
ಕಾಳಗಿ: ದೇವಾಂಗ ಸಮಾಜದ ಕುಲದೇವತೆ ಇಲ್ಲಿನ ಬನಶಂಕರಿದೇವಿ ರಥೋತ್ಸವ ಶನಿವಾರ ರಾತ್ರಿ 8.30ಕ್ಕೆ ವೈಭವದಿಂದ ನೆರವೇರಿತು. ಬನದಹುಣ್ಣಿಮೆಯ ಈ ದಿನ ಪಟ್ಟಣದಲ್ಲಿ ಜಾತ್ರೆಯ ಕಳೆಕಟ್ಟಿ ಭಕ್ತರು ಸಡಗರ ಸಂಭ್ರಮದಲ್ಲಿ ತೇಲಾಡಿದರು. ದೇವಸ್ಥಾನದಲ್ಲಿ ಕುಂಭ ಹಾಕಿ, ಮುತ್ತೈದೆಯರಿಗೆ ಉಡಿ ತುಂಬಲಾಯಿತು.
ಬೆಳಿಗ್ಗೆಯಿಂದ ಭಕ್ತರು ದೇವಿಯ ಗುಡಿಗೆ ಬರಲಾರಂಭಿಸಿ ನೈವೇದ್ಯ, ಕಾಯಿಕರ್ಪೂರ ಸಲ್ಲಿಸಿ ಭಕ್ತಿಭಾವ ಮೆರೆದರು.
ಸಂಜೆಯಾಗುತ್ತಿದ್ದಂತೆ ಹಲಗೆ, ಡೊಳ್ಳು, ಭಾಜಾ-ಭಜಂತ್ರಿ ವಾದ್ಯಮೇಳದೊಂದಿಗೆ ಪುರವಂತರು ಸಹಿತ ಮೆರವಣಿಗೆ ಸಾಗಿ ದೇವಾಂಗ ಮಠದಿಂದ ಕುಂಭ, ಕಳಸ, ಮಿಣಿ ಹೊತ್ತು ಬಂದರು.
ದೇವಿಗೆ ಮಹಾಮಂಗಳಾರತಿ ಮಾಡಿ ಪುರವಂತರು ಸೇವೆ ಸಮರ್ಪಿಸಿದರು. ಹೂಹಾರಗಳ ಅಲಂಕೃತ ತೇರಿಗೆ ಪ್ರದಕ್ಷಿಣೆ ಹಾಕಿ ಕಳಸಾರೋಹಣ ಮಾಡಿದರು.
ಪುರವಂತರ ಕುಣಿತ ಮುಗಿಯುತ್ತಿದ್ದಂತೆ ಪಟಾಕಿ ಸದ್ದು ಆಕರ್ಷಿಸಿತು. ಉತ್ತತ್ತಿನಾರು, ಬಾಳೆಹಣ್ಣು, ಹೂವು ತೇರಿನ ಮೇಲೆ ತೂರಿಬಂದು ಜೈಘೋಷ ಮೊಳಗಿ ಭಕ್ತರು ತೇರು ಎಳೆದು ಕೃತಾರ್ಥರಾದರು. ವಿವಿಧೆಡೆಯಿಂದ ಆಗಮಿಸಿದ ಅಪಾರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಮಾಡಿ ಧನ್ಯರಾದರು.
ಸ್ಥಳೀಯ ಹಿರೇಮಠದ ನೀಲಕಂಠ ಮರಿದೇವರು, ದೇವಾಂಗಮಠದ ಶಂಕ್ರಯ್ಯಸ್ವಾಮಿ ಸೇರಿದಂತೆ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗಣ್ಯರು ಅನೇಕರು ಇದ್ದರು. ಪಿಎಸ್ಐ ತಿಮ್ಮಯ್ಯ ಬಿ.ಕೆ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಜಾತ್ರೆ ನಿಮಿತ್ತ ಭಾನುವಾರ (ಡಿ.28) ದೀಪೋತ್ಸವ, ಧ್ವಜಾರೋಹಣ ಜರುಗಿತು. ಐದುದಿನ ರಾತ್ರಿ ಶಿವಶಂಕರ ಬಿರಾದಾರ, ರೇವಣಸಿದ್ದ ದೇಸಾಯಿ ಕಲ್ಲೂರ ಅವರಿಂದ ಪ್ರವಚನ. ಪಲ್ಲಕ್ಕಿ ಮೆರವಣಿಗೆ ಸಾಗಿತು.
ಇಂದು (ಜ.4) ಬೆಳಿಗ್ಗೆ 10 ಗಂಟೆಯಿಂದ ಸಂಜೆ 6ರ ವರೆಗೆ ಪ್ರಮುಖ ರಸ್ತೆಗಳಲ್ಲಿ ದೇವಿಯ ವಿಶೇಷ ಪಲ್ಲಕ್ಕಿ ಉತ್ಸವ ಮೇಳೈಸಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.