ADVERTISEMENT

ಚಿತ್ತಾಪುರ: ಕೆಆರ್‌ಐಡಿಎಲ್ ಹೆಸರಿನಲ್ಲಿ ಕಾಗಿಣಾ ನದಿ ಮರಳು ಲೂಟಿ?

ಸರ್ಕಾರಿ ದಾಸ್ತಾನು ಅಡ್ಡೆಯಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರು!

ಮಲ್ಲಿಕಾರ್ಜುನ ಎಚ್.ಎಂ
Published 15 ಏಪ್ರಿಲ್ 2025, 4:42 IST
Last Updated 15 ಏಪ್ರಿಲ್ 2025, 4:42 IST
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಸಮೀಪ ಕಾಗಿಣಾ ನದಿ ದಂಡೆಯಲ್ಲಿ ಸ್ಥಾಪಿಸಿರುವ ಕೆಆರ್‌ಐಡಿಎಲ್‌ ದಾಸ್ತಾನು ಸ್ಥಳದಲ್ಲಿ ಮರಳು ಸಂಗ್ರಹ ಮಾಡಿರುವ ದೃಶ್ಯ
ಚಿತ್ತಾಪುರ ತಾಲ್ಲೂಕಿನ ಭಾಗೋಡಿ ಸಮೀಪ ಕಾಗಿಣಾ ನದಿ ದಂಡೆಯಲ್ಲಿ ಸ್ಥಾಪಿಸಿರುವ ಕೆಆರ್‌ಐಡಿಎಲ್‌ ದಾಸ್ತಾನು ಸ್ಥಳದಲ್ಲಿ ಮರಳು ಸಂಗ್ರಹ ಮಾಡಿರುವ ದೃಶ್ಯ   

ಚಿತ್ತಾಪುರ: ತಾಲ್ಲೂಕಿನ ಭಾಗೋಡಿ ಗ್ರಾಮಕ್ಕೆ ಹೊಂದಿಕೊಂಡಿರುವ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರ ಸೇತುವೆ ಪಕ್ಕದಲ್ಲಿನ ಸರ್ವೆ ನಂ.33, 34ರಲ್ಲಿ ಕೆಆರ್‌ಐಡಿಎಲ್‌ ಮರಳು ದಾಸ್ತಾನು ಅಡ್ಡೆ ಸ್ಥಾಪಿಸಲಾಗಿದೆ. ಈ ದಾಸ್ತಾನು ಸ್ಥಳ ಹೆಸರಿಗೆ ಮಾತ್ರ ಸರ್ಕಾರದ್ದು. ವಾಸ್ತವವಾಗಿ ಇಲ್ಲಿ ಖಾಸಗಿ ವ್ಯಕ್ತಿಗಳ ದರ್ಬಾರು, ಕಾರುಬಾರು, ಮರಳು ಅಕ್ರಮ ಸಾಗಾಟ ಒಂದು ವರ್ಷದಿಂದ ನಿರ್ಭಯವಾಗಿ ನಡೆಯುತ್ತಿದೆ.

ಕಾಗಿಣಾ ನದಿಯಿಂದ ಮರಳು ಎತ್ತಿತಂದು ನಿಗದಿತ ಸ್ಥಳದಲ್ಲಿ ದಾಸ್ತಾನು ಮಾಡಲು ಮತ್ತು ಅಲ್ಲಿಂದ ರಾಜಧನ ಶುಲ್ಕ (ರಾಯಲ್ಟಿ) ಪಡೆದು ತೂಕ ಮಾಡಿ ಮರಳು ಮಾರಾಟ ಮಾಡಲೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಕೆಆರ್‌ಐಡಿಎಲ್‌ ಇಲಾಖೆಗೆ ಲೀಸ್ ಕೊಟ್ಟಿದೆ. ನದಿಯಿಂದ ಮರಳು ಎತ್ತಿ ದಾಸ್ತಾನು ಸ್ಥಳದಲ್ಲಿ ತಂದು ಹಾಕಲು ಬಾಡಿಗೆ ಆಧಾರದಲ್ಲಿ ಹಿಟಾಚಿ ಮತ್ತು ಟಿಪ್ಪರ್ ಹೊಂದಿರುವವರಿಗೆ ಕೆಲಸ ನೀಡಲಾಗಿದೆ. ಈ ಸಕ್ರಮ ಕ್ರಮದಡಿ ಮರಳು ಅಕ್ರಮ ಸಾಗಾಟ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಅದನ್ನು ತಡೆಯಲು ಯಾವ ಇಲಾಖೆಯ ಅಧಿಕಾರಿಗಳು ಧೈರ್ಯ ತೋರುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ.

