
ಕಲಬುರಗಿ: ‘ಪ್ರಬುದ್ಧ ಹಾಗೂ ಸಮೃದ್ಧ ಭಾರತದ ನಿರ್ಮಾಣಕ್ಕಾಗಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಬರೀ ಅಗತ್ಯವಲ್ಲ; ಅನಿವಾರ್ಯ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಹೀರಾಪುರ ಪ್ರದೇಶದ ಸಾಂಚಿ ನಗರದ ಪ್ರಬುದ್ಧ ಬುದ್ಧ ವಿಹಾರ ಹಾಗೂ ಬಿಕ್ಕುಗಳ ನಿವಾಸ ಉದ್ಘಾಟಿಸಿ ಅವರು ಮಾತನಾಡಿದರು.
‘ಬಾಬಾಸಾಹೇಬ ಅಂಬೇಡ್ಕರ್ ಬರಹಗಳ ಎಷ್ಟು ಸಂಪುಟಗಳನ್ನು ಓದಿದ್ದೀರಿ’ ಎಂದು ನೆರೆದಿದ್ದ ಜನರನ್ನು ಉದ್ದೇಶಿಸಿ ಪ್ರಶ್ನಿಸಿದ ಸಚಿವ ಪ್ರಿಯಾಂಕ್, ‘ಬರೀ ಪ್ರಬುದ್ಧ ಬುದ್ಧವಿಹಾರದಂಥ ಕಟ್ಟಡಗಳನ್ನು ಕಟ್ಟಿದರೆ ಪ್ರಬುದ್ಧರಾಗಲ್ಲ. ಪ್ರಬುದ್ಧ ಸಮಾಜ ನಿರ್ಮಾಣ ಆಗಬೇಕಾದರೆ ಆರ್‌ಎಸ್‌ಎಸ್ ಹಾಗೂ ಮನುವಾದಿ ಸಿದ್ಧಾಂತಗಳಿಂದ ಯುವಜನರು ದೂರ ಇರಬೇಕು. ಡಾ.ಅಂಬೇಡ್ಕರ್ ಲೇಖನಗಳು, ವಿಚಾರಗಳು, ಆಲೋಚನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು’ ಎಂದರು.
‘ಅಂಬೇಡ್ಕರ್ ಅವರನ್ನು ಓದದಿದ್ದರೆ, ಅವರ ವಿಚಾರ, ಆಲೋಚನೆ ತಿಳಿಯದಿದ್ದರೆ ದೇಶದ ಭವಿಷ್ಯವಾದ ಯುವಜನರಿಗೆ ಉಳಿಗಾಲವಿಲ್ಲ. ಅಂಬೇಡ್ಕರ್ ವಿಚಾರಗಳು, ಬರಹಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದರು.
‘ಕೆಲವು ಸಂಘಟನೆಗಳು ಸಮಾಜದಲ್ಲಿ ಗಟ್ಟಿಯಾಗಿ ಬೇರು ಬಿಟ್ಟಿವೆ. ಅಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್, ಅಂಬಿಗರ ಚೌಡಯ್ಯ, ಕನಕರಿಗೂ ಜಾಗವಿಲ್ಲ. ಆ ತತ್ವದಲ್ಲಿ ಒಂದೇ ಧರ್ಮವಿದೆ. ಒಂದೇ ಸಮಾಜವಿದೆ. ಆ ಸಂಘಗಳು, ಸಂಘಟನೆಗಳು ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಗಳು. ಅವರಿಗೆ ಶ್ರೇಷ್ಠತೆಯ ವ್ಯಸನ. ಹೀಗಾಗಿಯೇ ಚಿತ್ತಾಪುರದ ಪಥಸಂಚಲನದ ವಿಷಯದಲ್ಲಿ ಪೊಲೀಸರಿಂದ ಅನುಮತಿ ಪಡೆಯದೇ ಸೂಚನಾ ಪತ್ರ ಕೊಟ್ಟ ಎರಡು ತಿಂಗಳು ಕೋರ್ಟ್‌ಗೆ ಅಲೆಯುವಂತಾಯಿತು. ಮೊದಲು ಮಾಹಿತಿ ನೀಡುತ್ತಿದ್ದವರು, ಬಳಿಕ ಅನುಮತಿ ಪಡೆದುಕೊಳ್ಳಲೇಬೇಕಾಯಿತು. ಇದು ಸಂವಿಧಾನದ ಶಕ್ತಿ’ ಎಂದರು.
‘ಬುದ್ಧ, ಬಸವ ಹಾಗೂ ಅಂಬೇಡ್ಕರ್ ವಿಚಾರಧಾರೆಗಳು ಭಿನ್ನವಾಗಿಲ್ಲ. ಅವೆಲ್ಲ ಸೇರಿಯೇ ಸಂವಿಧಾನವಾಗಿದೆ. ಕಲಬುರಗಿ ನಗರದಲ್ಲಿ ಅನುಭವ ಮಂಟಪ, ಪ್ರಬುದ್ಧ ಬುದ್ಧ ವಿಹಾರದಂಥ ಪ್ರಗತಿಪರ ಚಿಂತನಾ ಕೇಂದ್ರಗಳನ್ನು ಸ್ಥಾಪಿಸಲು ಕ್ರಮವಹಿಸಲಾಗುವುದು’ ಎಂದು ಭರವಸೆ ನೀಡಿದರು.
ಹನುಮಂತ ಇಟಗಿ ಅಧ್ಯಕ್ಷತೆ ವಹಿಸಿದ್ದರು. ಅನಿಲ ಟೆಂಗಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೇಯರ್ ವರ್ಷಾಜಾನೆ, ಕುಡಾ ಅಧ್ಯಕ್ಷ ಮಜಹರ್ ಆಲಂಖಾನ್, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ, ಬಿಕ್ಕುಗಳಾದ ಬೀದರ್‌ನ ಬಂತೆ ಧಮ್ಮನಾಗ, ಬೆಂಗಳೂರಿನ ಬಂತೆ ಜ್ಞಾನಾನಂದ, ಕಲಬುರಗಿಯ ಬಂತೆ ವರಜ್ಯೋತಿ, ಬೀದರ್‌ನ ಬಂತೆ ರೇವತ, ಬೀದರ್‌ನ ಬಂತೆ ಜ್ಞಾನಸಾಗರ, ಮುಖಂಡ ಐ.ಎಸ್.ವಿದ್ಯಾಸಾಗರ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.
ಬೌದ್ಧ ಧರ್ಮ ಅಪ್ಪಟ ವೈಜ್ಞಾನಿಕ. ಭಾರತದಲ್ಲೇ ಉಗಮಿಸಿದರೂ ಪಟ್ಟಭದ್ರರ ಹಿತಾಸಕ್ತಿಯಿಂದ ಇಲ್ಲಿ ಮರೆಯಾಗಿ ವಿದೇಶಗಳಲ್ಲಿ ನೆಲೆ ಕಾಣುವಂತಾಯಿತುಅಲ್ಲಮಪ್ರಭು ಪಾಟೀಲ ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.