ADVERTISEMENT

ಕಲಬುರ್ಗಿ: ಸ್ವಯಂ ಗೃಹಬಂಧನಕ್ಕೆ ಒಳಗಾದ ಶಾಸಕರು

ಜಿಲ್ಲೆಯ ಇಬ್ಬರು ಶಾಸಕರಿಗೆ ಕೋವಿಡ್, ಉಳಿದವರಲ್ಲೂ ಮೂಡಿದ ಆತಂಕ, ಜನರ ಸಂಪರ್ಕದಿಂದ ದೂರ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 13:27 IST
Last Updated 11 ಜುಲೈ 2020, 13:27 IST
ಸುಭಾಷ ಗುತ್ತೇದಾರ
ಸುಭಾಷ ಗುತ್ತೇದಾರ   

ಕಲಬುರ್ಗಿ: ಜಿಲ್ಲೆಯ ಇಬ್ಬರು ಶಾಸಕರಿಗೆ ಕೋವಿಡ್‌–19 ಸೋಂಕು ಅಂಟಿಕೊಂಡ ಹಿನ್ನೆಲೆಯಲ್ಲಿ, ಬಹುಪಾಲು ಶಾಸಕರು ಸ್ವಯಂ ಪ್ರೇರಣೆಯಿಂದ ಗೃಹಬಂಧನಕ್ಕೆ ಒಳಗಾಗಿದ್ದಾರೆ. ನಾಲ್ವರು ಶಾಸಕರು ಮಾತ್ರ ಕ್ಷೇತ್ರದಲ್ಲಿದ್ದು, ಮತ್ತೆ ನಾಲ್ವರು ಬೆಂಗಳೂರಿನಲ್ಲಿದ್ದಾರೆ.

ಸೇಡಂ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ, ಅವರ ಪತ್ನಿ ಹಾಗೂ ಪುತ್ರನಿಗೆ ಗುರುವಾರ ಸೋಂಕು ದೃಢಪಟ್ಟಿತು. ಮುಂಜಾಗೃತಾ ಕ್ರಮವಾಗಿ ಗಂಟಲು ಮಾದರಿ ಪರೀಕ್ಷಿಸಿಕೊಂಡ ಜೇವರ್ಗಿ ಶಾಸಕ ಡಾ.ಅಜಯ ಸಿಂಗ್‌ ಅವರಿಗೂ ಸೋಂಕು ಇರುವುದು ಶುಕ್ರವಾರ ಗೊತ್ತಾಯಿತು. ತೆಲ್ಕೂರ ಅವರ ಕುಟುಂಬ ಬೆಂಗಳೂರಿನ ಫೋರ್ಟೀಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಡಾ.ಅಜಯ ಸಿಂಗ್‌ ಅವರು ಬೆಂಗಳೂರಿನ ತಮ್ಮ ನಿವಾಸದಲ್ಲೇ ಐಸೋಲೇಷನ್‌ಗೆ ಒಳಗಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡ ಇತರ ಶಾಸಕರೂ ಜನರ ಮಧ್ಯೆ ಹೋಗುವುದನ್ನು ನಿಲ್ಲಿಸಿದ್ದಾರೆ.

ಹಿರಿಯರಾದ ಅಫಜಲಪುರ ಶಾಸಕ ಎಂ.ವೈ. ಪಾಟೀಲ ಅವರು ಎರಡು ದಿನಗಳ ಹಿಂದಿನಿಂದಲೇ ಹೋಂ ಕ್ವಾರಂಟೈನ್‌ ಆಗಿದ್ದಾರೆ. ಜನರ ಸಮಸ್ಯೆಗಳಿಗೆ ಫೋನ್‌ ಮೂಲಕವೇ ಸ್ಪಂದಿಸುತ್ತಿದ್ದಾರೆ. ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಅವರೂ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಾರದ ಹಿಂದೆ ಕ್ವಾರಂಟೈನ್‌ ಆಗಿದ್ದಾರೆ. ಮನೆಯ ಪಕ್ಕದ ವ್ಯಕ್ತಿಗೆ ಕೋವಿಡ್‌ ಕಾಣಿಸಿಕೊಂಡಿದ್ದರಿಂದ, ಮುಂಜಾಗೃತಾ ಕ್ರಮವಾಗಿ ಪ್ರಿಯಾಂಕ್‌ ಗೃಹಬಂಧನ ವಿಧಿಸಿಕೊಂಡಿದ್ದಾರೆ.

