ADVERTISEMENT

ಕಲಬುರಗಿ| ಬುದ್ಧ, ಬಸವ, ಅಂಬೇಡ್ಕರ್‌ ಪ್ರಜ್ಞೆಯ ಸಂಕೇತ: ವಡ್ಡಗೆರೆ ನಾಗರಾಜಯ್ಯ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 7:51 IST
Last Updated 23 ನವೆಂಬರ್ 2025, 7:51 IST
ಕಲಬುರಗಿಯ ಕನ್ನಡ ಭವನದಲ್ಲಿ ಶನಿವಾರ ಮಹೇಂದ್ರ ಫೌಂಡೇಷನ್‌ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಬ್ಧಕೋಶ ಮತ್ತು ನೋಟ್ ಬುಕ್ ವಿತರಿಸಲಾಯಿತು
ಕಲಬುರಗಿಯ ಕನ್ನಡ ಭವನದಲ್ಲಿ ಶನಿವಾರ ಮಹೇಂದ್ರ ಫೌಂಡೇಷನ್‌ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶಬ್ಧಕೋಶ ಮತ್ತು ನೋಟ್ ಬುಕ್ ವಿತರಿಸಲಾಯಿತು   

ಕಲಬುರಗಿ: ‘ಬುದ್ಧ, ಬಸವ, ಅಂಬೇಡ್ಕರ್‌ ಪ್ರಜ್ಞೆಯ ಸಂಕೇತ. ಆಲೋಚನೆಗಳು ಜಗತ್ತನ್ನು ಆಳುತ್ತವೆ ಎಂದಂತೆ ಬುದ್ಧನ ‘ಬಹುಜನ ಹಿತಾಯ ಬಹುಜನ ಸುಖಾಯ’ ಅಂತಹ ನುಡಿಗಟ್ಟುಗಳು ಕೂಡ ಜಗತ್ತನ್ನು ಆಳಬಲ್ಲವು’ ಎಂದು ಚಿಂತಕ ವಡ್ಡಗೆರೆ ನಾಗರಾಜಯ್ಯ ಹೇಳಿದರು.

ನಗರದ ಕನ್ನಡ ಭವನದಲ್ಲಿ ಶನಿವಾರ ಮಹೇಂದ್ರ ಫೌಂಡೇಷನ್‌ ವತಿಯಿಂದ ಸಚಿವ ಪ್ರಿಯಾಂಕ್‌ ಖರ್ಗೆ ಅವರ 47ನೇ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ‘ಜಾಗತಿಕ ತಲ್ಲಣಗಳು ಮತ್ತು ಬುದ್ಧ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

‘ಸಂವಿಧಾನದ ಪೀಠಿಕಾ ಭಾಗವನ್ನು ಭಾರತ ದೇಶದ ಎರಡನೇ ರಾಷ್ಟ್ರಗೀತೆ ಎಂದು ಕರೆಯುತ್ತೇವೆ. ಹಾಗೆ ಇದನ್ನು ಸಂವಿಧಾನದ ಆತ್ಮ ಎಂದೂ ಕರೆಯುತ್ತೇವೆ. ಇದರಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ‘ಭಾರತದ ಹಿಂದೂಗಳಾದ ನಾವು ಎಂದು ಹೇಳಿಲ್ಲ. ಮುಸ್ಲಿಂ, ಬುದ್ಧಿಸ್ಟ್‌ ಎಂದು ಅಥವಾ ಮತ್ಯಾವುದೇ ಧರ್ಮದವರಾದ ನಾವು ಎಂದು ಹೇಳಿಲ್ಲ. ಬದಲಿಗೆ ‘ಭಾರತದ ಪ್ರಜೆಗಳಾದ ನಾವು’ ಎನ್ನುವ ನುಡಿಗಟ್ಟನ್ನು ಕೊಟ್ಟಿದ್ದಾರೆ. ಧರ್ಮ ನಿರಪೇಕ್ಷ ಭಾರತ ನಮ್ಮದು ಎಂದು ಹೇಳಿದ್ದಾರೆ’ ಎಂದರು.

ADVERTISEMENT

‘ಭಾರತದ ಪ್ರಜೆಗಳಾದ ನಾವು’ ನುಡಿಗಟ್ಟನ್ನು ಹಾಳುಮಾಡುವ ತಲ್ಲಣ ನಮಗಿದೆ. ಹೇಗೆಂದರೆ ನಮಗೊಪ್ಪುವ ಸಂವಿಧಾನವನ್ನು ಅಂಬೇಡ್ಕರ್‌ ಕೊಟ್ಟಿಲ್ಲ ಅಥವಾ ಅಂಬೇಡ್ಕರ್‌ ಸಂವಿಧಾನದಲ್ಲಿ ನಮ್ಮ ವೇದಗಳ, ಶಾಸ್ತ್ರಗ್ರಂಥಗಳ ಮೌಲ್ಯಗಳು, ಆಶಯಗಳು ಇಲ್ಲ. ಆದ್ದರಿಂದ ನಾವು ಸಂವಿಧಾನವನ್ನು ಬದಲಾಯಿಸುವುದಕ್ಕೆ ಬಂದಿದ್ದೇವೆ. ನಮಗೆ ಮತ್ತೊಂದು ಸಂವಿಧಾನ ಬೇಕು ಅನ್ನುವಂಥವರಿಗೆ ನಾವು ಆಡಳಿತ ಮಾಡಲಿ ಅಂಥಾ ಅಧಿಕಾರದ ಚುಕ್ಕಾಣಿಯನ್ನು ಕೊಟ್ಟಿದ್ದೇವೆ. ಎಂಥ ಜನರನ್ನು ನಾವು ಆಯ್ಕೆ ಮಾಡಿ ಕಳಿಸಿದ್ದೀವಿ ಅನ್ನೋದನ್ನು ಯೋಚನೆ ಮಾಡಬೇಕು. ಅವರಿಗೆ ಬೇಕಾಗಿರುವುದು ರಾಜ್ಯಾಂಗ ಅಲ್ಲ; ಪಂಚಾಂಗ ಬೇಕು. ಪಂಚಾಂಗಕ್ಕೆ ತಕ್ಕ ಹಾಗೆ ನಮ್ಮ ತಲ್ಲಣಗಳನ್ನು ಯೋಚನೆ ಮಾಡಬೇಕು’ ಎಂದು ಹೇಳಿದರು.

