ADVERTISEMENT

ಆಳಂದ: 60 ಸಾವಿರ ಸಸಿ ನೆಡಲು ಸಿದ್ದತೆ

ಸಂಜಯ್ ಪಾಟೀಲ
Published 29 ಮೇ 2025, 5:51 IST
Last Updated 29 ಮೇ 2025, 5:51 IST
ಆಳಂದ ತಾಲ್ಲೂಕಿನ ಬಬಲೇಶ್ವರ ನರ್ಸರಿಯಲ್ಲಿ ಬೆಳೆದು ನಿಂತ ಸಸಿಗಳು
ಆಳಂದ ತಾಲ್ಲೂಕಿನ ಬಬಲೇಶ್ವರ ನರ್ಸರಿಯಲ್ಲಿ ಬೆಳೆದು ನಿಂತ ಸಸಿಗಳು   

ಆಳಂದ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಜೋರಾದಂತೆ ಅರಣ್ಯ ಇಲಾಖೆಯು ಸಹ ಈ ಬಾರಿ ತಾಲ್ಲೂಕಿನ ವಿವಿಧೆಡೆ 60 ಸಾವಿರ ಸಸಿ ನೆಡುವ ಗುರಿಯೊಂದಿಗೆ ಅಗತ್ಯ ಸಿದ್ಧತೆ ಕೈಗೊಂಡಿದೆ.

ಪ್ರಾದೇಶಿಕ ಅರಣ್ಯ ವಲಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆಯು ಈಗಾಗಲೇ ತಾಲ್ಲೂಕಿನ ಬಬಲೇಶ್ವರ ನರ್ಸರಿಯಲ್ಲಿ 22 ಸಾವಿರ ಸಸಿಗಳನ್ನು ಬೆಳೆಸಿದ್ದು, ಇದರಲ್ಲಿ 12 ಸಾವಿರ ಸಸಿಗಳನ್ನು ರಾಜ್ಯಹೆದ್ದಾರಿ ಮತ್ತು ಪ್ರಮುಖ ಸಂಪರ್ಕ ರಸ್ತೆಗಳ ಬದಿಗೆ ನೆಡಲು ಉದ್ದೇಶಿಸಿದೆ. ಉಳಿದ 10 ಸಾವಿರ ಸಸಿಗಳನ್ನು ರಿಯಾಯತಿ ದರದಲ್ಲಿ ರೈತರಿಗೆ ಮಾರಾಟ ಮಾಡಲು ಯೋಚಿಸಿದೆ.

ಕೊರಳ್ಳಿ ನರ್ಸರಿಯಲ್ಲಿನ 18 ಸಾವಿರ ಸಸಿಗಳನ್ನು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯು ರಸ್ತೆ ಬದಿಗೆ ಬೆಳೆಸುವ ಯೋಜನೆ ಕೈಗೊಂಡಿದ್ದರೆ, ಉಳಿದ 20 ಸಾವಿರ ಸಸಿಗಳನ್ನು ಭೂಸನೂರು, ಧಂಗಾಪುರ, ಸನಗುಂದಾ, ಬಂಗರಗಾ ವ್ಯಾಪ್ತಿಯಲ್ಲಿನ ಕಾಯ್ದಿರಿಸಿದ ಮೀಸಲು ಅರಣ್ಯದಲ್ಲಿ ಬೆಳೆಸಲು ಸಿದ್ಧತೆ ನಡೆದಿದೆ.

