ಕಲಬುರಗಿ ಜಿಲ್ಲೆಯ ಆಳಂದದ ಶಕಾಪುರ ಸೇತುವೆ ಬಳಿಯ ಅಮರ್ಜಾ ನದಿಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ದಾಖಲೆಗಳನ್ನು ಸಿಐಡಿ ಅಧಿಕಾರಿಗಳು ಹಾಗೂ ಪೊಲೀಸರು ಶುಕ್ರವಾರ ರಾತ್ರಿ ಕಲೆಹಾಕಿದರು
ಕಲಬುರಗಿ: ಆಳಂದ ಕ್ಷೇತ್ರದ ಮತದಾರರ ಹೆಸರನ್ನು ಮತಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಲು ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತ ಸುಭಾಷ ಗುತ್ತೇದಾರ ಅವರ ಕಲಬುರಗಿ ನಗರದಲ್ಲಿರುವ ಮನೆ ಮೇಲೆ ಎಸ್‌ಐಟಿ ತಂಡ ದಾಳಿ ನಡೆಸಿದ ಬೆನ್ನಲ್ಲೇ ಅತ್ತ ಆಳಂದದ ರೇವಣಸಿದ್ಧೇಶ್ವರ ಕಾಲೊನಿಯಲ್ಲಿರುವ ಅವರ ಮನೆ ಎದುರು ಅಪಾರ ಪ್ರಮಾಣದ ದಾಖಲೆಗಳಿಗೆ ಬೆಂಕಿ ಹಚ್ಚಿ ಸುಡಲಾಯಿತು.
ಆಳಂದದಲ್ಲಿ ಅರೆ–ಬರೆ ಸುಟ್ಟ ಸ್ಥಿತಿಯಲ್ಲಿ ದಾಖಲೆಗಳು ಪತ್ತೆಯಾದ ಬೆನ್ನಲ್ಲೆ ಸಿಐಡಿ ಎಸ್ಪಿ ಶುಭನ್ವಿತಾ ಹಾಗೂ ಡಿವೈಎಸ್ಪಿ ಅಸ್ಲಂಪಾಶಾ ಸೇರಿದಂತೆ ಅಧಿಕಾರಿಗಳು ಆಳಂದಕ್ಕೆ ದೌಡಾಯಿಸಿದ್ದಾರೆ.
ಶುಭನ್ವಿತಾ ಹಾಗೂ ಅಸ್ಲಂಪಾಶಾ ಅವರು ದಾಖಲೆಗಳನ್ನು ಸುಟ್ಟಿದ್ದ ಆಳಂದದ ರೇವಣ ಸಿದ್ದೇಶ್ವರ ಕಾಲೊನಿಯಲ್ಲಿರುವ ಬಿಜೆಪಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಮತ್ತೊಂದೆಡೆ, ಅರೆಬರೆ ಸುಟ್ಟ ದಾಖಲೆಗಳನ್ನು ಗೂಡ್ಸ್ ವಾಹನದಲ್ಲಿ ತೆಗೆದುಕೊಂಡು ಹೋಗಿ ಶಕಾಪುರ ಸೇತುವೆ ಬಳಿ ಅಮರ್ಜಾ ನದಿಗೆ ಸುರಿಯಲಾಗಿದೆ. ಸಿಐಡಿ ಇನ್‌ಸ್ಪೆಕ್ಟರ್ ಶರಣಗೌಡ ಅವರ ತಂಡವು ನೀರಿನಲ್ಲಿ ಇಳಿದು ನದಿಗೆ ಬಿದ್ದಿರುವ ಅರೆಬರೆ ಸುಟ್ಟ ಸ್ಥಿತಿಯಲ್ಲಿರುವ ದಾಖಲೆಗಳನ್ನು ತಡರಾತ್ರಿ ತನಕ ಸಂಗ್ರಹಿಸಿತು.
ಆಳಂದ ಡಿವೈಎಸ್ಪಿ ತಮ್ಮರಾಯ ಪಾಟೀಲ, ಸಿಪಿಐ ಪ್ರಕಾಶ್ ಯಾತನೂರು ಸೇರಿದಂತೆ ಹಲವರು ಅಧಿಕಾರಿಗಳು–ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.