ADVERTISEMENT

ಕಲಬುರಗಿ |ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಸುಗ್ಗಿ: ನಾಲ್ಕೇ ತಿಂಗಳಲ್ಲಿ 27 ಕೇಸ್

56 ಆರೋಪಿಗಳ ವಿರುದ್ಧ ಪ್ರಕರಣ ದಾಖಲು

ಬಸೀರ ಅಹ್ಮದ್ ನಗಾರಿ
Published 14 ಆಗಸ್ಟ್ 2025, 6:02 IST
Last Updated 14 ಆಗಸ್ಟ್ 2025, 6:02 IST
ಅನ್ನಭಾಗ್ಯ ಯೋಜನೆ (ಸಾಂದರ್ಭಿಕ ಚಿತ್ರ)
ಅನ್ನಭಾಗ್ಯ ಯೋಜನೆ (ಸಾಂದರ್ಭಿಕ ಚಿತ್ರ)   

ಕಲಬುರಗಿ: ಬಡವರ ಹಸಿವು ತಣಿಸಲು ಸರ್ಕಾರ ವಿತರಿಸುತ್ತಿರುವ ‘ಅನ್ನಭಾಗ್ಯ’ ಅಕ್ಕಿಗೆ ಜಿಲ್ಲೆಯಲ್ಲಿ ಕನ್ನ ಹಾಕುವ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ.

ಪಡಿತರ ಧಾನ್ಯಗಳನ್ನು ಕಾಳಸಂತೆಯಲ್ಲಿ ಅಕ್ರಮ ಮಾರಾಟ, ಖರೀದಿ, ಸಾಗಣೆಗೆ ಸಂಬಂಧಿಸಿದಂತೆ 2023ರ ಏಪ್ರಿಲ್‌ನಿಂದ 2025ರ ಆಗಸ್ಟ್‌ 8ರ ತನಕ ಒಟ್ಟು 116 ಪ್ರಕರಣಗಳು ದಾಖಲಾಗಿದೆ. ಬರೋಬ್ಬರಿ ₹2.47 ಕೋಟಿ ಮೊತ್ತದ ಪಡಿತರ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಅವಧಿಯಲ್ಲಿ 614.9 ಟನ್‌ ಅಕ್ಕಿ, 35.4 ಟನ್‌ ಗೋಧಿ, 29.5 ಕ್ವಿಂಟಲ್‌ ಜೋಳ ಹಾಗೂ ಗೃಹ ಬಳಕೆಯ 144 ಸಿಲಿಂಡರ್‌ಗಳನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ₹2.47 ಕೋಟಿ. ಈ ಸಂಬಂಧ 239 ಆರೋಪಿಗಳ ವಿರುದ್ಧ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಅಗತ್ಯ ವಸ್ತುಗಳ ಕಾಯ್ದೆ–1955ರಡಿ ಪ್ರಕರಣ ದಾಖಲಾಗಿವೆ.

ADVERTISEMENT

ಪಡಿತರ ಅಕ್ಕಿ–ಗೋಧಿ ಅಕ್ರಮ ಸಾಗಣೆಗೆ ಬಳಸಿದ 74 ವಾಹನಗಳನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಒಟ್ಟು ಮೌಲ್ಯ ₹8.02 ಕೋಟಿ. ಜಪ್ತಿ ಮಾಡಿರುವ ಧಾನ್ಯ ಹಾಗೂ ವಾಹನಗಳ ಒಟ್ಟು ಮೊತ್ತ ₹10.50 ಕೋಟಿ.

