
ಅಫಜಲಪುರ: ಇಲ್ಲಿನ ಪಂಚಾಯತ್‌ರಾಜ್ ಇಲಾಖೆಯ ಎಂಜಿನಿಯರಿಂಗ್ ಉಪವಿಭಾಗ ಸಿಬ್ಬಂದಿ ಕೊರತೆಯಿಂದಾಗಿ ಬಿಕೋ ಎನ್ನುತ್ತಿದೆ. ಕಚೇರಿಗೆ ಬರುವ ಗುತ್ತಿಗೆದಾರರು, ಅಧಿಕಾರಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.
ಇಲಾಖೆಯ ಎಂಜಿನಿಯರಿಂಗ್ ಉಪವಿಭಾಗದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಾಬುರಾವ್ ಜ್ಯೋತಿ ಅವರು ಬೇರೆಡೆ ವರ್ಗಾವಣೆಗೊಂಡ ನಂತರ ಇಲ್ಲಿ ಸಮಸ್ಯೆಗಳು ತಲೆದೂರಿದೆ.
ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಭಾರ ಹುದ್ದೆಗೆ ಶರಣಯ್ಯ ಹಿರೇಮಠ ಎಂಬುವವರು ಅಧಿಕಾರ ವಹಿಸಿಕೊಂಡಿದ್ದರೂ ಕಚೇರಿಗೆ ಬರುವುದು ಅತೀ ವಿರಳ. ಕಲಬುರಗಿ ನಗರದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದಲ್ಲಿ ಅಧಿಕಾರ ನಿಭಾಯಿಸುತ್ತಿರುವ ಅವರು ಅಫಜಲಪುರದತ್ತ ಬರುವುದು ತೀರಾ ಕಡಿಮೆ.
ಶರಣಯ್ಯ ಅವರು ಕಲಬುರಗಿಯಲ್ಲಿ ಎರಡು ಇಲಾಖೆಯ ಜವಾಬ್ದಾರಿ ಜೊತೆಗೆ ಅಫಜಲಪುರ ಎಂಜಿನಿಯರಿಂಗ್ ಉಪ ವಿಭಾಗಕ್ಕೆ ಪ್ರಭಾರ ಹುದ್ದೆಯ ಹೊಣೆ ವಹಿಸಲಾಗಿದೆ. ಕಚೇರಿಯಲ್ಲಿ ದ್ವಿತೀಯ ದರ್ಜೆ ಗುಮಾಸ್ತ, ಕಂಪ್ಯೂಟರ್ ಆಪರೇಟರ್, ಒಬ್ಬರು ಸಹಾಯಕ ಎಂಜಿನಿಯರ್, ಎರಡು ಕಿರಿಯ ಎಂಜಿನಿಯರ್ ಹುದ್ದೆಗಳು ಖಾಲಿ ಇವೆ ಎನ್ನುತ್ತಾರೆ ಕಚೇರಿಯ ಸಿಬ್ಬಂದಿ.
ಈ ಹಿಂದೆ ಕಚೇರಿಯಲ್ಲಿ ಸುಮಾರು 50 ಜನ ದಿನಗೂಲಿಯಾಗಿ ಕೆಲಸ ಮಾಡುತ್ತಿದ್ದರು. ಅವರೆಲ್ಲರೂ ನಿವೃತ್ತಿಯಾಗಿ ಹೋಗಿದ್ದರಿಂದ ಈಗ ಕೇವಲ 4 ದಿನಗೂಲಿ ನೌಕರರು ಕೆಲಸ ಮಾಡುತ್ತಾರೆ.
ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಾಲ್ಲೂಕಿಗೆ ಭೇಟಿ ನೀಡಿ ತಮ್ಮ ಇಲಾಖೆಯ ಪರಿಸ್ಥಿತಿ ನೋಡಬೇಕು. ಮಳೆಗಾಲದಲ್ಲಿ ಎಲ್ಲಾ ಕೋಣೆಗಳು ಸೋರುತ್ತವೆ. ಕಟ್ಟಡದ ಒಂದು ಕೋಣೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಚೇರಿಯೂ ಇದೆ ಎನ್ನುತ್ತಾರೆ ಸಾರ್ವಜನಿಕರು.
Quote - ಅಫಜಲಪುರ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಎಇಇ ಆಗಿರುವ ಶರಣಯ್ಯ ಹಿರೇಮಠ ಅವರಿಗೆ ಕಲಬುರಗಿಯಲ್ಲಿ ಎರಡು ಮತ್ತು ಅಫಜಲಪುರದಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಪ್ರಭಾರಿ ಹುದ್ದೆ ನೀಡಿದ್ದರಿಂದ ಅವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದ ಕಾರಣ ಅಗತ್ಯವಾದ ಎಂಜಿನಿಯರ್ ಹಾಗೂ ಅಗತ್ಯ ಸಿಬ್ಬಂದಿ ಕೊರತೆ ಇರುವುದರಿಂದ ಸಾರ್ವಜನಿಕರು ರೋಸಿ ಹೋಗಿದ್ದಾರೆ ಗುರು ಚಾಂದಕೋಟೆ ಪ್ರಾಂತ ರೈತ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ
‘ಎಲ್ಲಿಯೂ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ’
ಕಲಬುರಗಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದು ನನಗೆ ಕಲಬುರಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜೊತೆಗೆ ಅಫಜಲಪುರ ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕರ ಜವಾಬ್ದಾರಿ ನೀಡಿದ್ದಾರೆ. ಜೊತೆಗೆ ನನಗೆ ಏಳು ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಅಧಿಕಾರಿ ನೇಮಿಸಿದ್ದಾರೆ ಹೀಗಾಗಿ ಎಲ್ಲಿಯೂ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ. ಅದಕ್ಕಾಗಿ ಇಲ್ಲಿಗೆ ಬರಲು ಸಾಧ್ಯವಾಗುತ್ತಿಲ್ಲ. ಆದರೂ ಸಹ ಕಲಬುರಗಿಯಲ್ಲಿ ಇದ್ದುಕೊಂಡು ಕೆಲಸ ಮಾಡುತ್ತಿದ್ದೇನೆ’ ಎಂದು ಅಫಜಲಪುರ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಶರಣಯ್ಯ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.