ADVERTISEMENT

ಅಫಜಲಪುರ | ಆಯುರ್ವೇದ ಪ್ರಾಚೀನ ವೈದ್ಯ ಪದ್ಧತಿ: ಡಾ.ಶ್ರೀಶೈಲ ಪಾಟೀಲ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 4:21 IST
Last Updated 6 ಫೆಬ್ರುವರಿ 2026, 4:21 IST
ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಮಧುಮೇಹ ನಿಯಂತ್ರಣ ಕುರಿತು ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿತ್ತು
ಅಫಜಲಪುರ ತಾಲ್ಲೂಕಿನ ಬಳೂರ್ಗಿ ಗ್ರಾಮದ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಮಧುಮೇಹ ನಿಯಂತ್ರಣ ಕುರಿತು ವಿಶೇಷ ಶಿಬಿರ ಹಮ್ಮಿಕೊಳ್ಳಲಾಗಿತ್ತು   

ಅಫಜಲಪುರ: ‘ಆಯುರ್ವೇದವು 5 ಸಾವಿರ ವರ್ಷಗಳಿಗಿಂತಲೂ ಹಳೆಯದಾದ, ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವ ಭಾರತೀಯ ಜ್ಞಾನವಾಗಿದೆ. ಇದು ನೈಸರ್ಗಿಕ ಮೂಲಿಕೆಗಳು, ಯೋಗ ಮತ್ತು ಜೀವನಶೈಲಿ ಬದಲಾವಣೆಗಳ ಮೂಲಕ ರೋಗಗಳನ್ನು ತಡೆಗಟ್ಟುವ ಸಮಗ್ರ ವೈದ್ಯಕೀಯ ಪದ್ಧತಿಯಾಗಿದೆ’ ಎಂದು ವೈದ್ಯಾಧಿಕಾರಿ ಡಾ.ಶ್ರೀಶೈಲ ಪಾಟೀಲ ತಿಳಿಸಿದರು.

ತಾಲ್ಲೂಕಿನ ಬಳೂರ್ಗಿ ಗ್ರಾಮದಲ್ಲಿ ಶನಿವಾರ ಆಯುಷ್ಮಾನ್ ಆರೋಗ್ಯ ಮಂದಿರದಿಂದ ಮಧುಮೇಹ ನಿಯಂತ್ರಣದ ಕುರಿತು ಏರ್ಪಡಿಸಲಾಗಿದ್ದ ವಿಶೇಷ ಶಿಬಿರದಲ್ಲಿ ಮಾತನಾಡಿದರು.

ಘತ್ತರಗಿ ಗ್ರಾಮದ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯೆ ಪ್ರಮೋದಾದೇವಿ ಅವರು ಮಾತನಾಡಿ, ‘ಭೂಮಿಯ ಮೇಲೆ ಬೆಳೆಯುವ ಪ್ರತಿಯೊಂದು ಸಸಿಗಳು ಒಂದೊಂದು ಕಾಯಿಲೆ ವಾಸಿ ಪಡಿಸಲು ಉಪಯೋಗವಾಗುತ್ತವೆ. ಆದ್ದರಿಂದ ಪ್ರತಿಯೊಬ್ಬರು ಪ್ರತಿನಿತ್ಯ ಆಹಾರದಲ್ಲಿ ಸಿರಿಧಾನ್ಯ ಹಾಗೂ ತರಕಾರಿಗಳು ಬಳಸಬೇಕು’ ಎಂದರು.

ADVERTISEMENT

‘ಬಳೂರ್ಗಿ ಗ್ರಾಮದಲ್ಲಿ ಮೂರು ತಿಂಗಳ ಕಾಲ ಶಿಬಿರ ನಡೆಯಲಿದೆ’ ಎಂದು ಸರ್ಕಾರಿ ಆಯುರ್ವೇದಿಕ ಆಸ್ಪತ್ರೆ ಬಳೂರ್ಗಿ ವೈದ್ಯಾಧಿಕಾರಿ ಡಾ.ಶ್ರೀಶೈಲ ಪಾಟೀಲ ಮಾಹಿತಿ ನೀಡಿದರು.

ನಂತರ ಆಯುರ್ವೇದ ಆಸ್ಪತ್ರೆಯ ಯೋಗ ಶಿಕ್ಷಕಿ ಪ್ರಭಾವತಿ ಮೇತ್ರಿ ಅವರು ಮಾತನಾಡಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಕ್ಕರೆ ಕಾಯಿಲೆ ರೋಗಿಗಳಿಗೆ ಪರೀಕ್ಷೆ ಮಾಡಿ, ಅವರಿಗೆ ಆಹಾರ ಪದ್ಧತಿ, ಯೋಗದ ಬಗ್ಗೆ ತಿಳಿಸಿಕೊಡಲಾಯಿತು.

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಹಣಮಯ್ಯ ಗುತ್ತೇದಾರ, ಮುಖಂಡರಾದ ಶಿವಾನಂದ ಸ್ಥಾವರಮಠ, ಬಸಣ್ಣ ನಾವಿ, ನೆಹರು ಮಠಪತಿ, ವಿಜಯಕುಮಾರ ಪಾಟೀಲ, ಸುರೇಶ್ ಕ್ಷತ್ರಿ, ಶಿವಯ್ಯ ಗುತ್ತೇದಾರ, ಶ್ರೀಶೈಲ ಮೇತ್ರಿ , ಪ್ರತಿಭಾ ಮಹೇಂದ್ರಕರ ಸೇರಿದಂತೆ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.