‘ಸರ್ಕಾರಿ ಕಚೇರಿಗಳಲ್ಲಿ ಶುಕ್ರವಾರ ಲಕ್ಷ್ಮಿಪೂಜೆ ಮಾಡುತ್ತಾರೆ. ಶಾಲಾ–ಕಾಲೇಜುಗಳಲ್ಲಿ ಅಕ್ಷರದ ತಾಯಿ ಸಾವಿತ್ರಿಬಾಯಿ ಫುಲೆ, ನಮಗೆ ಜ್ಞಾನ ಕೊಟ್ಟಂತಹ ವಿಶ್ವಜ್ಞಾನಿ ಅಂಬೇಡ್ಕರ್‌ ಅವರ ಬದಲಿಗೆ ಶಾರದಾ, ಗಣಪತಿ ಪೂಜೆ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಎಂಎಲ್ಸಿ ತಿಪ್ಪಣಪ್ಪ ಕಮಕನೂರ ಮಾತನಾಡಿದರು.

ಡಿಡಿಪಿಯು ಸುರೇಶ ಅಕ್ಕಣ್ಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹುಮನಾಬಾದ್ ಉಪವಿಭಾಗದ ಎಇ ಲಕ್ಷ್ಮಣ ಎಂ.ಕನಕಟಕರ್, ಕೆಕೆಆರ್‌ಟಿಸಿ ವಿಭಾಗೀಯ ಸಂಚಾರ ಅಧಿಕಾರಿ ಈಶ್ವರ ಹೊಸಮನಿ, ಬಾಲಕಿಯರ ಸರ್ಕಾರಿ ಪಿಯು ಕಾಲೇಜು ಪ್ರಾಚಾರ್ಯ ದೇವನಗೌಡ ಪಾಟೀಲ, ಆರ್.ಜೆ. ಪಿಯು ಕಾಲೇಜು ಪ್ರಾಚಾರ್ಯ ಬುರ್ಲಿ ಪ್ರಹ್ಲಾದ, ಎಂ.ಕೆ. ಸಂಯುಕ್ತ ಪಿಯು ಕಾಲೇಜು ಪ್ರಾಚಾರ್ಯ ಬಿ.ಎಸ್.ಮಾಲಿಪಾಟೀಲ, ಕೆನರಾ ಬ್ಯಾಂಕ್ ಹಿರಿಯ ವ್ಯವಸ್ಥಾಪಕ ಅಜಯ ಮಡಪೆ, ವೈದ್ಯ ಡಾ.ಕೃಷ್ಣಮೂರ್ತಿ, ಫೌಂಡೇಷನ್ ಅಧ್ಯಕ್ಷೆ ಜ್ಯೋತಿ ಚಂದ್ರಶೇಖರ ದೊಡ್ಡಮನಿ, ಸತೀಶ್ ಸಜ್ಜನ್, ಅನಿಲಕುಮಾರ ಸುಗಂಧಿ ಉಪಸ್ಥಿತರಿದ್ದರು.

ಎನ್.ಎಸ್.ಎಸ್ ವಿಭಾಗೀಯ ಅಧಿಕಾರಿ ಚಂದ್ರಶೇಖರ ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಮಹೇಶ್ ಕುಲಕರ್ಣಿ ಅವರು ವಡ್ಡಗೆರೆ ನಾಗರಾಜಯ್ಯ ಅವರ ಪರಿಚಯ ಮಾಡಿದರು.

ಸಿದ್ಧಾರ್ಥ ಚಿಮ್ಮಾಇದಲಾಯಿ ಹಾಗೂ ಸಂಗಡಿಗರು ಧಮ್ಮಗೀತೆ ಪ್ರಸ್ತುತಪಡಿಸಿದರು.

ಫೌಂಡೇಷನ್ ಕಾರ್ಯದರ್ಶಿ ಶರಣಬಸವ ಹೆಗ್ಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಶೋಕ ತಳಕೇರಿ ಸ್ವಾಗತಿಸಿದರು. ಮಾರುತಿ ಬೇಂದ್ರೆ ನಿರೂಪಿಸಿದರು. ಪಾಂಡು ಎಲ್.ರಾಠೋಡ್ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.