ADVERTISEMENT

ಕೋಲಿ ಸಮಾಜದ ವಿಚಾರದಲ್ಲಿ ಮಾತು ತಪ್ಪಿದ ಚಿಂಚನಸೂರ ನೇಣಿಗೇರಲಿ: ಪ್ರಿಯಾಂಕ್‌ ಖರ್ಗೆ

ಕೋಲಿ ಸಮಾಜವನ್ನು ಎಸ್ಟಿಗೆ ಸೇರಿಸದ್ದಕ್ಕೆ ವಿಧಾನ ‍ಪರಿಷತ್‌ ಸದಸ್ಯ ಕಮಕನೂರು ಮಾತಿನೇಟು

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2019, 10:19 IST
Last Updated 3 ನವೆಂಬರ್ 2019, 10:19 IST
ವಾಡಿ ಸಮೀಪದ ಹಲಕರ್ಟಿಯಲ್ಲಿ ಶನಿವಾರ ಅಂಬಿಗರ ಚೌಡಯ್ಯ ಮೂರ್ತಿ ಲೋಕಾರ್ಪಣೆ ಸಮಾರಂಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಹಲಕರ್ಟಿ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ಇದ್ದರು
ವಾಡಿ ಸಮೀಪದ ಹಲಕರ್ಟಿಯಲ್ಲಿ ಶನಿವಾರ ಅಂಬಿಗರ ಚೌಡಯ್ಯ ಮೂರ್ತಿ ಲೋಕಾರ್ಪಣೆ ಸಮಾರಂಭದಲ್ಲಿ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ತಿಪ್ಪಣ್ಣಪ್ಪ ಕಮಕನೂರು, ಹಲಕರ್ಟಿ ಕಟ್ಟಿಮನಿ ಹಿರೇಮಠದ ಮುನೀಂದ್ರ ಶಿವಾಚಾರ್ಯರು ಇದ್ದರು   

ವಾಡಿ: ‘ಬಿಜೆಪಿ ಅಧಿಕಾರಕ್ಕೆ ಬಂದರೆ ಕೋಲಿ ಸಮಾಜವನ್ನು ಒಂದು ತಿಂಗಳಲ್ಲಿ ಎಸ್‌ಟಿಗೆ ಸೇರಿಸದೇ ಇದ್ದಲ್ಲಿ ನನ್ನನ್ನು ನೇಣಿಗೆ ಹಾಕಿ' ಎಂದು ಮಾಜಿ ಸಚಿವ ಬಾಬುರಾವ ಚಿಂಚನಸೂರು ಚುನಾವಣೆಗೂ ಮುನ್ನ ಹೇಳಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳಾಗಿವೆ. ಆದರೂ ಅವರ ಭರವಸೆ ಈಡೇರಿಲ್ಲ. ಸುಳ್ಳು ಹೇಳುವವರನ್ನು ನಂಬಿ ಮೋಸ ಹೋಗಬೇಡಿ ಎಂದು ವಿಧಾನ ಪರಿಷತ್ತಿನ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಹೇಳಿದರು.

ಸಮೀಪದ ಹಲಕರ್ಟಿ ಗ್ರಾಮದಲ್ಲಿ ಅಂಬಿಗರ ಚೌಡಯ್ಯನವರ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಬಾಬುರಾವ ಚಿಂಚನಸೂರು ಅವರು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಮಾತಿಗೊಮ್ಮೆ ನನ್ನ ಎದೆ ಸೀಳಿದರೆ ಅಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರೇ ಕಾಣಿಸುತ್ತಾರೆ ಎಂದು ಸಮಾಜದವರಿಗೆ ಹೇಳುತ್ತಿದ್ದರು. ಮುಗ್ಧ ಜನರು ಅವರ ಮಾತನ್ನು ನಂಬಿ ಕೆಟ್ಟರು. ಚಿಂಚನಸೂರು ಅವರು ಇಷ್ಟು ವರ್ಷ ಅಧಿಕಾರದ ರುಚಿ ಅನುಭವಿಸಿದ್ದಾರೆ. ಈಗ ಮತ್ತೆ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದಾರೆ. ಬೇರೊಬ್ಬರಿಗೆ ಅಧಿಕಾರ ಕೊಟ್ಟು ಉಳಿದವರನ್ನು ಬೆಳೆಸಬೇಕೆನ್ನುವ ಪದ್ಧತಿ ಅವರಲ್ಲಿ ಇಲ್ಲ' ಎಂದು ಕಿಡಿ ಕಾರಿದರು.

