ADVERTISEMENT

ಕಲಬುರ್ಗಿ: ಯುನೈಟೆಡ್‌ನಲ್ಲಿ ಅರ್ಧಗಂಟೆಯಲ್ಲಿ ಕೊರೊನಾ ಫಲಿತಾಂಶ

ಕೊರೊನಾ ವಾರಿಯರ್ಸ್‌ಗಳಿಗೆ ಅನುಕೂಲ; ರ್‍ಯಾಪಿಡ್‌ ಆಂಟಿಜೆನ್ ‍ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 14:15 IST
Last Updated 15 ಜುಲೈ 2020, 14:15 IST
ಡಾ.ವಿಕ್ರಮ ಸಿದ್ದಾರೆಡ್ಡಿ
ಡಾ.ವಿಕ್ರಮ ಸಿದ್ದಾರೆಡ್ಡಿ   

ಕಲಬುರ್ಗಿ: ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಪ್ರಯೋಗಾಲಯ ಆರಂಭಿಸಿದ ಮೊದಲ ಖಾಸಗಿ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿರುವ ಇಲ್ಲಿನ ಯುನೈಟೆಡ್ ಆಸ್ಪತ್ರೆಯು ಇದೀಗ ‘ರ‍್ಯಾಪಿಡ್‌ ಆಂಟಿಜೆನ್’‌ ತಪಾಸಣಾ ಕಿಟ್‌ ಮೂಲಕ ಪರೀಕ್ಷೆ ಆರಂಭಿಸಿದ್ದು, ಗಂಟಲು ದ್ರವ ಪಡೆದ ಅರ್ಧಗಂಟೆಯಲ್ಲೇ ಕೊರೊನಾ ಪಾಸಿಟಿವೆ ಇದೆಯೋ ಇಲ್ಲವೋ ಎಂಬುದು ತಿಳಿಯಲಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ ಸಿದ್ದಾರೆಡ್ಡಿ ತಿಳಿಸಿದರು.

ಆಸ್ಪತ್ರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಕಿಟ್‌ನಿಂದ ಪರೀಕ್ಷೆ ಮಾಡಿದ ಬಳಿಕ ಪಾಸಿಟಿವ್ ಬಂದ ವ್ಯಕ್ತಿಗೆ ಮತ್ತೊಮ್ಮೆ ಆರ್‌ಟಿಪಿಸಿಆರ್‌ ತಪಾಸಣೆಗೆ ಒಳಗಾಗುವ ಅಗತ್ಯವಿಲ್ಲ. ಕೊರೊನಾ ವೈರಾಣು ಇರುವ ಮಾಹಿತಿ ತಕ್ಷಣವೇ ದೊರೆಯುತ್ತದೆ. ಇದರಿಂದಾಗಿ ತಕ್ಷಣ ಆ ವ್ಯಕ್ತಿಯನ್ನು ಐಸೋಲೇಶನ್‌ ವಾರ್ಡ್‌ಗೆ ದಾಖಲಿಸಬಹುದು. ಈ ಆಂಟಿಜೆನ್ ಕಿಟ್‌ ಬಳಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಅನುಮೋದನೆ ನೀಡಿದ್ದು, ದಕ್ಷಿಣ ಕೊರಿಯಾ ತಂತ್ರಜ್ಞಾನವಿರುವ ಈ ಕಿಟ್‌ ಅನ್ನು ಭಾರತದಲ್ಲಿ ‘ಎಸ್‌ಡಿ ಬಯೊಸೆನ್ಸರ್ಸ್‌’ ಸಂಸ್ಥೆ ಉತ್ಪಾದಿಸುತ್ತಿದೆ’ ಎಂದು ಹೇಳಿದರು.

