ADVERTISEMENT

ಲಾಕ್‌ಡೌನ್‌ಗೂ ಮೊದಲು ಪ್ಯಾಕೇಜ್ ಘೋಷಿಸಿ: ಮಲ್ಲಿಕಾರ್ಜುನ ಖರ್ಗೆ ಒತ್ತಾಯ

ರಾಜ್ಯಸಭೆ ವಿರೋಧ ಪಕ್ಷದ ನಾಯಕ

​ಪ್ರಜಾವಾಣಿ ವಾರ್ತೆ
Published 5 ಜನವರಿ 2022, 11:31 IST
Last Updated 5 ಜನವರಿ 2022, 11:31 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ಕಲಬುರಗಿ: ಕೊರೊನಾ ಕಾರಣಕ್ಕಾಗಿ ಲಾಕ್‌ಡೌನ್‌ ಮಾಡುವ ಬಗ್ಗೆ ಸರ್ಕಾರ ಪುನರ್‌ ಪರಿಶೀಲಿಸಬೇಕು. ಒಂದೊಮ್ಮೆ ಲಾಕ್‌ಡೌನ್ ಮಾಡುವುದೇ ಅನಿವಾರ್ಯವಾದರೆ ಕಾರ್ಮಿಕರು, ರೈತರು ಸೇರಿದಂತೆ ಎಲ್ಲ ಬಗೆಯ ದುಡಿಯುವ ಜನತೆಗೆ ಸೂಕ್ತ ಪರಿಹಾರ ಪ್ಯಾಕೇಜ್ ಘೋಷಿಸಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಳೆದ ಬಾರಿ ಲಾಕ್‌ಡೌನ್‌ ಘೋಷಣೆ ಮಾಡಿದ ಸಂದರ್ಭದಲ್ಲೂ ಸರ್ಕಾರ ಸೂಕ್ತ ಪ್ಯಾಕೇಜನ್ನು ಜನರಿಗೆ ತಲುಪಿಸಿಲ್ಲ. ಕಟ್ಟಡ ಕಾರ್ಮಿಕರಿಗೆ ಅವರ ನಿಧಿಯಿಂದಲೇ ನೆರವು ಕೊಟ್ಟಿದೆಯೇ ಹೊರತು ತನ್ನ ಬೊಕ್ಕಸದಿಂದ ಕೊಡಲಿಲ್ಲ. ಆ ನಿಧಿಯೂ ಕಾರ್ಮಿಕರಿಗೆ ದೊರಕಿಲ್ಲ. ಹೀಗಾಗದಂತೆ ಎಚ್ಚರ ವಹಿಸಬೇಕು’ ಎಂದರು.

‘ಈಗಲೂ ದಿಢೀರ್‌ ಎಂದು ಲಾಕ್‌ಡೌನ್‌ ಮಾಡಿದರೆ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಜನರು ವಸ್ತುಗಳ ಖರೀದಿಗೆ ಹೆಚ್ಚು ಆಸಕ್ತಿ ವಹಿಸುವುದಿಲ್ಲ. ಇದರಿಂದ ಉತ್ಪಾದನೆ ಕಡಿಮೆಯಾಗಲಿದ್ದು, ಇದರಿಂದ ಸರ್ಕಾರಕ್ಕೆ ಬರಬೇಕಾದ ತೆರಿಗೆಯೂ ಕಡಿಮೆಯಾಗಲಿದೆ. ಹಣದುಬ್ಬರ ಪ್ರಮಾಣವೂ ಹೆಚ್ಚಾಗಲಿದೆ. ಆದ್ದರಿಂದ ಎಲ್ಲವನ್ನು ಪರಾಮರ್ಶೆ ಮಾಡಿ ನಿರ್ಧಾರ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಕೇಂದ್ರ ಸರ್ಕಾರ ಕೋವಿಡ್‌ನಿಂದ ಸತ್ತವರ ಲೆಕ್ಕವನ್ನು ಸರಿಯಾಗಿ ಕೊಟ್ಟಿಲ್ಲ. ದೇಶದಲ್ಲಿ 5.86 ಲಕ್ಷ ಗ್ರಾಮಗಳಿದ್ದು, ಗ್ರಾಮಗಳನ್ನು ಹೊರತುಪಡಿಸಿ ನಗರಗಳು, ಮಹಾನಗರಗಳೂ ಇವೆ. ಒಂದು ಗ್ರಾಮಕ್ಕೆ ಇಬ್ಬರು ಕೋವಿಡ್‌ನಿಂದ ತೀರಿಕೊಂಡಿದ್ದರೂ ಒಟ್ಟು ಮೃತರ ಸಂಖ್ಯೆ 11 ಲಕ್ಷ ದಾಟಲಿದೆ. ಚುನಾವಣೆ ಸಮೀಪಿಸಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಮೇಲಿಂದ ಮೇಲೆ ಉತ್ತರ ಪ್ರದೇಶಕ್ಕೆ ಭೇಟಿ ನೀಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದಾರೆ. ಆ ರಾಜ್ಯದಲ್ಲಿಯೇ ಕೆಲ ದಿನಗಳ ಹಿಂದೆ ಹೆಣ ಸುಡಲು ಕಟ್ಟಿಗೆ ಸಿಕ್ಕಿರಲಿಲ್ಲ, ಹೂಳಲು ನೆಲ ಸಿಕ್ಕಿರಲಿಲ್ಲ. ಜನರು ಇದನ್ನು ಮರೆಯುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.