
ಆಳಂದ: ಇಲ್ಲಿನ ಹೊಸ ಬಸ್ ನಿಲ್ದಾಣ ₹5 ಕೋಟಿ ಅನುದಾನದಲ್ಲಿ ನಿರ್ಮಾಣವಾಗುತ್ತಿದ್ದು, ಕಾಮಗಾರಿಯನ್ನು ಗುಣಮಟ್ಟದ ಜೊತೆಗೆ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಎಂದು ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ, ಶಾಸಕ ಬಿ.ಆರ್. ಪಾಟೀಲ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ನೂತನ ಎರಡು ನಗರ ಸಾರಿಗೆ ಬಸ್ ಸೇವೆಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ಜನದಟ್ಟಣೆ ತಡೆ ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ನಿಲ್ದಾಣ ನಿರ್ಮಾಣ ಹಂತದಲ್ಲಿದೆ. ಸಮೀಪದ ಎಪಿಎಂಸಿ ಜಾಗ ಪಡೆದು ವಿಶಾಲವಾದ ಬಸ್ ನಿಲ್ದಾಣ ಆವರಣ ಹಾಗೂ ಮೂಲಭೂತ ಸೌಕರ್ಯಗಳು ಪ್ರಯಾಣಿಕರಿಗೆ ದೊರೆಯಲಿವೆ’ ಎಂದರು.
ಆಳಂದ-ಕಲಬುರಗಿಗೆ ವಿಶೇಷವಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿನ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ವಾಗ್ದರಿ-ರಿಬ್ಬನಪಲ್ಲಿ ಮುಖ್ಯರಸ್ತೆಯ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿಗಳಿಗೆ ಬೇಡಿಕೆ ಇಡಲಾಗಿದೆ’ ಎಂದರು.
ಆಳಂದ ಬಸ್ ಘಟಕದ ವ್ಯವಸ್ಥಾಪಕ ಯೋಗಿರಾಜ್ ಸರಸಂಬಿ ಮಾತನಾಡಿ, ‘ನೂತನ 2 ನಗರ ಸಾರಿಗೆ ಬಸ್‌ಗಳು ಬೆಳಿಗ್ಗೆ 7 ರಿಂದ ಸಂಜೆ 7ರವರೆಗೆ ಆಳಂದ-ಕಲಬುರಗಿ ಮಾರ್ಗದಲ್ಲಿ ಸಂಚರಿಸಲಿವೆ. ಪ್ರಯಾಣಿಕರಿಗೆ ಸಾರಿಗೆ ನಿಗಮವು ಹೆಚ್ಚಿನ ಅನುಕೂಲ ಕಲ್ಪಿಸಿದೆ’ ಎಂದರು.
ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಿವಪುತ್ರಪ್ಪ ಪಾಟೀಲ, ಮಲ್ಲಪ್ಪ ಹತ್ತರಕಿ, ಧರ್ಮಾ ಬಂಗರಗಿ, ಬಿ.ಎಸ್ ಆಲೂರೆ, ಸಿದ್ದು ವೇದಶೆಟ್ಟಿ, ಮಹ್ಮದ್ ಖಾನ್, ಅಶೋಕ ಬಿಸಲೆ, ಪೀರಪ್ಪ ಪಾಟೀಲ, ರಾಜಕುಮಾರ ಚವ್ಹಾಣ, ಮಹೇಶ ಹಿರೋಳ್ಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.