ಕಲಬುರಗಿ: ಕೇಂದ್ರ ಸರ್ಕಾರದ ಐಸಿಡಿಎಸ್ ಯೋಜನೆಯಡಿ ಪೌಷ್ಟಿಕಾಂಶದಿಂದ ಬಳಲುತ್ತಿರುವ ಮಹಿಳೆಯರು, ಮಕ್ಕಳಿಗೆ ನೀಡುವ ಆಹಾರ ಧಾನ್ಯ ವಿತರಣೆ ಸಂದರ್ಭದಲ್ಲಿ ಫಲಾನುಭವಿಗಳ ಮುಖಚರ್ಯೆ ಗುರುತಿಸುವ ಕ್ರಮ (ಎಫ್‌ಆರ್‌ಎಸ್) ವಿರೋಧಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಕರ್ತೆಯರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಯಾವುದೇ ಫಲಾನುಭವಿ ಹಸಿವಿನಿಂದ ನರಳಬಾರದು ಎಂಬುದು 2013ರಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯ್ದೆಯ ಆಶಯ. ಆಧಾರ್ ಕಾರ್ಡ್ ಇಲ್ಲ ಎಂಬ ನೆಪದಲ್ಲಿ ಸಬ್ಸಿಡಿ ಅಥವಾ ಉಚಿತವಾಗಿ ಸಿಗುವ ಸೌಲಭ್ಯಗಳಿಂದ ಫಲಾನುಭವಿಗಳು ವಂಚಿತರಾಗಬಾರದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಅಷ್ಟಾಗಿಯೂ ಸರ್ಕಾರ ಫಲಾನುಭವಿಗಳ ಮುಖಚರ್ಯೆ ಗುರುತಿಸುವ ಕ್ರಮಕ್ಕೆ ಮುಂದಾಗಿರುವುದು ಅಮಾನವೀಯ ಎಂದು ಸಂಘದ ಸದಸ್ಯರು ಟೀಕಿಸಿದರು.
ಎಫ್‌ಆರ್‌ಎಸ್ ಮುಖಾಂತರ ಸಂಗ್ರಹಿಸುವ ಫಲಾನುಭವಿಯ ವೈಯಕ್ತಿಕ ಮಾಹಿತಿ ಸೋರಿಕೆಯಾಗುತ್ತದೆ. ವಿಪರೀತ ಸೈಬರ್ ವಂಚನೆಗಳು ಹೆಚ್ಚುತ್ತಿವೆ. ಶೇ 60ರಷ್ಟು ಪಾಲಿನ ವಂತಿಗೆ ನೀಡಬೇಕಾದ ಕೇಂದ್ರ ಸರ್ಕಾರ ಎಫ್‌ಆರ್‌ಎಸ್‌ನಂತಹ ನಿರ್ಬಂಧಗಳನ್ನು ಹಾಕುವ ಮೂಲಕ ತನ್ನ ಪಾಲಿನ ಹಣ ಕಡಿಮೆ ಮಾಡಲು ಮುಂದಾಗಿದೆ. ಇದರಿಂದಾಗಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 135ನೇ ಸ್ಥಾನದಲ್ಲಿರುವ ಭಾರತ ಇದರಿಂದ ಮತ್ತಷ್ಟು ಕಳೆಗುಂದಲಿದೆ ಎಂದು ಪ್ರತಿಭಟನಕಾರರು ಕಳವಳ ವ್ಯಕ್ತಪಡಿಸಿದರು.
ಎಫ್‌ಆರ್‌ಎಸ್ ರದ್ದು ಮಾಡಿ ಐಸಿಡಿಎಸ್ ಯೋಜನೆಯನ್ನು ಕಾಯಂ ಮಾಡಬೇಕು. ಗುಜರಾತ್ ಹೈಕೋರ್ಟ್ ತೀರ್ಪಿನಂತೆ ಸಿ ಮತ್ತು ಡಿ ಗುಂಪಿನ ನೌಕರರೆಂದು ಪರಿಗಣಿಸಿ 2018ರಿಂದ ಅನ್ವಯವಾಗುವಂತೆ ವೇತನ ಹೆಚ್ಚಿಸಿ ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಿಸಬೇಕು. ಮನವಿಗೆ ಸ್ಪಂದಿಸದಿದ್ದರೆ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಕೇಂದ್ರ ಸಚಿವರ ಮನೆಯ ಮುಂದೆ ಅನಿರ್ದಿಷ್ಟ ಅವಧಿಯ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಗೌರಮ್ಮ ಪಾಟೀಲ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.