ADVERTISEMENT

ಕಲಬುರ್ಗಿ ಉತ್ತರ ಕ್ಷೇತ್ರದ ಶಾಸಕಿ ಖನೀಜ್‌ ಫಾತಿಮಾ ಕೂಡ ಬೆಂಗಳೂರಿನಲ್ಲಿದ್ದು, ವಾರದಿಂದ ಜನರ ಸಂಪರ್ಕ ನಿಲ್ಲಿಸಿದ್ದಾರೆ. ಕ್ಷೇತ್ರದ ಜನರೊಂದಿಗೆ ಫೋನ್‌ ಮೂಲಕ ಮಾತನಾಡುವ ಅವರು, ವಿಧಾನಸೌಧದ ಕೆಲಸಗಳಿಗೆ ಮಾತ್ರ ಹೋಗುತ್ತಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದಾರೆ.

ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಶನಿವಾರ ಸ್ವಯಂ ಪ್ರೇರಣೆಯಿಂದ ತಮ್ಮ ಗಂಟಲು ಮಾದರಿ ತಪಾಸಣೆಗೆ ನೀಡಿದ್ದಾರೆ. ‘ಹಲವು ಬಾರಿ ಶಾಸಕ ಸ್ನೇಹಿತರ ಜತೆಗೆ ಹಾಗೂ ಕ್ಷೇತ್ರದಲ್ಲಿ ಓಡಾಡಿದ್ದರಿಂದ ಮುಂಜಾಗೃತಾ ಕ್ರಮವಾಗಿ ಪರೀಕ್ಷೆಗೆ ಒಳಗಾಗಿದ್ದೇನೆ. ಶುಕ್ರವಾರದಿಂದಲೇ ಹೋಂ ಕ್ವಾರಂಟೈನ್‌ ಆಗಿದ್ದು, ಮನೆಯಿಂದಲೇ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದೇನೆ’ ಎಂದು ಅವರು ಹೇಳಿದರು.

ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅವರೂ ಕಲಬುರ್ಗಿಯ ತಮ್ಮ ನಿವಾಸದಲ್ಲಿ ಸ್ವಯಂ ಗೃಹ ಬಂಧನಕ್ಕೆ ಒಳಗಾಗಿದ್ದಾರೆ. ತಮ್ಮ ಆಪ್ತ ಸಹಾಯಕರ ಮೂಲಕ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಕ್ಷೇತ್ರದಲ್ಲೇ ಓಡಾಡುತ್ತಿರುವ ಗುತ್ತೇದಾರ: ಆಳಂದ ಶಾಸಕ ಸುಭಾಷ ಗುತ್ತೇದಾರ ಮಾತ್ರ ಇನ್ನೂ ತಮ್ಮ ಕ್ಷೇತ್ರದಲ್ಲಿ ಓಡಾಡಿಕೊಂಡೇ ಇದ್ದಾರೆ. ಬಹು‍ಪಾಲು ಶಾಸಕರು ಜಿಲ್ಲಾ ಕೇಂದ್ರದಲ್ಲೇ ತಮ್ಮ ಮನೆಗಳಲ್ಲಿ ವಾಸ್ತವ್ಯ ಹೂಡುವುದು ಸಾಮಾನ್ಯ. ಆದರೆ, ಸುಭಾಷ ಗುತ್ತೇದಾರ ಮಾತ್ರ ಆಳಂದ ಬಿಟ್ಟು ಕದಲಿದ್ದು ಅಪರೂಪ.

ಹಿರಿಯರಾದ ಶಾಸಕ ಗುತ್ತೇದಾರ ಅವರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ಇದೆ. ಇದರ ಮಧ್ಯೆಯೂ ಅವರು ಹೋಂ ಕ್ವಾರಂಟೈನ್‌ ಆಗಿಲ್ಲ. ಪ್ರತಿ ದಿನ ಮನೆಗೆ ಬರುವ ಜನರಿಗೂ ಸ್ಪಂದಿಸುತ್ತಾರೆ, ಕೆಲಸವಿದ್ದರೆ ಹಳ್ಳಿಗಳೂ ಹೋಗುತ್ತಾರೆ. ಆದರೆ, ಅಗತ್ಯ ಸುರಕ್ಷತಾ ಕ್ರಮ ಅನುಸರಿಸುತ್ತಿದ್ದಾರೆ ಎಂದು ಅವರ ಆಪ್ತ ವಲಯಗಳು ಮಾಹಿತಿ ನೀಡಿವೆ.

ಚಿಂಚೋಳಿ ಶಾಸಕ ಡಾ.ಅವಿನಾಶ ಜಾಧವ ಕೂಡ ಬೆಂಗಳೂರಿನಲ್ಲಿದ್ದಾರೆ ಎಂದು ಅವರ ಆಪ್ತರು ಮಾಹಿತಿ ನೀಡಿದ್ದು, ಶಾಸಕರು ಫೋನ್‌ ಸಂಪರ್ಕಕ್ಕೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.