
ಚಿಂಚೋಳಿ: ಇಲ್ಲೊಬ್ಬ ಯುವ ರೈತ ಅಡಿಕೆ ಬೇಸಾಯ ಮಾಡುವ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದು, ಈ ಬೆಳೆ ಯಶಸ್ವಿಯಾದರೆ ಕಲ್ಯಾಣ ಕರ್ನಾಟಕದ ಮಲೆನಾಡಾಗಿ ಚಿಂಚೋಳಿ ಗಮನ ಸೆಳೆಯುವುದರಲ್ಲಿ ಎರಡು ಮಾತಿಲ್ಲ.
ತಾಲ್ಲೂಕಿನ ಚಿಮ್ಮನಚೋಡ ಬಳಿಯ ನೆಲಗಂಗಿ ತಾಂಡಾದ ರವಿಕುಮಾರ ಮೋತಿರಾಮ ನಾಯಕ ತಮ್ಮ ಜಮೀನಿನಲ್ಲಿ ಒಂದೂವರೆ ವರ್ಷದ ಹಿಂದೆ ಅಡಿಕೆ ಸಸಿ ತಂದು ನೆಟ್ಟಿದ್ದು ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿರುವ ಸಸಿಗಳು ಹುಲುಸಾಗಿ ಬೆಳೆಯುತ್ತಿವೆ.
ಅಡಿಕೆ ಸಸಿ ಬೆಳೆದು ದೊಡ್ಡದಾಗುವುದರ ಜತೆಗೆ 14 ರಿಂಗ್ ಗೋಚರಿಸಿದಾಗ ಮಾತ್ರ ಅವು ಫಲ ಬಿಡಲು ಆರಂಭಿಸುತ್ತವೆ. ಉತ್ತಮವಾಗಿ ಬೆಳೆಯುತ್ತಿರುವುದರಿಂದ ರೈತ ರವಿಕುಮಾರ ಖುಷಿಯಿಂದ ಬೆಳೆಯ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಇಲ್ಲಿವರೆಗೆ ರೈತ ಸುಮಾರು 5 ಲಕ್ಷ ಖರ್ಚು ಮಾಡಿದ್ದಾರೆ. ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅಡಿಕೆ ಬೇಸಾಯಕ್ಕೆ ನೆರವು ನೀಡಿದ್ದಾರೆ, ಅಡಿಕೆಗೆ ನಮ್ಮ ತಾಲ್ಲೂಕಿನಲ್ಲಿ ಪೂರಕ ವಾತಾವರಣವಿದೆ ಬೇಸಾಯ ಮಾಡಬಹುದೆಂದು ನಿರ್ಧರಿಸಿ ಮಂಗಲಾ ಹೈಬ್ರಿಡ್ ತಳಿಯ ಸಸಿ ತಂದು ನೆಟ್ಟು ಪೋಷಣೆಯಲ್ಲಿ ತೊಡಗಿದ್ದಾರೆ.
ಇಲಾಖೆಯ ಜತೆಗೆ ತಮ್ಮ ಶಿಕಾರಿಪುರದವರು ಮಾರ್ಗದರ್ಶನ ಮಾಡುತ್ತಿರುವುದರಿಂದ ಯಾವ ಸಮಸ್ಯೆಯೂ ಎದುರಾಗಿಲ್ಲ. 3 ಎಕರೆ ಬೇಸಾಯಕ್ಕೆ ನೀರು ಪೂರೈಸಲು ಕೊಳವೆ ಬಾವಿ ಮತ್ತು ಹನಿ ನೀರಾವರಿ ವ್ಯವಸ್ಥೆ ಅಳವಡಿಸಿಕೊಂಡಿದ್ದಾರೆ. ತಮ್ಮ ಹೊಲದಲ್ಲಿ 1300 ಅಡಿಕೆ ಸಸಿಗಳು 300 ಮಾವು ಸಸಿ ನೆಟ್ಟು ಪೋಷಿಸುತ್ತಿದ್ದಾರೆ ರವಿಕುಮಾರ.
ತಾಲ್ಲೂಕಿನಲ್ಲಿ ಫಲವತ್ತಾದ ಭೂಮಿ, ಯಥೇಚ್ಚ ಜಲ ಸಂಪನ್ಮೂಲ ಹಾಗೂ ಪೂರಕ ವಾತಾವರಣದಿಂದ ರೈತರು ಅಡಿಕೆ ಸೇರಿದಂತೆ ವಿವಿಧ ವಾಣಿಜ್ಯ ಬೆಳೆ ಬೆಳೆಯಬಹುದಾಗಿದೆರಾಜಕುಮಾರ ಗೋವಿನ್, ತೋಟಗಾರಿಕೆ ಹಿರಿಯ ಸಹಾಯಕ ನಿರ್ದೆಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.