ಪತ್ರಕರ್ತರಿಗೂ ಬೆದರಿಕೆ ಹಾಕಿದ್ದ ದಂಧೆಕೋರರು: 2024ರ ಅ.28ರ ಸಂಜೆ ಸಮಯದಲ್ಲಿ ಭಾಗೋಡಿ ಸೇತುವೆ ಪಕ್ಕದಲ್ಲಿನ ಕೆಆರ್‌ಐಡಿಎಲ್‌ ಮರಳು ದಾಸ್ತಾನು ಸ್ಥಳದಲ್ಲಿನ ಮರಳು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ ಎಂದು ಬಿಜೆಪಿಯ ಮುಖಂಡರೊಬ್ಬರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಯ ವಾಹನದ ಮುಂದೆ ಕುಳಿತು ಹೋರಾಟ ಮಾಡುತ್ತಿದ್ದರು. ವಿಷಯ ತಿಳಿದು ಕೆಲವು ಪತ್ರಕರ್ತರು ಸುದ್ಧಿಗಾಗಿ ಘಟನಾ ಸ್ಥಳಕ್ಕೆ ಹೋದಾಗ ಟಿಪ್ಪರ್ ಮಾಲೀಕರು ಮತ್ತು ಚಾಲಕರು ಎಂದು ಹೇಳಿಕೊಂಡು ಕೆಲವರು ಪತ್ರಕರ್ತರನ್ನೇ ಹೆದರಿಸಿ, ಬೆದರಿಸಿ, ಇಲ್ಲಿಗ್ಯಾಕೆ ಬಂದಿದ್ದು ಎಂದು ಕತ್ತಲಿನಲ್ಲಿ ಹಲ್ಲೆ ಮಾಡಲು ಮುಂದಾಗಿ ನಂತರ ಕ್ಷಮೆ ಯಾಚಿಸಿದ ಘಟನೆಯೂ ನಡೆದಿತ್ತು.

ADVERTISEMENT

ವ್ಯಕ್ತಿ ಮೃತಪಟ್ಟಾಗ ಎಚ್ಚೆತ್ತುಕೊಂಡ ಆಡಳಿತ: ತಾಲ್ಲೂಕಿನ ಬೆಳಗುಂಪಾ ಗ್ರಾಮದ ಶ್ರೀಧರ ಅಮೃತ ಎಂಬುವವರು ಕುರಿ ಮೇಯಿಸಲೆಂದು ಅಡವಿಗೆ ಹೋದವರು ಮರಳಿ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದಾಗ ಏ.8ರಂದು ಗ್ರಾಮದ ಸಮೀಪ ಖಾಸಗಿ ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆ ನಡೆಸಿದ ಆಳವಾದ ನೀರಿನ ಗುಂಡಿಯಲ್ಲಿ ಶ್ರೀಧರನ ಶವ ಪತ್ತೆಯಾದ ನಂತರ ಮರಳು ಅಕ್ರಮ ದಂಧೆಯ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಶುರುವಾಗಿದೆ. ವ್ಯಕ್ತಿಯ ಸಾವು ಮತ್ತು ಮರಳು ಅಕ್ರಮ ದಂಧೆಯ ಕುರಿತು ಶುರುವಾದ ಆರೋಪಗಳಿಂದ ಎಚ್ಚೆತ್ತುಕೊಂಡ ಆಡಳಿತವು ಅನಧಿಕೃತವಾಗಿ ಮರಳು ಸಾಗಾಟ ತಡೆಯಲು ಮುಂದಾಗಿದೆ. ಸೇಡಂ ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ತಡೆದು ತಪಾಸಣೆ ಮಾಡಿ, ₹95 ಸಾವಿರ ಮೌಲ್ಯದ ಮರಳು ಜಪ್ತಿ, ₹60 ಲಕ್ಷ ಮೌಲ್ಯದ ಆರು ಟಿಪ್ಪರ್, ₹2 ಲಕ್ಷ ಮೌಲ್ಯದ ಒಂದು ಟ್ರ್ಯಾಕ್ಟರ್ ವಶಕ್ಕೆ ಪಡೆದುಕೊಂಡಿದ್ದು ಗಮನಿಸಿದರೆ ಕಾಗಿಣಾ ನದಿಯಲ್ಲಿ ಮತ್ತು ಖಾಸಗಿ ಪಟ್ಟಾ ಜಮೀನಿನಲ್ಲಿ ಯಾವ ಪ್ರಮಾಣದಲ್ಲಿ ಮರಳು ಅಕ್ರಮ ದಂಧೆ ನಡೆಯುತ್ತಿದೆ ಎಂಬುದಕ್ಕೆ ದೊಡ್ಡ ಸಾಕ್ಷಿ ಎಂದು ಜನರು ಚರ್ಚೆ ನಡೆಸುತ್ತಿದ್ದಾರೆ.

ಕಾಗಿಣಾ ನದಿಯಿಂದ ಮರಳು ಎತ್ತಿ ದಾಸ್ತಾನು ಮಾಡಿಕೊಂಡು ರಾಯಲ್ಟಿ ಪ್ರಕಾರ ಮರಳು ಮಾರಾಟ ಮಾಡಲು ಕೆಆರ್‌ಐಡಿಎಲ್‌ಗೆ 40 ಎಕರೆ ಲೀಸ್ ನೀಡಲಾಗಿದೆ. ಅದಕ್ಕೆ ಆ ಇಲಾಖೆಯು ಗಣಿ ಇಲಾಖೆಗೆ ಶುಲ್ಕ ಪಾವತಿಸಿರುತ್ತದೆ. ಅದರ ಎಲ್ಲಾ ನಿರ್ವಹಣೆ ಜವಾಬ್ದಾರಿಯನ್ನು ಅದೇ ಇಲಾಖೆ ನೋಡಿಕೊಳ್ಳುತ್ತದೆ.
ಪ್ರವೀಣ ಕುಲಕರ್ಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.