ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಕಾಂಗ್ರೆಸ್‌ನ ’ಆರೋಗ್ಯ ಹಸ್ತ‘

ರಾಜ್ಯದ ಎಲ್ಲ ಗ್ರಾಮ, ನಗರಗಳಲ್ಲೂ ನಾಳೆಯಿಂದ ಆಂದೋಲನ, 15 ಸಾವಿರ ಕಾರ್ಯಕರ್ತರು ಸಜ್ಜು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 12:11 IST
Last Updated 15 ಆಗಸ್ಟ್ 2020, 12:11 IST

ಕಲಬುರ್ಗಿ: ’‌ರಾಜ್ಯದಲ್ಲಿ ಕೋವಿಡ್‌ ಸೋಂಕು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಕಾಂಗ್ರೆಸ್‌ ಪಕ್ಷದಿಂದ ’ಆರೋಗ್ಯ ಹಸ್ತ‘ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆ. 17ರಿಂದ ಇದು ಕಾರ್ಯಾರಂಭ ಮಾಡಲಿದ್ದು, ಸೋಂಕು ಹತೋಟಿಗೆ ಸರ್ಕಾರದೊಂದಿಗೆ ಕೈ ಜೋಡಿಸಲಾಗುವುದು‘ ಎಂದು ವಿಧಾನ ಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯಸಿಂಗ್‌ ಹೇಳಿದರು.

’ರಾಜ್ಯದ 7,400 ಗ್ರಾಮ‌ ಪಂಚಾಯಿತಿ ಮತ್ತು ನಗರ– ಪಟ್ಟಣದ ವಾರ್ಡ್‌ಗಳಲ್ಲಿ ಈ ಅಭಿಯಾನ ನಡೆಯಲಿದೆ. ಪ್ರತಿ ಪಂಚಾಯಿತಿ ಹಾಗೂ ವಾರ್ಡ್‌ನಲ್ಲಿ ತಲಾ ಇಬ್ಬರು ‌ ಕಾರ್ಯಕರ್ತರನ್ನು ’ಕಾಂಗ್ರೆಸ್‌ ಕೊರೊನಾ ವಾರಿಯರ್ಸ್‌‘ ಎಂದು ನೇಮಕ ಮಾಡಲಾಗಿದೆ. ಈ ವಾರಿಯರ್ಸ್‌ ಮನೆ–ಮನೆಗೆ ತೆರಳಿ ಜನರ ಆರೋಗ್ಯದ ಮಾಹಿತಿ ಪ‍ಡೆಯುತ್ತಾರೆ. ಲಕ್ಷಣಗಳು ಕಂಡುಬಂದರೆ ಅಂಥವರ ಬಗ್ಗೆ ಆಯಾ ತಾಲ್ಲೂಕು ಆರೋಗ್ಯ ಇಲಾಖೆಗೆ ವರದಿ ನೀಡುತ್ತಾರೆ. ಸೋಂಕಿತರು ಅಪಾಯಕ್ಕೆ ಸಿಲುಕುವ ಮುನ್ನವೇ ಗುರುತಿಸುವ ಉದ್ದೇಶ ನಮ್ಮದು‘ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

’ಕಾಂಗ್ರೆಸ್‌ ಕೊರೊನಾ ವಾರಿಯರ್ಸ್‌ಗೆ ತಲಾ ಒಂದು ಕಿಟ್‌ ನೀಡಲಾಗಿದೆ. ಅದರಲ್ಲಿ ಥರ್ಮಲ್ ಸ್ಕ್ರೀನಿಂಗ್ ಗನ್, ಆಕ್ಸಿಮೀಟರ್‌, ಸ್ಯಾನಿಟೈಜರ್, ಮಾಸ್ಕ್‌, ಗೌನ್‌, ಫೇಸ್‌ಗಾರ್ಡ್ ಸೇರಿದಂತೆ ಅಗತ್ಯ ಸುರಕ್ಷಾ ಪರಿಕರಗಳು ಇವೆ. ಈಗಾಗಲೇ ವಾರಿಯರ್ಸ್‌ಗಳಿಗೆ ತರಬೇತಿ ಕೂಡ ನೀಡಲಾಗುತ್ತಿದೆ. ಈ ಆಂದೋಲನವನ್ನು ಅತ್ಯಂತ ಪ್ರಾಮಾಣಿಕವಾಗಿ ನೆರವೇರಿಸಿ, ಕೋವಿಡ್ ನಿಯಂತ್ರಣಕ್ಕೆ ನಮ್ಮ ಪಾಲು ನೀಡುತ್ತೇವೆ‘ ಎಂದು ’ಆರೋಗ್ಯ ಹಸ್ತ‘ದ ನಿರ್ವಹಣಾ ಸಮಿತಿ ಸಂಚಾಲಕರೂ ಆಗಿರುವ ಡಾ.ಅಜಯಸಿಂಗ್‌ ಹೇಳಿದರು.