ADVERTISEMENT

ಶಾಸಕ ಪ್ರಿಯಾಂಕ್ ಖರ್ಗೆ ಅವರು ಮೂರ್ತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ‘ ಅಂಬಿಗರ ಚೌಡಯ್ಯ ನಿಗಮ ಸ್ಥಾಪನೆಯ ಕೀರ್ತಿ ವಾಸ್ತವವಾಗಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು. ಅಂಬಿಗರ ಚೌಡಯ್ಯ ನಿಗಮ ಸ್ಥಾಪನೆಯ ಮೂಲಕ ಆ ಸಮಾಜದ ಸಣ್ಣ ಪುಟ್ಟ ಉಪ ಜಾತಿಗಳನ್ನು ಸೇರಿಸಿ ಅಭಿವೃದ್ಧಿಪಡಿಸಲು ಕಾಂಗ್ರೆಸ್ ಯತ್ನಿಸಿದರೆ
ಬಿಜೆಪಿ ಅದನ್ನು ಕೋಲಿ ಸಮಾಜ ಅಭಿವೃದ್ಧಿ ನಿಗಮ ಮಂಡಳಿ ಎಂದು ಪುನರ್ ನಾಮಕರಣ ಮಾಡಿ ಜನರ ಒಗ್ಗಟ್ಟನ್ನು ಮುರಿಯಲು ಪ್ರಯತ್ನಿಸುತ್ತಿದೆ’ ಎಂದು ಹೇಳಿದರು.

‘ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ಎರಡು ಬಾರಿ ತಿರಸ್ಕರಿಸಿದೆ. ಜನರು ಪ್ರಬುದ್ಧತೆ ಬೆಳೆಸಿಕೊಂಡರೆ ಜಾತಿ ರಾಜಕೀಯ ಮಾಡುವವರ ನಿಜ ಬಣ್ಣ ಬಯಲಿಗೆ ಬರಲಿದೆ’ ಎಂದರು.

ಮಾಜಿ ಶಾಸಕ ಶರಣಪ್ರಕಾಶ ಪಾಟೀಲ ಮಾತನಾಡಿ, ‘ಕೇಂದ್ರ ಸರ್ಕಾರ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಿ’ ಎಂದರು.

ಮುಖಂಡ ಕೆ.ಬಿ ಶಾಣಪ್ಪ, ಅಂಬಿಗರ ಚೌಡಯ್ಯ ಗುರುಪೀಠದ ಹಾವೇರಿಯ ಶಾಂತ ಬೀಷ್ಮ ಚೌಡಯ್ಯ ಸ್ವಾಮಿ, ಕಾಗಿನೆಲೆ ಮಹಾಸಂಸ್ಥಾನ ಪೀಠದ ಸಿದ್ದರಾಮನಂದಪುರ ಸ್ವಾಮಿ, ಚಿತ್ತಾಪುರ ಕಂಬಳೇಶ್ವರ ಮಠದ ಸೋಮಶೇಖರ ಶಿವಾಚಾರ್ಯ, ಮುಗುಳನಾಗಾವ ಸಿದ್ದಲಿಂಗ ಸ್ವಾಮಿಗಳು ಮಾತನಾಡಿದರು.

ಕಟ್ಟಿಮನಿ ಹಿರೇಮಠದ ಮುನೀಂದ್ರ ಸ್ವಾಮಿ, ಮುಖಂಡರಾದ ಭೀಮಣ್ಣ ಸಾಲಿ, ಮಹೇಮೂದ್ ಸಾಹೇಬ, ಶರಣಪ್ಪ ಮಾನೇಗಾರ, ವೀರಣ್ಣಗೌಡ ಪರಸರೆಡ್ಡಿ, ಶ್ರೀನಿವಾಸ ಸಗರ, ತಿಪ್ಪಣ್ಣ ಬಳಬಟ್ಟಿ, ಜಿಪಂ ಸದಸ್ಯ ಶಿವಾನಂದ ಪಾಟೀಲ, ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪೊಲೀಸ್ ಪಾಟೀಲ್, ಸಾಬಣ್ಣ ಮುಸ್ಲಾ, ಹಲಕರ್ಟಿ ಗ್ರಾಪಂ ಅಧ್ಯಕ್ಷೆ ನಾಗಮ್ಮ ಸುಣಗಾರ, ನಾಗಣ್ಣ ಮುಗುಟಿ, ಕರಣಪ್ಪ ಇಸಬಾ, ಅಶೋಕ ಛತ್ರಿಕಿ, ಜಗದೀಶ ಸಿಂಧಿಯಾ, ಮಲ್ಲಿಕಾರ್ಜುನ ಕಟ್ಟಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.