ಈ ಪರೀಕ್ಷೆಗೆ ₹ 2000 ವೆಚ್ಚವಾಗಲಿದ್ದು, ಗಂಟಲು ದ್ರವದ ಮಾದರಿ ತೆಗೆದುಕೊಳ್ಳುವಾಗ ವೈದ್ಯಕೀಯ ಸಿಬ್ಬಂದಿ ಕಡ್ಡಾಯವಾಗಿ ಪಿಪಿಇ ಕಿಟ್‌ ಧರಿಸಲೇಬೇಕಾಗುತ್ತದೆ. ಆ ಕಿಟ್‌ ವೆಚ್ಚ ಸೇರಿದಂತೆ ಒಟ್ಟು ₹ 3 ಸಾವಿರ ಶುಲ್ಕ ನಿಗದಿಪಡಿಸಲಾಗಿದೆ. ಗುರುವಾರದಿಂದಲೇ (ಜು 16) ಈ ಕಿಟ್‌ ಬಳಸಿ ಕೊರೊನಾ ಶಂಕಿತರ ತಪಾಸಣೆ ನಡೆಸಲಿದ್ದೇವೆ. ಈ ಕ್ರಮಕ್ಕೆ ಜಿಲ್ಲಾಧಿಕಾರಿ ಶರತ್ ಬಿ. ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಜಿಮ್ಸ್‌ನಲ್ಲಿಯೂ ಈ ಕಿಟ್‌ ಬಳಸಲು ಮುಂದಾಗಿದ್ದಾರೆ ಎಂದರು.

ADVERTISEMENT

ಆಂಟಿಜೆನ್ ಬಳಸಿ ತಪಾಸಣೆ ಮಾಡಿ ಪಾಸಿಟಿವ್ ಬಂದರೆ ಮತ್ತೊಮ್ಮೆ ಆರ್‌ಟಿಪಿಸಿಆರ್‌ ಮಾಡುವ ಅಗತ್ಯವಿಲ್ಲ. ಆದರೆ, ನೆಗೆಟಿವ್ ಬಂದರೆ ಮತ್ತೊಮ್ಮೆ ಸಾಂಪ್ರದಾಯಿಕವಾಗಿ ಆರ್‌ಟಿಪಿಸಿಆರ್‌ ಪರೀಕ್ಷೆಗೊಳಗಾಗುವುದು ಉತ್ತಮ ಎಂದು ಐಸಿಎಂಆರ್‌ ಸಲಹೆ ನೀಡಿದೆ ಎಂದು ತಿಳಿಸಿದರು.

ಈಗಾಗಲೇ ಇರುವ ಕೊರೊನಾ ಲ್ಯಾಬ್‌ಗೆ ನಿತ್ಯ 30ರಿಂದ 40 ಜನರು ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಜಿಲ್ಲಾ ಆರೋಗ್ಯ ಇಲಾಖೆಯೂ ನಿತ್ಯ 100 ಗಂಟಲು ದ್ರವದ ಮಾದರಿಯನ್ನು ನಮಗೆ ಕಳಿಸಿಕೊಡುತ್ತಿದೆ. ಪ್ರಸ್ತುತ ನಿತ್ಯ 200 ಜನರಿಗೆ ತಪಾಸಣೆ ಮಾಡುವ ಸಾಮರ್ಥ್ಯವಿದೆ. ಆದರೆ, ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿರುವುದರಿಂದ ಜುಲೈ 18ರಿಂದ ತಪಾಸಣಾ ಸಾಮರ್ಥ್ಯವನ್ನು 500ಕ್ಕೆ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.

ಪ್ಯಾಥಾಲಾಜಿ ವಿಭಾಗದ ಮುಖ್ಯಸ್ಥೆ ಡಾ. ಆಯೇಷಾ ಫಾತಿಮಾ ಬಷೀರ್‌ ಮಾತನಾಡಿ, ‘ಕೊರೊನಾ ಸೋಂಕನ್ನು ನಿಯಂತ್ರಿಸಲು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ನರ್ಸ್‌ಗಳು, ಆಶಾ ಕಾರ್ಯಕರ್ತೆಯರು, ಪೊಲೀಸರಿಗೆ ಈ ಕಿಟ್‌ಗಳ ಬಳಕೆಯಿಂದ ತಕ್ಷಣಕ್ಕೆ ಸೋಂಕು ಇದೆಯೋ ಇಲ್ಲವೋ ಎಂಬುದನ್ನು ತಿಳಿಸಬಹುದು. 15ರಿಂದ 30 ನಿಮಿಷಗಳಲ್ಲೇ ಫಲಿತಾಂಶ ದೊರೆಯುವುದರಿಂದ ಸೋಂಕಿತರನ್ನು ಪ್ರತ್ಯೇಕವಾಗಿರಿಸಲು ಸಹಾಯವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.