ADVERTISEMENT

’ಇದೊಂದು ವಿನೂತನ ಯತ್ನ. ನಾಗರಿಕರು ಈ ಅಭಿಯಾನಕ್ಕೆ ಸ್ಪಂದಿಸುವ ವಿಶ್ವಾಸ ಇದೆ. ಅಭಿಯಾನಕ್ಕೆ ರಾಜ್ಯದಾದ್ಯಂತ 15 ಸಾವಿರ ಯುವಕರನ್ನು ಗುರುತಿಸಲಾಗಿದೆ. ಇವರೆಲ್ಲ 40 ವರ್ಷದೊಳಗಿನವರೇ ಇದ್ದಾರೆ. ಅವರಿಗೆ ಕೆಪಿಸಿಸಿ ವತಿಯಿಂದ ₹ 1 ಲಕ್ಷ ವಿಮೆ ಮಾಡಿಸಲಾಗಿದೆ‘ ಎಂದರು.

’ನಾನೂ ಸೇರಿದಂತೆ ಹಲವು ಶಾಸಕರು, ಸಚಿವರು, ಮುಖ್ಯಮಂತ್ರಿಗಳು ಕೂಡ ಕೋವಿಡ್‌ ಅಂಟಿಸಿಕೊಂಡಿದ್ದೇವೆ. ಆದರೆ, ಎಲ್ಲರೂ ಗುಣಮುಖರಾಗಿ ಮರಳಿದ್ದೇವೆ. ಸೋಂಕು ಬಂದ ಕಾರಣಕ್ಕೆ ಯಾರೂ ಭಯ ಪಡಬೇಕಿಲ್ಲ. ಸುಲಭವಾಗಿ ಇದರಿಂದ ಗುಣಮುಖರಾಗಬಹುದು. ಆದರೆ, ಲಕ್ಷಣಗಳು ತೀವ್ರ ಸ್ವರೂಪಕ್ಕೆ ಹೋಗುವವರೆಗೂ ಕಾಯಬೇಡಿ. ಮುಂಚಿತವಾಗಿಯೇ ತಪಾಸಣೆ ಮಾಡಿಸಿಕೊಳ್ಳಿ. ಇದರಿಂದ ಸಾವಿನ ಪ್ರಮಾಣ ತಗ್ಗಿಸಬಹುದು. ಈ ಉದ್ದೇಶದಿಂದ ಕಾಂಗ್ರೆಸ್‌ ಆಂದೋಲನ ಆರಂಭಿಸಿದೆ ಹೊರತು; ಇದರಲ್ಲಿ ರಾಜಕೀಯ ಉದ್ದೇಶವೇನೂ ಇಲ್ಲ‘ ಎಂದರು.

ನಂಬರ್‌ ಒನ್‌ ಆಗುತ್ತ ಸಾಗಿದ ಭಾರತ: ’ಕೋವಿಡ್‌ ಪೀಡಿತ ದೇಶಗಳಲ್ಲಿ ವಿಶ್ವದಲ್ಲಿ ಈಗ ಅಮೆರಿಕಿ ಮೊದಲ ಸ್ಥಾನ ಬ್ರೆಜಿಲ್‌ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಭಾರತ ಇನ್ನು ಕೆಲವೇ ದಿನಗಲ್ಲಿ ಮೊದಲ ಸ್ಥಾನಕ್ಕೆ ಬಂದರೂ ಅಚ್ಚರಿಯಿಲ್ಲ‘ ಎಂದು ಅವರು ಬೇಸರ ವ್ಯಕ್ತಪಡಿಸಿದರು