ADVERTISEMENT

ಕಡಗಂಚಿ ನರ್ಸರಿಯಲ್ಲಿನ 5 ಸಾವಿರ ಸಸಿಗಳನ್ನು ನರೇಗಾ ಯೋಜನೆಯಡಿ ಆಯಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಸಿ ನೆಡಲು ಉದ್ದೇಶಿಸಿದೆ. ಈಗಾಗಲೇ ಅರಣ್ಯ ಇಲಾಖೆಯಿಂದ ಆಳಂದ-ಖಜೂರಿ ಗಡಿ, ಆಳಂದ-ಮಟಕಿ-ತೀರ್ಥ, ಆಳಂದ-ಮಾದನ ಹಿಪ್ಪರಗಿ, ಆಳಂದ ಚೆಕ್‌ಪೋಸ್ಟ್- ಸರಸಂಬಾ ಮಾರ್ಗ- ಹಿರೋಳ್ಳಿ ಗಡಿ, ವಾಗ್ದರಿ- ಮಡ್ಡಿ, ಲಾಡ ಚಿಂಚೋಳ್ಳಿ-ಧುತ್ತರಗಾಂವ, ಹಿತ್ತಲ ಶಿರೂರು-ಜವಳಿ(ಡಿ), ಗೋಳಾ ಬಿ- ಪಟ್ಟಣ, ಮಾದನ ಹಿಪ್ಪರಗಿ- ಮೈಂದರ್ಗಿ- ಬಾಸಗಿ, ಕಡಗಂಚಿ- ದಣ್ಣೂರು ಮಾರ್ಗದಲ್ಲಿ ಪ್ರಸಕ್ತ ವರ್ಷ ಜೂನ್‌ ಆರಂಭದಲ್ಲಿ ಸಸಿ ನೆಡಲು ಯೋಜನೆಯು ಅರಣ್ಯ ಇಲಾಖೆ ರೂಪಿಸಿದೆ.

ಈಗಾಗಲೇ ಆಳಂದ-ಖಜೂರಿ, ಮಟಕಿ-ತೀರ್ಥ, ಮಾದನ ಹಿಪ್ಪರಗಿ, ಹಿರೋಳ್ಳಿ, ಸಕ್ಕರಗಾ ಮತ್ತಿತರ ಮಾರ್ಗದ ಎರಡು ಬದಿಗೆ ಸಸಿ ನೆಡಲು ತೆಗ್ಗು ತೊಡಲಾಗಿದೆ. ಸತತ ಮಳೆಯು ಸಹಜವಾಗಿ ಸಸಿ ನೆಡಲು ಅನುಕೂಲಕರವಾಗಿದ್ದು, ಮಳೆಯು ಬಿಡುವು ನೀಡಿದ ತಕ್ಷಣ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ವೀರೇಂದ್ರ ಸಿ.ವೈ ತಿಳಿಸಿದರು.

ರಸ್ತೆ ಬದಿಗೆ ನೆಡಲು ಬೇವು, ಆಲ, ಅರಳೆ, ಹುಣಸೆ, ತಪಸಿ, ಹೊಂಗೆ ಸಸಿಗಳು ನರ್ಸರಿಯಲ್ಲಿ ಬೆಳೆಸಲಾಗಿದ್ದು, ರೈತರ ಬೇಡಿಕೆ ಹಿನ್ನೆಲೆಯಲ್ಲಿ ಈ ಬಾರಿ ರಸ್ತೆ ಬದಿಗೆ ಮಾವು ಸಸಿ ನೆಡಲು ಅರಣ್ಯ ಇಲಾಖೆ ಮುಂದಾಗಿದೆ. ಸಂಘ, ಸಂಸ್ಥೆಗಳು, ಶಾಲಾ ಕಾಲೇಜು ಹಾಗೂ ಸಾರ್ವಜನಿಕ ಜಮೀನು ಸ್ಥಳಗಳಲ್ಲಿ ಸಸಿ ನೆಡುವ ಕಾರ್ಯ ಕೈಗೊಳ್ಳಲಾಗುವುದು. ಇದಕ್ಕಾಗಿ ಆಯಾ ಗ್ರಾಮ ಪಂಚಾಯಿತಿ ಸಹಾಯದೊಂದಿಗೆ ವಿಶೇಷವಾಗಿ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಆಯಾ ಪಂಚಾಯಿತಿಗಳು ನಿಗದಿ ಪಡಸಿದ ಸ್ಥಳಗಲ್ಲಿ ಸಸಿ ನೆಡಲು ಮುಂದಾಗಿದೆ.

