'ಈಗಾಗಲೇ ಮಳೆ ಬಂದು ಎರಡು ಮೂರು ದಿನಗಳಿಂದ ಶಾಲೆಗೆ ರಜೆ ನೀಡಲಾಗಿತ್ತು. ಮೇಲಿಂದ ಮೇಲೆ ಶಾಲೆ ಎದುರುಗಡೆ ನೀರು ನಿಲ್ಲುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತದೆ. ಈಗಾಗಲೇ ಹಳೆಯ ಶಾಲಾ ಕೋಣೆಗಳು ಸಂಪೂರ್ಣ ಸೋರುತ್ತವೆ. ಇದರಿಂದ ಮಕ್ಕಳಿಗೆ ಪಾಠ ಮಾಡುವುದು ಪಾಠ ಮಾಡುವುದು ಕಷ್ಟವಾಗುತ್ತಿದೆ. ಕಟ್ಟಡಗಳು ಮಳೆಗೆ ನೆನೆದಿದ್ದು ಯಾವಾಗ ಬೇಕಾದರೂ ಕುಸಿದು ಬೀಳುವ ಸಂಭವವಿದೆ. ಅದಕ್ಕಾಗಿ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕು' ಎಂದು ಶಾಲೆಯ ಮುಖ್ಯ ಶಿಕ್ಷಕ ಅಣ್ಣಾರಾಯ ಪಾಟೀಲ್ ಹಾಗೂ ಸಹ ಶಿಕ್ಷಕ ರಮೇಶ್ ಚಲಗೇರಿ ಒತ್ತಾಯಿಸುತ್ತಾರೆ.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಿಕಾರಿಗಳು ಗ್ರಾಮದ ಜೇವರ್ಗಿ ಬಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಶಾಲೆಗೆ ಪರ್ಯಾಯವಾಗಿ ಕಟ್ಟಡ ವ್ಯವಸ್ಥೆ ಮಾಡುವವರಿಗೆ ಶಾಲೆಯನ್ನು ನಡೆಸಬಾರದು ಎಂದೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.