ADVERTISEMENT

ಇಪಿಎಫ್‌ ನೋಂದಣಿ ಕಡ್ಡಾಯ: ಪ್ರಾದೇಶಿಕ ಆಯುಕ್ತ ಎಂ.ಸುಬ್ರಹ್ಮಣ್ಯಂ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 6:48 IST
Last Updated 17 ಡಿಸೆಂಬರ್ 2025, 6:48 IST
ಕಲಬುರಗಿಯ ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಮುಖರು
ಕಲಬುರಗಿಯ ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಮುಖರು   

ಕಲಬುರಗಿ: ‘20 ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಯಾವುದೇ ಕಾರ್ಖಾನೆ ಅಥವಾ ಸಂಸ್ಥೆ ಕಡ್ಡಾಯವಾಗಿ ಇಪಿಎಫ್ ನೋಂದಣಿ ಮಾಡಿಕೊಳ್ಳಬೇಕು’ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ ಪ್ರಾದೇಶಿಕ ಆಯುಕ್ತ ಎಂ.ಸುಬ್ರಹ್ಮಣ್ಯಂ ತಿಳಿಸಿದರು. 

ಇಲ್ಲಿನ ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆಯ ಕಚೇರಿಯಲ್ಲಿ ಉದ್ಯಮಿಗಳು, ಎಂಎಸ್‌ಎಂಇ ಘಟಕಗಳು, ಉದ್ಯೋಗದಾತರು ಹಾಗೂ ಎಚ್‌ಆರ್ ವೃತ್ತಿಪರರಿಗೆ ಉಪಯುಕ್ತವಾಗುವಂತೆ ಇಪಿಎಫ್, ಇಎಸ್‌ಐಸಿ ಅನುಸರಣೆ, ಕಾರ್ಮಿಕ ಕಾನೂನುಗಳ ಇತ್ತೀಚಿನ ಬದಲಾವಣೆಗಳು, ಸಾಮಾಜಿಕ ಭದ್ರತಾ ಕ್ರಮಗಳ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಮೊದಲ ಬಾರಿಗೆ ಇಪಿಎಫ್‌ಗೆ ನೋಂದಾಯಿತ ಉದ್ಯೋಗಿಗಳಿಗೆ ₹15,000ವರೆಗೆ ಪ್ರೋತ್ಸಾಹ ಧನ ಹಾಗೂ ಹೊಸ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರಿಗೆ ಪ್ರತಿ ಉದ್ಯೋಗಿಗೆ ತಿಂಗಳಿಗೆ ₹3,000ವರೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದರು.

ADVERTISEMENT

ವಿವಿಧ ಕಾರಣಗಳಿಂದ ಇಪಿಎಫ್‌ಗೆ ಸೇರಿಸದ ಉದ್ಯೋಗಿಗಳನ್ನು ಸ್ವಯಂ ಘೋಷಣೆ ಮೂಲಕ ಸೇರಿಸಿಕೊಳ್ಳಲು ಅವಕಾಶವಿದೆ. ಈ ಯೋಜನೆಯಡಿ ಉದ್ಯೋಗದಾತರು ಕೇವಲ ₹100 ನಾಮಮಾತ್ರ ದಂಡವನ್ನು ಪಾವತಿಸಬೇಕಾಗಿರುತ್ತದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಎಂ. ಪಪ್ಪಾ, ‘ಜಾಗೃತಿ ಕಾರ್ಯಕ್ರಮಗಳು ನೀತಿ ಮತ್ತು ಉದ್ಯಮಗಳ ನಡುವಿನ ಅಂತರವನ್ನು ಕಡಿಮೆ ಮಾಡುವಲ್ಲಿ ವಿಶೇಷವಾಗಿ ಎಂಎಸ್‌ಎಂಇ ಕ್ಷೇತ್ರಕ್ಕೆ ಅತ್ಯಂತ ಅಗತ್ಯ. ಮುಂದಿನ ದಿನಗಳಲ್ಲೂ ಇಂಥ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದರು.

ಇಎಸ್‌ಐಸಿ ಜಂಟಿ ನಿರ್ದೇಶಕ ಯುವರಾಜ್ ಎಸ್.ವಿ. ಮಾತನಾಡಿದರು. 

ಕಾರ್ಯಕ್ರಮದಲ್ಲಿ ಲಕ್ಷ್ಮಿಕಾಂತ್ ಮೈಲಾಪುರ, ಆನಂದ್ ದಂಡೋತಿ, ಉತ್ತಮ್ ಬಜಾಜ್, ಬಸವರಾಜ್ ಮಂಗಲಗಿ, ಗಿರೀಶ್ ಅನಕಲ್, ಜಗದೀಶ್ ಗಜ್ರೆ, ಅಭಿಜೀತ್ ಪಡಶೆಟ್ಟಿ, ಆನಂದ್ ಹೊಳಕುಂಡೆ, ವಿಜಯ್ ಗಿಲ್ಡಾ, ರವೀಂದ್ರ ಮುಕ್ಕಾ, ರವೀಂದ್ರ ಮದಂಶೆಟ್ಟಿ, ಪ್ರಕಾಶ್ ಗಿಲ್ಡಾ, ಅಂಬ್ರೀಶ್ ದರ್ಬಿ ಸೇರಿದಂತೆ ಅನೇಕ ಉದ್ಯಮಿಗಳು, ವ್ಯಾಪಾರಿಗಳು ಮತ್ತು ಕೆಕೆಸಿಸಿಐ ಸದಸ್ಯರು ಉಪಸ್ಥಿತರಿದ್ದರು.

ಕೆಕೆಸಿಸಿಐ ಗೌರವ ಕಾರ್ಯದರ್ಶಿ ಶಿವರಾಜ್ ವಿ. ಇಂಗಿನಶೆಟ್ಟಿ ಸ್ವಾಗತಿಸಿದರು. ಸದಸ್ಯ ದಿನೇಶ್ ಪಾಟೀಲ ನಿರೂಪಿಸಿದರು.