ಪಡಿತರ ಧಾನ್ಯಗಳ ಅಕ್ರಮಕ್ಕೆ ಸಂಬಂಧಿಸಿದಂತೆ 2023–2024ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 44 ಪ್ರಕರಣಗಳು ವರದಿಯಾಗಿದ್ದವು. ಆಗ 162 ಟನ್‌ ಅಕ್ಕಿ, 5.96 ಟನ್‌ ಗೋಧಿ ಹಾಗೂ 2.24 ಟನ್‌ ಜೋಳ ಜಪ್ತಿ ಮಾಡಲಾಗಿತ್ತು. 2024–25ರಲ್ಲಿ ಒಟ್ಟು 45 ಪ್ರಕರಣಗಳು ವರದಿಯಾಗಿ, ಆಗ 319.3 ಟನ್‌ ಅಕ್ಕಿ, 29.50 ಟನ್‌ ಗೋಧಿ ಹಾಗೂ 26.80 ಟನ್‌ ಜೋಳ ಜಪ್ತಿ ಮಾಡಲಾಗಿತ್ತು. 

‘ಸಮಸ್ಯೆಯ ಎರಡು ತುದಿ...’: ‘ಕಾಳಸಂತೆಯಲ್ಲಿ ಪಡಿತರ ಧಾನ್ಯ ಅಕ್ರಮ ಮಾರಾಟ–ಖರೀದಿಗೆ ಎರಡು ಮುಖಗಳಿವೆ. ಒಂದೆಡೆ ದಲ್ಲಾಳಿಗಳು ಹಣದ ಆಮಿಷವೊಡ್ಡಿ ಬಡವರಿಂದ ಅಕ್ಕಿ ಖರೀದಿಸುತ್ತಿದ್ದಾರೆ. ಮನೆ–ಮನೆಗೆ ಹೋಗಿ ಕಡಿಮೆ ದುಡ್ಡಿಗೆ ಅಕ್ಕಿ ಸಂಗ್ರಹಿಸುವ ದಂಧೆಕೋರರು, ಅದನ್ನು ರಾಜ್ಯದ ಗಡಿಯಾಚೆ ಮಾರುತ್ತಿದ್ದಾರೆ. ಇನ್ನೊಂದೆಡೆ ಬಡವರೇ ಪಡಿತರ ಅಕ್ಕಿ ತಂದು ವಾರದ ಸಂತೆಯಲ್ಲಿ ಇಂಥ ವ್ಯಾಪಾರಿಗಳಿಗೆ ಮಾರುತ್ತಾರೆ. ಅದರಿಂದ ಬಂದ ಹಣದಲ್ಲಿ ಮನೆ ತರಕಾರಿ–ಸೊಪ್ಪು ಖರೀದಿಸುತ್ತಿದ್ದಾರೆ. ಸೇಡಂ ತಾಲ್ಲೂಕಿನ ಗ್ರಾಮವೊಂದರಲ್ಲಿ ಇಂಥ ಪ್ರಕರಣ ಬೆಳಕಿಗೆ ಬಂದಿವೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೊಕ್ಕದ ಬದಲು ಅಕ್ಕಿ; ಅಕ್ಕಿ ಮಾರಿ ರೊಕ್ಕ!

