
ಆಳಂದ: ತಾಲ್ಲೂಕಿನಲ್ಲಿ ಹಿರೋಳ್ಳಿ ಸುತ್ತಲಿನ ಗ್ರಾಮದಲ್ಲಿನ ಪವನ ವಿದ್ಯುತ್ ಉತ್ಪಾದಕ ಕಂಪನಿಗಳು ರೈತ ವಿರೋಧಿ ಧೋರಣೆ ತೋರುತ್ತಿದೆ ಎಂದು ಆರೋಪಿಸಿ ಮಂಗಳವಾರ ತಾಲ್ಲೂಕು ಆಡಳಿತ ಭವನದ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿ, ಪವನ ವಿದ್ಯುತ್ ಕಂಪನಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಯಿತು.
ಈ ವೇಳೆ ಹೋರಾಟಗಾರ ಸಿದ್ದು ಹಿರೋಳ್ಳಿ ಮಾತನಾಡಿ, ‘ಪವನ ವಿದ್ಯುತ್ ಕಂಪನಿಗಳು ಸರ್ಕಾರ ನಿಗದಿ ಪಡಿಸಿದ ದರವನ್ನು ರೈತರಿಗೆ ನೀಡದೇ ಮೋಸ ಮಾಡುತ್ತಿವೆ. ರೈತರ ಒಂದು ಎಕರೆ ಜಮೀನು ನೋಂದಣಿ ಮಾಡಿಕೊಂಡು ಉಳಿದ ನಾಲ್ಕು ಎಕರೆ ಭೂಮಿ ವಶಪಡೆಸಿಕೊಳ್ಳುತ್ತಿವೆ’ ಎಂದು ಆಪಾದಿಸಿದರು.
‘ರೈತರ ಒಣಭೂಮಿಯ ಪ್ರತಿ ಎಕರೆಗೆ ₹30 ಲಕ್ಷ ನೀಡಬೇಕು, ರೈತ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡಬೇಕು, ಹೊಲದ ಬದು, ಗಿಡಮರ ನಾಶ ಪಡೆಸಿದ ರೈತರಿಗೂ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಚಿಂಚನಸೂರು ಮಾತನಾಡಿ, ಕಂದಾಯ, ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ವಿದ್ಯುತ್ ಕಂಪನಿಗಳ ದಲ್ಲಾಳಿಗಳಂತೆ ವರ್ತಿಸುತ್ತಿದ್ದಾರೆ. ಆಳಂದ, ಸೇಡಂ, ಚಿತ್ತಾಪುರ, ಚಿಂಚೋಳ್ಳಿಯಲ್ಲಿ ಈ ಕಂಪನಿಗಳಿಂದ ರೈತರೂ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ’ ಎಂದು ದೂರಿದರು.
ಹಿರೋಳ್ಳಿಯ ಶಿವಬಸವ ಸ್ವಾಮೀಜಿ, ಮಾಶಾಳದ ಮರುಳಾರಾಧ್ಯ ಸ್ವಾಮೀಜಿ ಮಾತನಾಡಿ, ಹೋರಾಟಕ್ಕೆ ಎಲ್ಲ ರೈತರೂ ಪಕ್ಷಬೇಧ ಮರೆತು ಬೆಂಬಲಿಸಿದರೆ ಮಾತ್ರ ರೈತರಿಗೆ ನ್ಯಾಯ ದೊರೆಯಲಿದೆ. ಈ ಹೋರಾಟಕ್ಕೆ ನ್ಯಾಯ ಸಿಗುವರೆಗೂ ಹೋರಾಟ ಮುಂದುವರಿಸಲು ತಿಳಿಸಿದರು.
ಹೋರಾಟಗಾರರಾದ ಮಹಾದೇವ ಮೋಘಾ, ವಕೀಲ ಮಹಾದೇವ ಹತ್ತಿ, ಚಂದ್ರಶೇಖರ ಮುನ್ನೋಳ್ಳಿ, ರಮೇಶ ಜಗತಿ, ಸೋಮಲಿಂಗ ಕೌಲಗಿ ಮಾತನಾಡಿ, 15 ದಿನದಲ್ಲಿ ತಹಶೀಲ್ದಾರ್ ಅವರು ಸಮಸ್ಯೆ ಬಗೆಹರಿಸಲು ಮುಂದಾಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸುವ ಎಚ್ಚೆರಿಕೆ ನೀಡಿದರು.
ಗ್ರೇಡ್–2 ತಹಶೀಲ್ದಾರ್ ಬಿ.ಜಿ.ಕುದುರಿ ಅವರು ಮನವಿ ಸ್ವೀಕರಿಸಿದರು. ಪಿಐ ಶರಣಬಸಪ್ಪ ಕೊಡ್ಲಾ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಪ್ರತಿಭಟನೆಯಲ್ಲಿ ಪ್ರಮುಖರಾದ ಮಹೇಶ ಮುನ್ನೋಳ್ಳಿ, ಈರಣ್ಣಾ ಹತ್ತರಕಿ, ಶಿವಲಿಂಗಪ್ಪ ಗುಡ್ಡದ, ಅಶೋಕ ಜಟೇಪ್ಪಗೋಳ, ಲಿಂಗರಾಜ ಪಾಟೀಲ, ಕಲ್ಯಾಣಿ ಗುಳಗಿ, ಸಿದ್ದಲಿಂಗ ಮಲಶೆಟ್ಟಿ, ಅಜೀತ ಕುಲಕರ್ಣಿ, ಚಂದ್ರಕಾಂತ ಬೆಳಾಂ, ಬಸವಂತರಾವ ಶೇರಿಕಾರ, ಶ್ರೀಶೈಲ ನಿಂಬಾಳ, ನಿಂಗರಾಜ ಉಡುಗಿ, ಶ್ರೀಕಾಂತ ಮಾಳಿ, ಸತೀಶ ಕಾಳಮುದ್ರೆ, ರಾಜು ಚವ್ಹಾಣ, ಕಾಶಿನಾಥ ಪಾಟೀಲ ಸೇರಿದಂತೆ ಹಿರೋಳ್ಳಿ, ಪಡಸಾವಳಿ, ಚಿಂಚೋಳ್ಳಿ, ನಿರುಗುಡಿ, ಸಾವಳೇಶ್ವರ, ಭೀಮಪುರ, ಕಾಮನಹಳ್ಳಿ, ಮಾದನ ಹಿಪ್ಪರಗಿ, ಕಿಣಗಿ, ಅಂಬೇವಾಡ ಗ್ರಾಮದ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.