ADVERTISEMENT

51 ತೊಲ ಬಂಗಾರ, ₹10 ಲಕ್ಷ ವರದಕ್ಷಿಣೆ ಕೊಟ್ಟರೂ ಮತ್ತೊಂದು ಮದುವೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 7:14 IST
Last Updated 18 ಜನವರಿ 2026, 7:14 IST

ಕಲಬುರಗಿ: 51 ತೊಲ ಬಂಗಾರ, ₹10 ಲಕ್ಷ ವರದಕ್ಷಿಣೆ ಕೊಟ್ಟು ಮದುವೆ ಮಾಡಿದರೂ ಅಳಿಯ ಮತ್ತೊಂದು ಮದುವೆಯಾಗಿರುವ ಕುರಿತು ಆರ್‌.ಜಿ.ನಗರ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಈ ಕುರಿತು ಅಳಿಯನ ವಿರುದ್ಧ ಪ್ರಕರಣ ದಾಖಲಿಸಿರುವ ಶಿಕ್ಷಕಿ, ‘ನನ್ನ ಮೂರನೇ ಮಗಳನ್ನು 2023ರಲ್ಲಿ ಸಂದೇಶ ಎಂಬುವವರಿಗೆ 51 ತೊಲ ಬಂಗಾರ, ₹10 ಲಕ್ಷ ಕೊಟ್ಟು ನಮ್ಮ ಧಾರ್ಮಿಕ ಪದ್ಧತಿಯಂತೆ ಮದುವೆ ಮಾಡಿಕೊಡಲಾಗಿತ್ತು. ಒಂದು ತಿಂಗಳು ಮಗಳನ್ನು ಚೆನ್ನಾಗಿ ನೋಡಿಕೊಂಡ ಅಳಿಯ, ನಂತರದ ದಿನಗಳಲ್ಲಿ ಕಿರಿಕಿರಿ ಮಾಡುತ್ತಿದ್ದ. ಇದರಿಂದ ಮಗಳು ತವರುಮನೆಗೆ ಬಂದು ಉಳಿದುಕೊಂಡಿದ್ದಳು’ ಎಂದು ತಿಳಿಸಿದ್ದಾರೆ.

‘ತವರುಮನೆಯಲ್ಲಿದ್ದರೂ ಜಗಳ ಮುಂದುವರಿಸಿದ್ದರಿಂದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಸದರಿ ಪ್ರಕರಣವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುತ್ತದೆ. ಅದಕ್ಕಾಗಿ ನನಗೆ ಮತ್ತು ಮಗಳಿಗೆ ಹೆದರಿಸುತ್ತಾ ಬಂದಿದ್ದಾನೆ. ಅಲ್ಲದೇ, 2–3 ತಿಂಗಳ ಹಿಂದೆ ಇನ್ನೊಬ್ಬ ಮಹಿಳೆಯೊಂದಿಗೆ ಮದುವೆಯಾಗಿರುತ್ತಾನೆ. ಜ.15ರಂದು ಸಂಕ್ರಾಂತಿ ನಿಮಿತ್ತ ಶರಣಬಸವೇಶ್ವರ ದೇವಸ್ಥಾನಕ್ಕೆ ಹೋದಾಗ ಅದೇ ದೇವಸ್ಥಾನಕ್ಕೆ ಕುಟುಂಬಸ್ಥರು ಮತ್ತು ಎರಡನೇ ಪತ್ನಿಯೊಂದಿಗೆ ಬಂದ ಅಳಿಯ ನನ್ನ ಮೊಬೈಲ್‌ ಒಡೆದುಹಾಕಿ ಹಲ್ಲೆ ನಡೆಸಿದ್ದಾರೆ. ಜೊತೆಗೆ ಕೇಸ್‌ ವಾಪಸ್‌ ತೆಗೆದುಕೊಳ್ಳದಿದ್ದರೆ ಖಲಾಸ್‌ ಮಾಡುವುದಾಗಿ ಜೀವಬೆದರಿಕೆ ಹಾಕಿದ್ದಾರೆ’ ಎಂದು ದೂರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.