ADVERTISEMENT

ಸೇಡಂ | ಪದವಿ ಶಿಕ್ಷಣಕ್ಕಿಂತ ಅರಿವಿನ ಶಿಕ್ಷಣ ಹಿರಿದು: ಸಾಹಿತಿ ಅಮರೇಶ ನುಗಡೋಣಿ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 6:39 IST
Last Updated 22 ಡಿಸೆಂಬರ್ 2025, 6:39 IST
ಸೇಡಂ ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ನೃಪತುಂಘ ಅಧ್ಯಯನ ಸಂಸ್ಥೆಯ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಅಮರೇಶ ನುಗಡೋಣಿ ಮಾತನಾಡಿದರು
ಸೇಡಂ ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ನಡೆದ ನೃಪತುಂಘ ಅಧ್ಯಯನ ಸಂಸ್ಥೆಯ ಕಾರ್ಯಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸಾಹಿತಿ ಅಮರೇಶ ನುಗಡೋಣಿ ಮಾತನಾಡಿದರು   

ಸೇಡಂ: ‘ಅಕ್ಷರ‌ ಕಲಿಯದ ವಚನಕಾರರು‌‌ ವಚನಗಳನ್ನು, ‌ತತ್ವಪದಕಾರರು‌ ತತ್ವಪದಗಳನ್ನು‌ ಬರೆದು ಸಾಮಾಜಿಕ‌ ಪರಿವರ್ತನೆಗೆ ನಾಂದಿ ಹಾಡಿದರು. ಆದರೆ, ಇಂದು ಪದವಿ ಶಿಕ್ಷಣ ಪಡೆದವರಿಂದ ಸರಿಯಾಗಿ ನಾಲ್ಕು ಸಾಲು ಬರೆಯಲು ಸಾಧ್ಯವಾಗುತ್ತಿಲ್ಲ. ಪದವಿ ಶಿಕ್ಷಣಕ್ಕಿಂತ ಅರಿವಿನ ಶಿಕ್ಷಣ ಹಿರಿದಾಗಿದೆ’ ಎಂದು ಹಂಪಿ‌ ಕನ್ನಡದ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಅಮರೇಶ ನುಗಡೋಣಿ‌‌‌ ಅಭಿಪ್ರಾಯಪಟ್ಟರು.

ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ‌‌ ಮಂಟಪದಲ್ಲಿ ಭಾನುವಾರ ನಡೆದ ನೃಪತುಂಗ ಅಧ್ಯಯನ ಸಂಸ್ಥೆಯ ನೂತನ ಪದಾಧಿಕಾರಿಗಳ ಪರಿಚಯ ಹಾಗೂ ಕಾರ್ಯಚಟುವಟಿಕೆಗಳ ಉದ್ಘಾಟನೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕಥೆ, ಕಾದಂಬರಿ‌ ಬರೆಯಲು ಕಲ್ಯಾಣ ಕರ್ನಾಟಕ‌ ಭಾಗ ಸಮೃದ್ಧ‌ ಪರಿಸರವನ್ನೊಳಗೊಂಡ ನೆಲ. ಆದರೆ, ನಮ್ಮಲ್ಲಿ ಸಾಹಿತಿಗಳು ಸಂಘಟನೆಗಳ ಪದಾಧಿಕಾರಿ ಹುದ್ದೆಗಳಿಗಾಗಿ ರಾಜಕೀಯ ನಾಯಕರ ದುಂಬಾಲು ಬೀಳುತ್ತಾ, ರಾಜಕೀಯ ಮಾಡುತ್ತಾ ಬೆಂಗಳೂರು ಅಲೆದಾಡುತ್ತಿದ್ದೇವೆ. ನಮ್ಮಲ್ಲಿ ನೋಡುವ ಮತ್ತು ಬರೆಯುವ ಆಲೋಚನೆಗಳಲ್ಲಿ ಬದಲಾವಣೆ ಕಂಡುಕೊಳ್ಳಬೇಕಿದೆ’ ಎಂಬ ಆಶಯ ವ್ಯಕ್ತಪಡಿಸಿದರು.

