ಅಫಜಲಪುರ: ಸಣ್ಣ ಮತ್ತು ಅತಿ ಸಣ್ಣ ರೈತರ ಆದಾಯ ಹೆಚ್ಚಿಸುವ ಮತ್ತು ಜಾನುವಾರು ಸಾಕಣೆಗೆ ಪ್ರೋತ್ಸಾಹಿಸುವ ಪಶು ಭಾಗ್ಯ ಯೋಜನೆಯನ್ನು ಸರ್ಕಾರ ಹಿಂಪಡೆದ ಕಾರಣ ಜಿಲ್ಲೆಯಲ್ಲಿ ರೈತರ ಉಪಕಸಬು ಹೈನುಗಾರಿಕೆಗೆ ಹಿನ್ನಡೆಯಾಗುತ್ತಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರು ಹಸು, ಕುರಿ, ಆಡು, ಹಂದಿ, ಮತ್ತು ಕೋಳಿ ಘಟಕಗಳನ್ನು ಸ್ಥಾಪಿಸಲು ಈ ಯೋಜನೆಯಡಿ, ಬ್ಯಾಂಕ್‌ಗಳಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ 33ರಷ್ಟು ಹಾಗೂ ಇತರ ಜನಾಂಗದವರಿಗೆ ಶೇ 25ರಷ್ಟು ಆರ್ಥಿಕ ಸಹಾಯಧನ ನೀಡಲಾಗುತ್ತಿತ್ತು. ಸರ್ಕಾರ ಈ ಯೋಜನೆ ಹಿಂಪಡೆದ ಕಾರಣ ನೂರಾರು ಬಡ ಕುಟುಂಬಗಳು ಕಷ್ಟ ಪಡುವಂತಾಗಿದೆ.
ಸಮಗ್ರ ಗ್ರಾಮೀಣ ಕುರಿ-ಮೇಕೆ ಉತ್ಪಾದನಾ ವ್ಯವಸ್ಥೆ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆರಂಭವಾದ ಕೇಂದ್ರ ಸರ್ಕಾರದ (ಎನ್ಎಂಎಲ್) ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯನ್ನು ಹಿಂಪಡೆದಿದೆ. ಹೀಗಾಗಿ ಪಶು ಆಸ್ಪತ್ರೆಯ ಮೂಲಕ ಜಾರಿಯಾದ ಯೋಜನೆಗಳು ಬಂದ್ ಆದ ಕಾರಣ ಪಶುಗಳ ಅಭಿವೃದ್ಧಿಗೆ ಮತ್ತು ಹೈನುಗಾರಿಕೆಗೆ ಮತ್ತಷ್ಟು ಹಿನ್ನಡೆ ಆಗಿದೆ.
ರಾಜ್ಯ ಸರ್ಕಾರ ಕೃಷಿ ಭಾಗ್ಯ ಯೋಜನೆ ಸ್ಥಗಿತಗೊಳಿಸಿದೆ. 15 ದಿನಗಳ ಹಿಂದೆ ಎನ್ಎಂಎಲ್ ಯೋಜನೆಯನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ತಾಲ್ಲೂಕಿನಲ್ಲಿ ಎನ್ಎಂಎಲ್ ಯೋಜನೆ ಅಡಿಯಲ್ಲಿ ಒಟ್ಟು 14 ರೈತರು ಅರ್ಜಿ ಸಲ್ಲಿಸಿದ್ದರು. ಅವುಗಳಲ್ಲಿ ನಾಲ್ಕು ಅರ್ಜಿಗಳು ಅನುಮೋದನೆಯಾಗಿ ಬ್ಯಾಂಕ್ ಸಾಲ, ಸಹಾಯಧನ ಪಡೆದಿದ್ದಾರೆ. ಇನ್ನು ಉಳಿದ ಅರ್ಜಿಗಳು ಇತ್ಯರ್ಥವಾಗಬೇಕಾಗಿದೆ’ ಎಂದು ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕ ಕೆ.ಎಂ. ಕೋಟೆ ತಿಳಿಸಿದರು.
‘ಪಶುಭಾಗ್ಯ ಯೋಜನೆಯಡಿ ನನಗೆ ಆಯ್ಕೆ ಮಾಡಿದ್ದರು. ಎಸ್‌ಬಿಐ ಬ್ಯಾಂಕಿನವರು ₹20 ಸಾವಿರ ಸಹಾಯಧನ ನೀಡಿದ್ದಾರೆ. ಇನ್ನೂ ₹60 ಸಾವಿರ ಸಾಲ ನೀಡುತ್ತಿಲ್ಲ. ಹೀಗಾಗಿ ನಾನು ಒಂದು ಆಕಳು ಖರೀದಿ ಮಾಡಿ ಅದರ ಮೇಲೆ ಉಪಜೀವನ ಮಾಡುತ್ತಿದ್ದೇವೆ’ ಎಂದು ಬಳ್ಳೂರ್ಗಿ ಗ್ರಾಮದ ರೈತ ಖಾಜಪ್ಪ ಸಕ್ಕರೆ ತಿಳಿಸಿದರು.
‘ಹೈನುಗಾರಿಕೆ ಕೃಷಿಗೆ ಪೂರಕ ಆಗಿದ್ದು, ಪಶುಭಾಗ್ಯ ಯೋಜನೆಯಿಂದ ರೈತರಿಗೆ ಅನುಕೂಲವಾಗಿತ್ತು. ಸರ್ಕಾರ ಇದನ್ನು ಮುಂದುವರಿಸಿದರೆ ಅನುಕೂಲವಾಗುತ್ತಿತ್ತು’ ಎಂದು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ ವಿದ್ಯಾಧರ ಮಂಗಳೂರು ತಿಳಿಸಿದ್ದಾರೆ.
ಸಣ್ಣ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಕೃಷಿ ಉಪಕಸುಬು ಉತ್ತೇಜಿಸುವ ಪಶುಭಾಗ್ಯ ಯೋಜನೆಯನ್ನು ಸರ್ಕಾರ ಮತ್ತೆ ಮುಂದುವರಿಸಬೇಕುವಿದ್ಯಾಧರ ಮಂಗಳೂರು ತಾಲ್ಲೂಕು ಬಿಜೆಪಿ ಮಂಡಲ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.