ಅಕ್ಕಿ ಕೊರತೆ ಕಾರಣಕ್ಕೆ ಬಿಪಿಎಲ್‌ ಕಾರ್ಡ್‌ದಾರರಿಗೆ 5 ಕೆ.ಜಿ ಅಕ್ಕಿ ಮತ್ತು ಮಿಕ್ಕುಳಿದ 5 ಕೆ.ಜಿ ಅಕ್ಕಿ ಬದಲಿಗೆ ರಾಜ್ಯ ಸರ್ಕಾರ 2025ರ ಫೆಬ್ರುವರಿ ತನಕ ಹಣವನ್ನು ಡಿಬಿಟಿ ಮೂಲಕ ಬ್ಯಾಂಕ್‌ ಖಾತೆಗೆ ವರ್ಗಾಯಿಸುತ್ತಿತ್ತು. ಫೆಬ್ರುವರಿ ತಿಂಗಳಿನಿಂದ ರೊಕ್ಕದ ಬದಲಿಗೆ 5 ಕೆ.ಜಿ ಅಕ್ಕಿಯನ್ನೇ ಸರ್ಕಾರ ವಿತರಿಸುತ್ತಿದೆ. ಈ ಲೆಕ್ಕದಂತೆ ಮಾರ್ಚ್‌ ತಿಂಗಳಿಂದ ಬಡವರಿಗೆ ಪಡಿತರ ಧಾನ್ಯ ವಿತರಣೆ ನಡೆಯುತ್ತಿದೆ. ಸರ್ಕಾರ ವಿತರಿಸುತ್ತಿರುವ ಅಕ್ಕಿಯ ಪ್ರಮಾಣ ಹೆಚ್ಚಿದ ಬೆನ್ನಲ್ಲೇ ಕಾಳಸಂತೆಯಲ್ಲಿ ಪಡಿತರ ಅಕ್ಕಿಗೆ ಕನ್ನಹಾಕುವ ಚಟುವಟಿಕೆಗಳೂ ಬಿರುಸುಗೊಂಡಿವೆ. ಸರ್ಕಾರದ ನೀಡುತ್ತಿರುವ ಅಕ್ಕಿ ಮಾರಿ ಮತ್ತೆ ರೊಕ್ಕ ಪಡೆಯುವ ಘಟನೆಗಳು ನಡೆಯುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.

2025ರ ಮಾರ್ಚ್‌ ತಿಂಗಳೊಂದರಲ್ಲೇ ಏಳು ಪ್ರಕರಣಗಳಲ್ಲಿ 18 ವಿರುದ್ಧ ಪ್ರಕರಣ ದಾಖಲಿಸಿದ್ದ ಆಹಾರ ಇಲಾಖೆ ಅಧಿಕಾರಿಗಳು ₹17.70 ಲಕ್ಷ ಮೌಲ್ಯದ 51.5 ಟನ್‌ ಪಡಿತರ ಅಕ್ಕಿ ವಶಕ್ಕೆ ಪಡೆದಿದ್ದರು. 2025ರ ಏಪ್ರಿಲ್‌ನಿಂದ ಆಗಸ್ಟ್‌ 8ರ ತನಕ ಒಟ್ಟು 27 ಪ್ರಕರಣಗಳಲ್ಲಿ 56 ಮಂದಿ ವಿರುದ್ಧ ಪ್ರಕರಣ ದಾಖಲಿಸಿರುವ ಆಹಾರ ಇಲಾಖೆ ಅಧಿಕಾರಿಗಳು 133.36 ಟನ್‌ ಅಕ್ಕಿ 5.30 ಕ್ವಿಂಟಲ್‌ ಜೋಳ ಹಾಗೂ 30 ಗೃಹ ಬಳಕೆಯ ಸಿಲಿಂಡರ್‌ ವಶಕ್ಕೆ ಪಡೆದ್ದಾರೆ. ಜೊತೆಗೆ 22 ವಾಹನಗಳನ್ನೂ ಜಪ್ತಿ ಮಾಡಿದ್ದಾರೆ. ಪಡಿತರ ಧಾನ್ಯ ಹಾಗೂ ವಾಹನಗಳ ಒಟ್ಟು ಮೌಲ್ಯ ₹6.15 ಕೋಟಿ.

ಆರು ವಿಶೇಷ ತಂಡಗಳಲ್ಲದೇ ತಹಶೀಲ್ದಾರ್‌ ನೇತೃತ್ವದ ತಾಲ್ಲೂಕುವಾರು ತಂಡಗಳು ಕಾಳಸಂತೆಯಲ್ಲಿ ಪಡಿತರ ಧಾನ್ಯ ಮಾರಾಟ ವ್ಯವಸ್ಥೆ ಮೇಲೆ ನಿಗಾಕ್ಕೆ ಹದ್ದಿನ ಕಣ್ಣಿಟ್ಟಿದ್ದು ಹೆಚ್ಚಿನ ಪ್ರಕರಣ ವರದಿಯಾಗುತ್ತಿವೆ.
–ಭೀಮರಾಯ ಕಲ್ಲೂರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.