ADVERTISEMENT

ನಿವೃತ್ತ ಪ್ರಾಧ್ಯಾಪಕ ಕಲ್ಯಾಣರಾವ ಪಾಟೀಲ ಮಾತನಾಡಿ, ಶಿಕ್ಷಣ ಕಲಿಯುವ ವಿದ್ಯಾರ್ಥಿಗಳಲ್ಲಿ ಕಲಿಕೆಯ ಆಸಕ್ತಿ ಕಮ್ಮಿಯಾಗುತ್ತಿದ್ದು, ಮೊಬೈಲ್ ತಂತ್ರಜ್ಞಾನದತ್ತ ಮೊರೆ ಹೋಗುತ್ತಿದ್ದಾರೆ. ತಮ್ಮ ಅಮೂಲ್ಯ ಸಮಯ ವ್ಯರ್ಥಮಾಡಿಕೊಳ್ಳುತ್ತಿದ್ದು, ಸಾಧನೆಯ ದಾರಿಯಿಂದ ವಿಮುಖರಾಗುತ್ತಿರುವುದು ಆತಂಕಕಾರಿ ಸಂಗತಿ ಎಂದರು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ ಆಶೀರ್ವಚನ ನೀಡಿದರು. ನೃಪತುಂಗ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಜಗದೀಶ ಕಡಬಗಾಂವ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಆರತಿ ಕಡಗಂಚಿ ನಿರೂಪಿಸಿದರು. ಜಗನ್ನಾಥ ತರನಳ್ಳಿ ಪದಾಧಿಕಾರಿಗಳ ಪರಿಚಯಿಸಿದರು. ಅವಿನಾಶ ಬೋರಂಚಿ‌ ವಂದಿಸಿದರು.

ಸಂಸ್ಥೆಯ ನೂತನ ಪದಾಧಿಕಾರಿಗಳು

ನೃತಪ ಅಧ್ಯಯನ ಸಂಸ್ಥೆಯ ನೂತನ ಪದಾಧಿಕಾರಿಗಳಾಗಿ ಬಸವರಾಜ ಪಾಟೀಲ ಸೇಡಂ(ಸಂರಕ್ಷಕರು) ಪ್ರಭಾಕರ ಜೋಶಿ(ಗೌರವ ಅಧ್ಯಕ್ಷ) ಸಿದ್ದಪ್ಪ ತಳ್ಳಳ್ಳಿ ಶಿವಯ್ಯಸ್ವಾಮಿ ಬಿಬ್ಬಳ್ಳಿ ಡಾ.ಎಂ.ಜಿ.ದೇಶಪಾಂಡೆ ಲಿಂಗಾರೆಡ್ಡಿ ಶೇರಿ ಮಹಿಪಾಲರೆಡ್ಡಿ ಮುನ್ನೂರ(ಗೌರವ ಸಲಹೆಗಾರರು) ಜಗದೀಶ ಕಡಬಗಾಂವ(ಅಧ್ಯಕ್ಷ) ಡಾ.ಬಿ.ಆರ್.ಅಣ್ಣಾಸಾಗರ ಶರಣಗೌಡ ಪಾಟೀಲ(ಉಪಾಧ್ಯಕ್ಷ) ಜಗನ್ನಾಥ ತರನಳ್ಳಿ(ಪ್ರಧಾನ ಕಾರ್ಯದರ್ಶಿ) ಅವಿನಾಶ ಬೋರಂಚಿ ಆರತಿ ಕಡಗಂಚಿ(ಕಾರ್ಯದರ್ಶಿ) ಚನ್ನಬಸ್ಸಪ್ಪ ಗವಿ(ಕೋಶಾಧ್ಯಕ್ಷ) ಸುವರ್ಣ ಅಳ್ಳೊಳ್ಳಿ ಅಮರಮ್ಮ ಪಾಟೀಲ ಪ್ರಮೀಳ ಪಾಟೀಲ ಬಿಬ್ಬಳ್ಳಿ ಸುಧೀರ ಬಿರಾದಾರ ವೀರಭದ್ರಪ್ಪ ಟೆಂಗಳಿ ಶರಣು ಮಹಾಗಾಂವ(ಕಾರ್ಯಕಾರಿಣಿ ಸದಸ್ಯರು) ಜನಾರ್ಧನರೆಡ್ಡಿ ತುಳೇರ(ಮಾಧ್ಯಮ ಪ್ರತಿನಿಧಿ) ನೇಮಕ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.