’ದೇಶದಲ್ಲಿ ಈಗ 24 ಲಕ್ಷಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದಾರೆ. ನಿತ್ಯ ಸುಮಾರು 60 ಸಾವಿರ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. ಇದರಲ್ಲಿ ರಾಜ್ಯದ ಪಾಲೇ 6 ಸಾವಿರಕ್ಕೂ‌ ಹೆಚ್ಚು. ಅಂದರೆ, ಶೇ 10ಕ್ಕಿಂತ ಹೆಚ್ಚು ಪಾಲು ನಮ್ಮದೇ ಇದೆ‘ ಎಂದೂ ಅವರು ಕಳವಳ ವ್ಯಕ್ತಪಡಿಸಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಡಾ.ಶರಣಪ್ರಕಾಶ ಪಾಟೀಲ, ಅಲ್ಲಮಪ್ರಭು ಪಾಟೀಲ, ಡಾ.ಕಿರಣ ದೇಶಮುಖ ಇದ್ದರು.

ಕೋವಿಡ್‌ ಅನುದಾನ ಎಲ್ಲಿ ಹೋಯಿತು: ಪ್ರಿಯಾಂಕ್‌ ಪ್ರಶ್ನೆ

’ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ’ಸಹಾಯವಾಣಿ‘ ಕೇಂದ್ರ ಆರಂಭಿಸಿದ್ದು ನಗೆಪಾಟಲಿನ ಸಂಗತಿ. ಹೆಚ್ಚೆಂದರೆ ಇದಕ್ಕೆ ₹ 1 ಲಕ್ಷ ಖರ್ಚಾಗಬಹುದು. ಇದು ಅಷ್ಟು ಅನಿವಾರ್ಯ ಆಗಿದ್ದರೆ ಜಿಲ್ಲಾಡಳಿತ ಇಷ್ಟು ದಿನ ಏಕೆ ಆರಂಭಿಸಲಿಲ್ಲ. ಇವರ ಬಳಿ ₹ 1 ಲಕ್ಷ ಕೂಡ ಇರಲಿಲ್ಲವೇ? ಹಾಗಾದರೆ, ಕೋವಿಡ್ ಅನುದಾನ ಎಲ್ಲಿ ಹೋಯಿತು?‘ ಎಂದು ಶಾಸಕ ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

’ಕೆಕೆಆರ್‌ಡಿಬಿಯಂಥ ದೊಡ್ಡ ಸಂಸ್ಥೆ ಇಟ್ಟುಕೊಂಡು ಒಂದು ಸಣ್ಣ ಸಹಾಯವಾಣಿ ಕೇಂದ್ರ ಆರಂಭಿಸುವುದರಲ್ಲಿ ಏನಾದರೂ ಅರ್ಥವಿದೆಯೇ? ಅದನ್ನು ಬಿಟ್ಟು ಅಗತ್ಯವಿರು ಲ್ಯಾಬ್‌, ಬೆಡ್‌, ವೈದ್ಯಕೀಯ ಸಿಬ್ಬಂದಿ ನೀಡುವಲ್ಲಿ ಗಮನ ಹರಿಸಬೇಕು‘ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

’ಆರೋಗ್ಯ ಹಸ್ತ’ದ ಪ್ರಾಯೋಗಿಕವಾಗಿ ಕಲಬುರ್ಗಿಯಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲೇ ಆ. 17ರಿಂದ ಆರೋಗ್ಯ ತಪಾಸಣೆ ಪ್ರಾರಂಭಿಸಲಾಗುವುದು. ಸಾರ್ವಜನಿಕರು ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯೊಳಗೆ ಕಚೇರಿಗೆ ಬಂದು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬಹುದು. ಇಲ್ಲಿ ವೈದ್ಯರು ಹಾಗೂ ಸ್ಟಾಫ್‌ ನರ್ಸ್‌ ಕೂಡ ಇರುತ್ತಾರೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.