ರೈತರಿಗೆ ಸಸಿ ವಿತರಣೆ: ಅರಣ್ಯ ಇಲಾಖೆಯು ರೈತರು ತಮ್ಮ ಹೊಲಗದ್ದೆಗಳಲ್ಲಿ ಸಸಿ ನೆಟ್ಟು ಬೆಳೆಸಲು ಉತ್ತೇಜಿಸುವ ನಿಟ್ಟಿನಲ್ಲಿ ರಿಯಾಯಿತಿ ದರದಲ್ಲಿ ಸಸಿ ವಿತರಣೆಗೆ ಮುಂದಾಗಿದೆ. ಒಟ್ಟು 10 ಸಾವಿರ ಸಸಿಗಳು ರೈತರಿಗಾಗಿ ಮೀಸಲಿರಿಸಲಾಗಿದೆ. ಇವುಗಳಲ್ಲಿ ಮಾವು, ಸಾಗವಾನಿ, ಹುಣಸೆ, ಹೆಬ್ಬೆವು, ಮಹಾಗನಿ, ನೆಲ್ಲಿ, ಬಿದಿರು. ಬಸರಿ, ತಬಸಿ, ಹತ್ತಿ, ಸೀತಾಫಲ ಮತ್ತಿತರ ಸಸಿಗಳು ಇವೆ. ರೈತರಿಗೆ ತಲಾ ಒಂದು ಸಸಿಗೆ ₹6 ದರ ನಿಗದಿಪಡಿಸಲಾಗಿದೆ. ಈಗಾಗಲೇ ಅರಣ್ಯ ಇಲಾಖೆಯಿಂದ ರೈತರಿಗೆ ಸಸಿ ನೆಡಲು ಜಾಗೃತಿ ಮೂಡಿಸಲಾಗುತ್ತಿದೆ. ಸಸಿ ಬೆಳೆಸಲು ಅಗತ್ಯ ಪ್ರೋತ್ಸಾಹವು ಅರಣ್ಯ ಇಲಾಖೆ ಒದಗಿಸಲಿದೆ ಎಂದು ಪ್ರಾದೇಶಿಕ ಅರಣ್ಯ ವಲಯ ಅಧಿಕಾರಿ ರಾಜೇಶ್ವರಿ ಪ್ರಜಾವಾಣಿಗೆ ತಿಳಿಸಿದರು.  

ಸಂಪರ್ಕ ರಸ್ತೆಗಳ ಬದಿಗೆ ಹೆಚ್ಚಿನ ಪ್ರಮಾಣದಲ್ಲಿ ಸಸಿ ನೆಟ್ಟು ಬೆಳೆಸುವ ಕಾರ್ಯ ಜೂನ್‌ ಮೊದಲ ವಾರ ಜರುಗಲಿದೆ. ಪ್ರಸಕ್ತ ಮಳೆಯು ಸಹ ಸಸಿ ಬೆಳೆಸಲು ಅನುಕೂಲಕರವಾಗಿದೆ
ವೀರೇಂದ್ರ ಸಿ.ವೈ ಸಾಮಾಜಿಕ ವಲಯ ಅರಣ್ಯಾಧಿಕಾರಿ ಆಳಂದ
ಶಾಲಾ ಕಾಲೇಜುಗಳಲ್ಲಿ ಗಿಡಮರ ಬೆಳೆಸುವ ಅರಿವು ಮೂಡಿಸುವ ಜತೆಗೆ ವಿದ್ಯಾರ್ಥಿಗಳಿಗೆ ಸಸಿಗಳನ್ನು ಉಚಿತವಾಗಿ ವಿತರಣೆ  ಮಾಡಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು
ನಾಗರಾಜ ದೇವಂತಗಿ ಮುಖ್ಯಶಿಕ್ಷಕ ನರೋಣಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.