
ಕಲಬುರಗಿ: ‘ರಾಜ್ಯ ಸರ್ಕಾರದಿಂದ ಕಲಬುರಗಿಯಲ್ಲಿ ರಫ್ತು ತರಬೇತಿ ಆಯೋಜಿಸಲಾಗಿದ್ದು, ಈ ಭಾಗದಿಂದ ಕೃಷಿ ಆಧಾರಿತ ಉತ್ಪನ್ನಗಳು, ಉತ್ಪಾದನೆಗಳು ಮತ್ತು ಸಂಸ್ಕರಿಸಿದ ಆಹಾರ ಪದಾರ್ಥಗಳನ್ನು ರಫ್ತು ಮಾಡಲು ವಿಫುಲ ಅವಕಾಶಗಳಿವೆ’ ಎಂದು ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರದ ನಿರ್ದೇಶಕ (ರಫ್ತು) ಹಾಗೂ ವ್ಯವಸ್ಥಾಪಕ ನಿರ್ದೇಶಕ ಬಿ.ಕೆ.ಶಿವಕುಮಾರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಕರ್ನಾಟಕ ರೈತ ಸಮೃದ್ಧಿ ಯೋಜನೆಯಡಿ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ ಇಲಾಖೆ ಹಾಗೂ ರಫ್ತು ಸೌಲಭ್ಯ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೃಷಿ ಆಧಾರಿತ ರಫ್ತು ನಿರ್ವಹಣೆ ತರಬೇತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಅಬ್ದುಲ್ ಅಜೀಮ್, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹಾಗೂ ಜಂಟಿ ತೋಟಗಾರಿಕಾ ನಿರ್ದೇಶಕ ಸಂತೋಷ ಇನಾಂದಾರ ಮಾತನಾಡಿದರು.
ಸುಮಾರು 35 ನೋಂದಾಯಿತ ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗಿಯಾಗಿದ್ದರು. 6 ದಿನಗಳ ಕಾಲ ಕೃಷಿ ಆಧಾರಿತ ರಫ್ತು ನಿರ್ವಹಣೆ ತರಬೇತಿ ನಡೆಯಲಿದೆ.
ವಿಟಿಪಿಸಿ ರಫ್ತು ಸಂಯೋಜಕ ಅರವಿಂದ ಭಟ್ ರಪ್ತು ತರಬೇತಿ ಬಗ್ಗೆ ವಿವರಿಸಿದರು. ಕಲಬುರಗಿ ವಿಟಿಪಿಸಿ ಶಾಖೆ ರಫ್ತು ಸೌಲಭ್ಯ ಕೇಂದ್ರದ ಸಹಾಯಕ ನಿರ್ದೇಶಕ ಜಾಫರ್ ಖಾಸಿಮ್ ಅನ್ಸಾರಿ, ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಕು.ರುಪಾಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.