ಚಿತ್ತಾಪುರ: ಅಂಗನವಾಡಿ ನೌಕರರನ್ನು ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಅಂಗನವಾಡಿ ನೌಕರರು ಬುಧವಾರ ಮುಷ್ಕರ ನಡೆಸಿ, ನಂತರ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಅಂಗನವಾಡಿ ನೌಕರರನ್ನು ಖಾಯಂ ಮಾಡಬೇಕು. 29 ಕಾರ್ಮಿಕ ಕಾನೂನುಗಳನ್ನು ಉಳಿಸಬೇಕು. ಹೊಸ ನಾಲ್ಕು ಸಂಹಿತೆಗಳನ್ನು ರದ್ದುಗೊಳಿಸಬೇಕು. ಐಸಿಡಿಎಸ್ ಯೋಜನೆಗೆ ಬಜೆಟ್ ಹೆಚ್ಚಿಸಬೇಕು. ಫಲಾನುಭವಿಗಳಿಗೆ ಕೊಡುವ ಘಟಕ ವೆಚ್ಚ ಹೆಚ್ಚಿಸಬೇಕು ಎಂದು ನೌಕರರು ಆಗ್ರಹಿಸಿದರು.
₹26 ಸಾವಿರ ಕನಿಷ್ಠ ವೇತನ ಹಾಗೂ ₹10ಸಾವಿರ ಮಾಸಿಕ ಪಿಂಚಣಿ ನೀಡಬೇಕು. ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಪ್ರಾರಂಭಿಸಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಎಂದು ಒತ್ತಾಯಿಸಿದರು.
1972 ಗ್ರ್ಯಾಚ್ಯುಟಿ ಕಾಯ್ದೆಯನ್ನು 2011 ರಿಂದ ನಿವೃತ್ತಿಯಾದ 10,311 ಕಾರ್ಯಕರ್ತೆಯರು, 11,980 ಸಹಾಯಕಿಯರಿಗೆ ಅನ್ವಯ ಮಾಡಬೇಕು ಎಂದು ಮನವಿ ಮಾಡಿದರು.
ದೇವಮ್ಮ ಅನ್ನದಾನಿ, ಅಕ್ಕಮಹಾದೇವಿ, ರಾಧಾ, ಪಾರ್ವತಿ ಡೊಣ್ಣೂರು, ಸುಮಿತ್ರಾ ಕೊಡದೂರು, ಶರಣಮ್ಮ ಹಣ್ಣಿಕೇರಿ, ನಿರ್ಮಲಾ ಮತ್ತಿಮಡು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.